ADVERTISEMENT

ಅನ್ನಭಾಗ್ಯ ಅಕ್ರಮ ತಡೆಗಟ್ಟಿ: ಶಿವಮೂರ್ತಿ

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:17 IST
Last Updated 15 ಅಕ್ಟೋಬರ್ 2024, 14:17 IST
ಹೂವಿನಹಡಗಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿದರು
ಹೂವಿನಹಡಗಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿದರು   

ಹೂವಿನಹಡಗಲಿ : ‘ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ರಮಗಳು ಹೆಚ್ಚಾಗಿದ್ದು, ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುರಿ ಶಿವಮೂರ್ತಿ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಉಚಿತ ಪಡಿತರ ನೀಡುತ್ತಿದ್ದರೆ, ನ್ಯಾಯಬೆಲೆ ಅಂಗಡಿಯವರು ಈ ಯೋಜನೆ ಮುಂದಿಟ್ಟುಕೊಂಡು ಫಲಾನುಭವಿಗಳ ಮೇಲೆ ದರ್ಪ ತೋರಿಸುತ್ತಾರೆ. ತೂಕದಲ್ಲಿ ಮೋಸ ಮಾಡಿ ಪಡಿತರ ದುರುಪಯೋಗಪಡಿಸಿಕೊಳ್ಳುತ್ತಾರೆ. ಪ್ರಶ್ನಿಸಿದರೆ ಪಡಿತರ ಚೀಟಿ ರದ್ದುಪಡಿಸುವುದಾಗಿ ಹೆದರಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿಯವರು ದೇವರಂತೆ ವರ್ತಿಸುತ್ತಿದ್ದಾರೆ. ಅನಿರೀಕ್ಷಿತ ಭೇಟಿ ನೀಡಿ ಅಕ್ರಮ ಎಸಗುವವರ ಮೇಲೆ ಕ್ರಮ ಜರುಗಿಸಿ ಎಂದು ಆಹಾರ ನಿರೀಕ್ಷಕರಿಗೆ ತಿಳಿಸಿದರು.

ADVERTISEMENT

ಸಮಿತಿ ಸದಸ್ಯ ಎಲ್.ಚಂದ್ರನಾಯ್ಕ ಮಾತನಾಡಿ, ಭೀತ್ಯಾನತಾಂಡಾದಲ್ಲಿ ಮುಂಚಿತವಾಗೇ ಬಯೋಮೆಟ್ರಿಕ್ ಪಡೆದು ತಿಂಗಳಲ್ಲಿ ಒಂದು ದಿನ ಮಾತ್ರ ಪಡಿತರ ವಿತರಿಸುತ್ತಾರೆ. ಕೂಲಿ ಕೆಲಸಕ್ಕೆ ಹೋದವರಿಗೆ ಆಹಾರಧಾನ್ಯ ಸಿಗುವುದೇ ಇಲ್ಲ. ತೂಕದಲ್ಲಿ ಭಾರೀ ಮೋಸ ಮಾಡುತ್ತಾರೆ. ಇದು ಒಂದು ಊರಿನ ಸಮಸ್ಯೆಯಾಗಿರದೇ ಅಕ್ರಮ ಸಾರ್ವತ್ರಿಕವಾಗಿದೆ. ನ್ಯಾಯಬೆಲೆ ಅಂಗಡಿಗಳ ಮೇಲೆ ನಿಗಾವಹಿಸಿ ಎಂದರು.

‘ಶಕ್ತಿ ಯೋಜನೆಯಡಿ 16 ತಿಂಗಳಲ್ಲಿ ಹೂವಿನಹಡಗಲಿ ಘಟಕದ ಬಸ್ ಗಳಲ್ಲಿ 01,12,18,072 ಮಹಿಳೆಯರು ಪ್ರಯಾಣಿಸಿದ್ದು, ಇದರ ಮೊತ್ತ ₹ 36.01 ಕೋಟಿ ಆಗಿದೆ. ಸಾರಿಗೆ ನಿಗಮಗಳಿಗೆ ಈ ಯೋಜನೆ ಸಂಜೀವಿನಿಯಾಗಿದೆ ಎಂದು ಘಟಕ ವ್ಯವಸ್ಥಾಪಕ ವೆಂಕಟಾಚಲಪತಿ ತಿಳಿಸಿದರು.

ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯ 47,050 ಫಲಾನುಭವಿಗಳಿದ್ದು, ಜೂನ್ ವರೆಗೆ ಒಟ್ಟು ₹ 98.73 ಕೋಟಿ ಪಾವತಿಯಾಗಿದೆ ಎಂದು ಸಿಡಿಪಿಒ ರಾಮನಗೌಡ ಮಾಹಿತಿ ನೀಡಿದರು. ‘ಗೃಹಲಕ್ಷ್ಮಿಯ ಹಣವನ್ನು ಫಲಾನುಭವಿಯ ವೈಯಕ್ತಿಕ ಸಾಲ, ಗುಂಪು ಸಾಲಗಳಿಗೆ ಜಮೆ ಮಾಡದಂತೆ ಬ್ಯಾಂಕ್ ಗಳಿಗೆ ಪತ್ರ ಬರೆಯಿರಿ’ ಎಂದು ಅಧ್ಯಕ್ಷರು ಸೂಚಿಸಿದರು.

ತಾ.ಪಂ. ಇಒ ಎಂ.ಉಮೇಶ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಎಸ್.ಶಾಂತನಗೌಡ, ಸದಸ್ಯ ಗುರುವಿನ ರವೀಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.