ADVERTISEMENT

ಸಾಮೂಹಿಕ ನಾಯತ್ವದ ಮಂತ್ರ

ಎಲ್ಲರೂ ಒಟ್ಟಾಗಿ ಈಶಾನ್ಯ ಪದವೀದರ ಕ್ಷೇತ್ರ ಗೆಲ್ಲುತ್ತೇವೆ ಎಂದು ಸಚಿವ ಬಿ.ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 25 ಮೇ 2024, 15:37 IST
Last Updated 25 ಮೇ 2024, 15:37 IST

ಬಳ್ಳಾರಿ: ‘ಎಲ್ಲ ಚುನಾವಣೆಗಳಂತೇ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯನ್ನೂ ಸಾಮೂಹಿಕ ನಾಯಕತ್ವದಲ್ಲಿ ಗೆಲ್ಲಲಿದ್ದೇವೆ’ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು. 

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರನ್ನು ಎಲ್ಲರೂ ಒಟ್ಟಾಗಿ ಶ್ರಮಿಸಿ ಗೆಲ್ಲಿಸಿಕೊಂಡು ಬರುವುದಾಗಿ ತಿಳಿಸಿದರು.  

‘ಚಂದ್ರಶೇಖರ ಪಾಟೀಲ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಪ್ರಚಾರ ಮುಗಿಸಿದ್ದಾರೆ. ಕಳೆದ ಬಾರಿ ಅವರು ಉತ್ತಮ ಸೇವೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ 42 ಕ್ಷೇತ್ರಗಳ ಪೈಕಿ 27ರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಇದು ನಮಗೆ ಇರುವ ದೊಡ್ಡ ಶಕ್ತಿ. ನಾವು ಈ ಚುನಾವಣೆಯಲ್ಲೂ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಗೆಲ್ಲುತ್ತೇವೆ’ ಎಂದರು.

ADVERTISEMENT

‘ಎದುರಾಳಿಗಳು (ಬಿಜೆಪಿ) ಏನು ಮಾಡುತ್ತಾರೊ ನಮಗೆ ಗೊತ್ತಿಲ್ಲ. ಅವರು ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ನಮ್ಮ ಪಕ್ಷ ಒಂದು ಶಕ್ತಿಯಾಗಿ ಬಿಜೆಪಿಯನ್ನು ಸೋಲಿಸಲಿದೆ’ ಎಂದರು.  

ಬಳ್ಳಾರಿಯಲ್ಲಿ ಚಂದ್ರಶೇಖರ ಪಾಟೀಲ ತಡವಾಗಿ ಪ್ರಚಾರ ಆರಂಭಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಾಗೇಂದ್ರ, ‘ನಾವು ಈಗಾಗಲೇ ಕೆಲಸ ಆರಂಭಿಸಿದ್ದೇವೆ.  ಇದು ಬೇರೆ ಚುನಾವಣೆಗಳಂತಲ್ಲ. ಪದವೀಧರರನ್ನು ತಲುಪುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ನನ್ನ ಜವಾಬ್ದಾರಿಯೂ ಹೆಚ್ಚಿದೆ’ ಎಂದರು. 

ಬಳ್ಳಾರಿಯವರಿಗೆ ಟಿಕೆಟ್‌ ಕೊಡುವುದಿಲ್ಲ ಏಕೆ ಎಂಬ ಪ್ರಶ್ನೆಗೆ, ‘ಕೇಶವ ರೆಡ್ಡಿ ಅವರಿಗೆ ಒಮ್ಮೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡಲಾಗಿತ್ತು. ಆ ಜಿಲ್ಲೆ–ಈ ಜಿಲ್ಲೆ ಎಂಬ ಮಾತು ಇಲ್ಲಿ ಬರುವುದಿಲ್ಲ. ಇದು ಪಕ್ಷದ ನಿರ್ಧಾರ. ರಾಜ್ಯಸಭೆಯಲ್ಲಿ ತೀವ್ರ ಪೈಪೋಟಿ ಇದ್ದರೂ, ನಾಸಿರ್‌ ಹುಸೇನ್‌ ಅವರಿಗೆ ಅವಕಾಶ ನೀಡಲಾಗಿದೆ’ ಎಂದು ಸಮಜಾಯಿಷಿ ನೀಡಿದರು. 

