ADVERTISEMENT

ವಿಜಯನಗರ ಉಪಚುನಾವಣೆ | ಆರ್‌ಎಸ್‌ಎಸ್‌ ಮುಖಂಡರು ಅಂತರ ಕಾಯ್ದುಕೊಂಡಿರುವುದೇಕೆ?

2018ರ ವಿಧಾನಸಭೆ, 2019ರ ಲೋಕಸಭೆ ಚುನಾವಣೆಯಲ್ಲಿ ಸಕ್ರಿಯರಾಗಿದ್ದ ಕಾರ್ಯಕರ್ತರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಡಿಸೆಂಬರ್ 2019, 10:47 IST
Last Updated 1 ಡಿಸೆಂಬರ್ 2019, 10:47 IST

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಯ ಪ್ರಚಾರದಿಂದ ಈ ಸಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌.ಎಸ್‌.ಎಸ್‌.) ಮುಖಂಡರು ಸಂಪೂರ್ಣ ಅಂತರ ಕಾಯ್ದುಕೊಂಡಿದ್ದಾರೆ.

ಬಿಜೆಪಿಗಾಗಿಯೇ ನಿಯೋಜಿಸಲಾಗಿರುವ ಆರ್‌.ಎಸ್‌.ಎಸ್‌.ನ ಪೂರ್ಣಾವಧಿ ಕಾರ್ಯಕರ್ತರನ್ನು ಹೊರತುಪಡಿಸಿ ಯಾರೊಬ್ಬರೂ ಚುನಾವಣೆಯಲ್ಲಿ ಸಕ್ರಿಯರಾಗಿಲ್ಲ.

ಈ ಸಲದ ಚುನಾವಣೆಯಿಂದ ಕಾರ್ಯಕರ್ತರು ದೂರವಿರಬೇಕೆಂದು ಆರ್‌.ಎಸ್‌.ಎಸ್‌. ಮುಖಂಡರೇ ಸ್ಥಳೀಯರಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಎಲ್ಲಿಯೂ ಅವರು ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ADVERTISEMENT

ಈ ಹಿಂದಿನಿಂದಲೂ ಸ್ಥಳೀಯ ಶಾಸಕ ಆನಂದ್‌ ಸಿಂಗ್‌ ಹಾಗೂ ಆರ್‌.ಎಸ್‌.ಎಸ್‌. ಮುಖಂಡರ ನಡುವೆ ಹೊಂದಾಣಿಕೆ ಅಷ್ಟಕಷ್ಟೇ ಎಂಬಂತಿದೆ. ಈ ಹಿಂದೆ ಬಿಜೆಪಿಯಲ್ಲಿದ್ದಾಗಲೇ ಪಕ್ಷದ ಫರ್ಮಾನು ಧಿಕ್ಕರಿಸಿ ಸಿಂಗ್‌ ಅವರು ಯಾವಾಗ ಟಿಪ್ಪು ಸುಲ್ತಾನ್‌ ಜಯಂತಿಯಲ್ಲಿ ಭಾಗವಹಿಸಿದರೋ ಅಂದಿನಿಂದ ಸಂಬಂಧ ಹದಗೆಟ್ಟಿದೆ. ಅದಾದ ನಂತರ ಅವರು ಪಕ್ಷ ತೊರೆದು ಕಾಂಗ್ರೆಸ್‌ ಸೇರಿದರು. ಅವರು ಸೇರಿದಂತೆ ಅವರ ಬೆಂಬಲಿಗರು ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಟೀಕಿಸಿದ ನಂತರ ಆ ಕಂದಕ ದೊಡ್ಡದಾಗಿದೆ. ಸಿಂಗ್‌ ಮರಳಿ ಬಿಜೆಪಿಗೆ ಬಂದರೂ ಆ ಕಂದಕ ಹಾಗೆಯೇ ಇದೆ.

