ADVERTISEMENT

ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸಿಬ್ಬಂದಿ ನೇಮಕಾತಿ: ಹೊರಬಂದ ‘ಸಂಘರ್ಷ’

ಸುದ್ದಿಗೋಷ್ಠಿಯಿಂದ ಕುಲಸಚಿವೆಯನ್ನು ಹೊರಕಳಿಸಿದ ಕುಲಪತಿ

​ಪ್ರಜಾವಾಣಿ ವಾರ್ತೆ
Published 13 ಮೇ 2019, 11:24 IST
Last Updated 13 ಮೇ 2019, 11:24 IST
ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ಅವರ ಸೂಚನೆ ಮೇರೆಗೆ ಸುದ್ದಿಗೋಷ್ಠಿಯಿಂದ ಹೊರಕ್ಕೆ ನಡೆದ ಕುಲಸಚಿವ ಪ್ರೊ.ಬಿ.ಕೆ.ತುಳಸಿಮಾಲಾ
ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ಅವರ ಸೂಚನೆ ಮೇರೆಗೆ ಸುದ್ದಿಗೋಷ್ಠಿಯಿಂದ ಹೊರಕ್ಕೆ ನಡೆದ ಕುಲಸಚಿವ ಪ್ರೊ.ಬಿ.ಕೆ.ತುಳಸಿಮಾಲಾ   

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 7ನೇ ಘಟಿಕೋತ್ಸವ ಕುರಿತು ಮಾಹಿತಿ ನೀಡಲು ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿದ್ದ ಕುಲಸಚಿವೆ ಪ್ರೊ.ಬಿ.ಕೆ.ತುಳಸಿಮಾಲಾ ಅವರನ್ನು ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ಹೊರಕ್ಕೆ ಕಳಿಸಿದ ಘಟನೆ ನಡೆಯಿತು.

‘ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಬೋಧಕ–ಬೋಧಕೇತರ ಸಿಬ್ಬಂದಿ ನೇಮಕಾತಿ ಸಂಬಂಧ ನನ್ನ ಅಧಿಕಾರವನ್ನು ಕುಲಪತಿ ಮೊಟುಕುಗೊಳಿಸಿದ್ದಾರೆ. ಹೀಗಾಗಿ ನೇಮಕಾತಿಗೂ ನಮ್ಮ ಕಚೇರಿಗೂ ಸಂಬಂಧವಿಲ್ಲ’ ಎಂದು ಪ್ರೊ.ತುಳಸಿಮಾಲಾ ಸಿಬ್ಬಂದಿ ನೇಮಕಾತಿ ಸಮಿತಿ ಅಧ್ಯಕ್ಷ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ರಮೇಶ್‌ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಲು ಮುಂದಾದಾಗ ಕುಲಸಚಿವೆಯನ್ನು ಕುಲಪತಿ ಹೊರಕ್ಕೆ ಕಳಿಸಿದರು.

‘ಕುಲಪತಿಯ ಅಧಿಕಾರದ ಅವಧಿ ಆರು ತಿಂಗಳಿಗಿಂತ ಕಡಿಮೆ ಇರುವಾಗ ನೇಮಕಾತಿಯಂಥ ಪ್ರಮುಖ ನಿರ್ಧಾರ ಕೈಗೊಳ್ಳಬಾರದು ಎಂಬ ಅಂಶವನ್ನು ಕುಲಪತಿಯವರ ಗಮನಕ್ಕೆ ತಂದಿದ್ದೆ’ ಎಂದು ಕುಲಸಚಿವೆ ಹೇಳುತ್ತಿದ್ದಂತೆಯೇ ಅವರೆಡೆಗೆ ತಿರುಗಿದ ಕುಲಪತಿ, ಮಾತನಾಡದೇ ಇರುವಂತೆ ಸೂಚಿಸಿದರು.

ADVERTISEMENT

ನಂತರ ‘ನಿಮ್ಮ ಬಗ್ಗೆಯೇ ಈಗ ಸುದ್ದಿಗಾರರಿಗೆ ಉತ್ತರಿಸಬೇಕಾಗಿದೆ. ನೀವು ಸುದ್ದಿಗೋಷ್ಠಿಯಲ್ಲಿದ್ದರೆ ಸಂಪೂರ್ಣವಾಗಿ ಏನನ್ನೂ ಹೇಳಲು ಆಗುವುದಿಲ್ಲ. ನೀವು ಹೊರಕ್ಕೆ ಹೋಗಿ’ ಎಂದು ಸೂಚಿಸಿದರು. ‘ಕುಲಪತಿಯವರು ಸೂಚಿಸಿದ್ದರಿಂದ ನಾನು ಹೊರಕ್ಕೆ ಹೋಗುತ್ತಿರುವೆ’ ಎಂದ ಕುಲಸಚಿವೆ ತಮ್ಮ ಅಭಿಪ್ರಾಯವನ್ನು ಮೊಟುಕುಗೊಳಿಸಿ ಕೂಡಲೇ ಅಲ್ಲಿಂದ ನಿರ್ಗಮಿಸಿದರು.

‘ಕುಲಪತಿಯ ಅಧಿಕಾರದ ಅವಧಿ ಆರು ತಿಂಗಳಿಗಿಂತ ಮುಂಚೆ ಇರುವುದರಿಂದ ನೇಮಕಾತಿ ನಡೆಸಬಾರದು ಎಂದು ಕುಲಸಚಿವೆ ಪಟ್ಟು ಹಿಡಿದಿದ್ದರು, ಆದರೆ ಈಗ ನಡೆಯುತ್ತಿರುವುದು 2018ರಲ್ಲಿ ಆರಂಭವಾದ ನೇಮಕಾತಿ ಪ್ರಕ್ರಿಯೆ ಎಂದು ಹೇಳಿದರೂ ಒಪ್ಪಿರಲಿಲ್ಲ. ಅವರನ್ನು ಹೊರಗಿಟ್ಟು ನೇಮಕಾತಿ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೂಚಿಸಿದರು. ಹೀಗಾಗಿ, ಕುಲಸಚಿವೆ ರಜೆಯಲ್ಲಿದ್ದಾಗ, ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯ ಪರಿಚ್ಛೇದ 15(5) ಬಳಸಿ ಅಧಿಕಾರವನ್ನು ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ರಮೇಶ್‌ ಅವರಿಗೆ ವಹಿಸಲಾಗಿತ್ತು. ನಂತರ ಅಧಿಕಾರವನ್ನು ನೀಡಿದರೂ ಅವರು ವಹಿಸಿಕೊಳ್ಳಲಿಲ್ಲ. ಆಡಳಿತದಲ್ಲಿ ಅವರಿಗೆ ಅನುಭವ ಸಾಲದು’ ಎಂದು ಕುಲಪತಿ ಹೇಳಿದರು.

‘ನೇಮಕಾತಿ ನೇತೃತ್ವ ವಹಿಸುವಂತೆ ಪರಿಪರಿಯಾಗಿ ಕೇಳಿಕೊಂಡರೂ ಕುಲಸಚಿವೆ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಕುಲಪತಿ ಸೂಚನೆಯಂತೆ ನಾನೇ ನೇತೃತ್ವ ವಹಿಸಿರುವೆ’ ಎಂದು ಪ್ರೊ.ಕೆ.ರಮೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.