ಪ್ರತಾಪ್‌ ರೆಡ್ಡಿ ಪಕ್ಷದಿಂದ ಹೊರಕ್ಕೆ

ಪ್ರತಾಪ್‌ ರೆಡ್ಡಿ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು,  ‘ಪ್ರತಾಪ್‌ ರೆಡ್ಡಿ ನಮ್ಮ ಪಕ್ಷದಲ್ಲಿದ್ದರು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದರು. ಈಗ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರನ್ನು ಪಕ್ಷದಿಂದ ತೆಗೆಯಲಾಗಿದೆ. ರಾಜ್ಯ ಘಟಕದ ಅಧ್ಯಕ್ಷರೇ ಆದೇಶ ಮಾಡಿದ್ದಾರೆ. ಅವರು ಟಿಕೆಟ್‌ ಕೇಳಿದ್ದರು. ಆದರೆ ಚಂದ್ರಶೇಖರ್‌ ಪಾಟೀಲರಿಗೆ ನೀಡಲಾಗಿದೆ. ನಮ್ಮ ಅಧಿಕೃತ ಅಭ್ಯರ್ಥಿ ಪರವಾಗಿ ನಾವು ಕೆಲಸ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.  

ಶಾಸಕ ತುಕಾರಾಂ ಮಾತನಾಡಿ, ‘ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ನಾವು ಚುನಾವಣೆ ಎದುರಿಸುತ್ತೇವೆ. ಸಂವಿಧಾನದ  371(ಜೆ) ಕಲಂ ತಿದ್ದುಪಡಿ ಮಾಡಿದ್ದು ನಾವು. ಇದರ ಬಲ ನಮಗಿದೆ. ಇದರಿಂದ ನಮ್ಮ ಭಾಗದ ಜನರಿಗೆ  ಅನುಕೂಲವಾಗಿದೆ. ಜತೆಗೆ ಸಿದ್ದರಾಮಯ್ಯ ಸರ್ಕಾರ ಐದು ಸಾವಿರ ಕೋಟಿಯನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿದ್ದಾರೆ. ಇದು ಜನರ ಮನಸ್ಸಿನಲ್ಲಿದೆ. ಈ ಚುನಾವಣೆಯನ್ನು ನಾವು ಗೆಲ್ಲುತ್ತೇವೆ’ ಎಂದರು.  

ಅಭ್ಯರ್ಥಿ ‌ಚಂದ್ರಶೇಖರ ಪಾಟೀಲ ಮಾತನಾಡಿ, ‘ಈಶಾನ್ಯ ಪದವೀಧರ ಕ್ಷೇತ್ರ ಅತಿ ದೊಡ್ಡ ಕ್ಷೇತ್ರ. 1.75 ಲಕ್ಷ ಮತದಾರರಿದ್ದಾರೆ. ಬಳ್ಳಾರಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ನಾನು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡವನು. ಹೀಗಾಗಿ ಈ ಕ್ಷೇತ್ರದ ಜನರ ಸಮಸ್ಯೆ ಗೊತ್ತಿದೆ. ಎನ್‌ಪಿಎಸ್‌ ಬದಲಿಗೆ ಒಪಿಎಸ್‌ ಜಾರಿಗೆ ಬರಬೇಕೆಂಬ ಬೇಡಿಕೆ ಇದೆ. ಅದಕ್ಕಾಗಿ ಶ್ರಮಿಸಲಾಗುವುದು.  371(ಜೆ) ಕಾರಣದಿಂದ ಈ ಭಾಗದ ಶಿಕ್ಷಣ ರಂಗ ಅಭಿವೃದ್ಧಿಯಾಗಿದೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಕಾರಣರು. ಹೀಗಾಗಿ ಇಲ್ಲಿ ಕಾಂಗ್ರೆಸ್‌ಗೆ ಬಲವಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.