ಆನಂದ್‌ ಸಿಂಗ್‌ ಅವರ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಆರ್‌.ಎಸ್‌.ಎಸ್‌. ಮುಖಂಡರು ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿದ್ದಾರೆ. ಈ ವಿಷಯ ಸಂಘದ ಕೇಂದ್ರ ಕಚೇರಿಯ ಪಡಸಾಲೆಗೂ ಹೋಗಿ ತಲುಪಿತ್ತು. ಆದರೆ, ರಾಜ್ಯದಲ್ಲಿ ಸರ್ಕಾರ ರಚನೆಯಲ್ಲಿ ಅಗತ್ಯ ಸಂಖ್ಯೆ ಕಲೆ ಹಾಕುವುದಕ್ಕಾಗಿ ಸಿಂಗ್‌ ಅವರನ್ನು ಬಿಜೆಪಿಯು ಅನಿವಾರ್ಯವಾಗಿ ಪಕ್ಷಕ್ಕೆ ಸೇರಿಸಿಕೊಂಡಿದೆ. ಅದನ್ನು ಬಹಿರಂಗವಾಗಿ ವಿರೋಧಿಸುವುದರ ಬದಲು ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಸಂಘದ ಮುಖಂಡರು ಬಂದಿದ್ದಾರೆ.

‘ಸಂಘಕ್ಕೆ ತನ್ನದೇ ಆದ ಘನತೆ ಇದೆ. ಅದು ತತ್ವ, ಸಿದ್ಧಾಂತ ಬಿಟ್ಟು ನಡೆಯುವುದಿಲ್ಲ. ತಾತ್ಕಾಲಿಕ ಲಾಭಕ್ಕಾಗಿಯೂ ಹಪಹಪಿಸುವುದಿಲ್ಲ. ತತ್ವ, ಸಿದ್ಧಾಂತವಿಲ್ಲದ ಜೆ.ಡಿ.ಎಸ್‌., ಕಾಂಗ್ರೆಸ್‌ನಿಂದ ಹಲವು ಮುಖಂಡರು ಈ ಸಲ ಬಿಜೆಪಿಗೆ ಬಂದಿದ್ದಾರೆ. ಅವರು ಬಿಜೆಪಿಯಲ್ಲಿಯೇ ಕಾಯಂ ಆಗಿ ಉಳಿಯುತ್ತಾರೆ ಎಂಬ ಭರವಸೆಯೂ ಇಲ್ಲ. ಹಾಗಾಗಿ ಅಂತಹವರ ಬೆನ್ನಿಗೆ ನಿಲ್ಲದಂತೆ ಸೂಚನೆ ಬಂದಿದೆ’ ಎಂದು ಹೆಸರು ಹೇಳಲಿಚ್ಛಿಸದ ಆರ್‌.ಎಸ್‌.ಎಸ್‌. ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಜೆಪಿ ಪಕ್ಷದ ಕೆಲಸಕ್ಕಾಗಿಯೇ ಪೂರ್ಣಾವಧಿಗೆ ನಿಯೋಜನೆಗೊಂಡಿರುವ ಬೆರಳೆಣಿಕೆಯಷ್ಟು ಮುಖಂಡರು ಮಾತ್ರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಳೀಯ ಮುಖಂಡರು, ಕಾರ್ಯಕರ್ತರು ಅದರಿಂದ ದೂರ ಉಳಿದಿದ್ದಾರೆ. ತದ್ವಿರುದ್ಧ ವಿಚಾರಧಾರೆಯ ವ್ಯಕ್ತಿಗಳು ಬಿಜೆಪಿಯಿಂದಾಗ ಸ್ಪರ್ಧಿಸಿದಾಗಲೆಲ್ಲ ಸಂಘದ ಈ ರೀತಿ ನಡೆದುಕೊಂಡು ಬಂದಿದೆ. ಇದು ಹೊಸತೇನಲ್ಲ’ ಎಂದು ಹೇಳಿದರು.

2018ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಆರ್‌.ಎಸ್.ಎಸ್‌. ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದರು. 2018ರ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವಾಗ ಎಚ್‌.ಆರ್‌.ಗವಿಯಪ್ಪ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆರ್‌.ಎಸ್‌.ಎಸ್‌. ಕಾರ್ಯಕರ್ತರು ಅವರ ಬೆನ್ನಿಗೆ ನಿಂತು ಹಗಲಿರುಳು ದುಡಿದಿದ್ದರು. ಆದರೂ ಅವರು ಸೋಲು ಅನುಭವಿಸಿದ್ದರು.

2018ರ ನವೆಂಬರ್‌ನಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿಯೂ ಬಿಜೆಪಿ ಸೋಲು ಕಂಡಿತು. ಅದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದ ಸಂಘದ ಕಾರ್ಯಕರ್ತರು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವೈ.ದೇವೇಂದ್ರಪ್ಪ ಅವರನ್ನು ಗೆಲ್ಲಿಸಿಕೊಂಡು ಬರಲು ನಿರ್ಣಾಯಕ ಪಾತ್ರ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.