ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿದಿದ್ದು, ಶುಕ್ರವಾರ ಕೆಲ ಪಕ್ಷಗಳ ಅಭ್ಯರ್ಥಿಗಳು ಮತಗಳ ಗಣಿತದಲ್ಲಿ ತೊಡಗಿದರೆ, ಕೆಲವರು ಕುಟುಂಬದೊಂದಿಗೆ ಕಾಲ ಕಳೆದರು.
ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್, ಜೆ.ಡಿ.ಎಸ್.ನ ಎನ್.ಎಂ. ನಬಿ ಅವರು ನಗರದ ಪಕ್ಷದ ಕಚೇರಿಯಲ್ಲಿ ಔಪಚಾರಿಕ ಸಭೆ ನಡೆಸಿದರು. ಚುನಾವಣೆಯಲ್ಲಿ ಕೆಲಸ ನಿರ್ವಹಿಸಿದ ಮುಖಂಡರು, ಕಾರ್ಯಕರ್ತರು, ಏಜೆಂಟ್‌ರೊಂದಿಗೆ ಆಯಾ ವಾರ್ಡುಗಳಲ್ಲಿ ನಡೆದ ಮತದಾನದ ವಿವರ ಪಡೆದರು.
ಆನಂದ್ ಸಿಂಗ್ ಮಾತನಾಡಿ, ‘ನನ್ನ ಗೆಲುವಿಗಾಗಿ ಮೂರು ವಾರಗಳಿಂದ ಹಗಲಿರುಳು ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಗೆದ್ದ ನಂತರ ಎಲ್ಲರೂ ಕೂಡಿಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡೋಣ’ ಎಂದರು.
‘ಇದು ನನ್ನ ಕೊನೆಯ ಚುನಾವಣೆ. ನನಗೆ ಎಲ್ಲವೂ ಸಿಕ್ಕಿದೆ. ಬರುವ ದಿನಗಳಲ್ಲಿ ಪಕ್ಷದ ಸಂಘಟನೆಗಾಗಿ ಕೆಲಸ ಮಾಡುವೆ. ಹೊಸಬರಿಗೆ ಅವಕಾಶ ಸಿಗಬೇಕು’ ಎಂದು ಹೇಳಿದರು.
ನಬಿ ಅವರು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಕೆಲವೇ ಕೆಲವು ಮುಖಂಡರು, ಕಾರ್ಯಕರ್ತರೊಂದಿಗೆ ಆಪ್ತವಾಗಿ ಚರ್ಚಿಸಿ, ಮತದಾನದ ವಿವರ ಪಡೆದರು. ಮಧ್ಯಾಹ್ನ ಕೂಡ್ಲಿಗಿಗೆ ಪ್ರಯಾಣ ಬೆಳೆಸಿದರು. ಇನ್ನು ವೆಂಕಟರಾವ್ ಘೋರ್ಪಡೆ ಅವರು, ಚುನಾವಣೆಯ ಜಂಜಾಟದಿಂದ ದೂರ ಉಳಿದರು. ಸ್ವಕ್ಷೇತ್ರ ಸಂಡೂರಿನಲ್ಲಿ ಕುಟುಂಬದವರೊಂದಿಗೆ ಕಾಲ ಕಳೆದರು. ಶನಿವಾರ (ಡಿ.7) ನಗರಕ್ಕೆ ಬಂದು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವರು.
ಬಿಜೆಪಿ ವಿರುದ್ಧ ತೊಡೆ ತಟ್ಟಿದ ಕವಿರಾಜ್ ಅರಸ್ ಅವರು, ಕುಟುಂಬ ಸಮೇತರಾಗಿ ಬೆಳಿಗ್ಗೆ ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆದರು. ನಂತರ ತೋಟಕ್ಕೆ ಭೇಟಿ ನೀಡಿ, ದನಕರುಗಳೊಂದಿಗೆ ಕಾಲ ಕಳೆದರು.
ಡಿ. 9ರಂದು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮತ ಎಣಿಕೆ ನಡೆಯಲಿದೆ. ಫಲಿತಾಂಶ ಹೊರಬೀಳಲು ಇನ್ನೆರಡು ದಿನ ಬಾಕಿ ಉಳಿದಿದೆ. ಅದಕ್ಕೂ ಮುನ್ನ ಅಭ್ಯರ್ಥಿಗಳು ಅವರದೇ ಲೆಕ್ಕಾಚಾರ ಮಾಡಿಕೊಂಡು, ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಕ್ಷೇತ್ರದ ಮತದಾರರು ಕೂಡ ಫಲಿತಾಂಶವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ.
*
ರಿಲ್ಯಾಕ್ಸ್ ಮೂಡ್‌ನಲ್ಲಿ ಇರುವ ಸಮಯ ಇದಲ್ಲ. ಆ್ಯಕ್ಟಿವ್ ಆಗಿ ಕೆಲಸ ಮಾಡಬೇಕಾದ ಸಮಯವಿದು.
–ಆನಂದ್ ಸಿಂಗ್, ಬಿಜೆಪಿ ಅಭ್ಯರ್ಥಿ
*
ಶನಿವಾರ ನಗರದಲ್ಲಿ ಸಭೆ ಕರೆದಿದ್ದು, ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವೆ.
–ವೆಂಕಟರಾವ್ ಘೋರ್ಪಡೆ, ಕಾಂಗ್ರೆಸ್ ಅಭ್ಯರ್ಥಿ
*
ಜನ ಉತ್ಸಾಹದಿಂದ ಮತ ಹಾಕಿದ್ದಾರೆ. ಬದಲಾವಣೆ ಬಯಸಿದ್ದಾರೆ. ಗೆಲ್ಲುವ ಆಶಾಭಾವನೆ ಇದೆ.
–ಎನ್.ಎಂ. ನಬಿ, ಜೆ.ಡಿ.ಎಸ್. ಅಭ್ಯರ್ಥಿ
*
ನನ್ನ ಸ್ವಾಭಿಮಾನ, ಧೈರ್ಯ ನೋಡಿ ಜನ ಬೆಂಬಲಿಸಿದ್ದಾರೆ. ಖಂಡಿತವಾಗಿಯೂ ಆಯ್ಕೆಯಾಗುತ್ತೇನೆ.
–ಕವಿರಾಜ್ ಅರಸ್, ಬಿಜೆಪಿ ಬಂಡಾಯ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.