ಹೊಸಪೇಟೆ (ವಿಜಯನಗರ): ದೀಪದ ಕೆಳಗೆ ಕತ್ತಲು. ಈ ಮಾತು ಅಕ್ಷರಶಃ ವಿಜಯನಗರ/ ಬಳ್ಳಾರಿ ಜಿಲ್ಲೆಗೆ ಅನ್ವಯವಾಗುತ್ತದೆ.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಜೀವನಾಡಿ ತುಂಗಭದ್ರಾ ಜಲಾಶಯ. ಮೂರೂ ರಾಜ್ಯಗಳ 12 ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುತ್ತದೆ. ಅನೇಕ ಕೆರೆ, ಕಟ್ಟೆಗಳಿಗೆ ಮೂಲವಾಗಿದೆ. ಆದರೆ, ಅಣೆಕಟ್ಟೆಯಿರುವ ವಿಜಯನಗರ ಜಿಲ್ಲೆಯ ಕೆರೆಗಳನ್ನೇ ತುಂಬಿಸಲು ಸಾಧ್ಯವಾಗಿಲ್ಲ. ಅಷ್ಟೇಕೆ, ಹೊಸಪೇಟೆ ತಾಲ್ಲೂಕಿನ ಅನೇಕ ಕೆರೆಗಳು ಬರಡಾಗಿವೆ. ಜಲಾಶಯದಿಂದ ಕೂಗಳತೆ ದೂರದಲ್ಲಿರುವ ರಾಯರ ಕೆರೆಯೇ ಇದಕ್ಕೆ ನಿದರ್ಶನ. ಜಲಾಶಯದ ಸುತ್ತಮುತ್ತ ಇಂತಹ ಹಲವು ಕೆರೆಗಳಿವೆ. ಆದರೆ, ಅವುಗಳಿಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ.
ತಾಲ್ಲೂಕಿನ ವೆಂಕಟಾಪುರ ಸಮೀಪ ಏತ ನೀರಾವರಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿ ಪೂರ್ಣಗೊಂಡರೆ 18 ಹಳ್ಳಿಗಳಿಗೆ ಪ್ರಯೋಜನವಾಗಲಿದೆ. ಆದರೆ, ಜಲಾಶಯ ನಿರ್ಮಾಣಗೊಂಡು 75 ವರ್ಷಗಳಾದ ನಂತರ ನಮ್ಮನ್ನಾಳುವವರಿಗೆ ಇದರ ನೆನಪಾಯಿತೇ? ಇಂತಹದ್ದೊಂದು ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 190 ಕೆರೆಗಳಿವೆ. ಈ ಪೈಕಿ 185 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇದರಲ್ಲಿ ಹೆಚ್ಚಿನ ಕೆರೆಗಳ ಜಮೀನು ಒತ್ತುವರಿಯಾಗಿದೆ. ಆದರೆ, ಅವುಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಪ್ರಭಾವಿಗಳು ಇದರಲ್ಲಿ ಸೇರಿರುವುದರಿಂದ ಜಿಲ್ಲಾಡಳಿತ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂಬ ಆರೋಪವಿದೆ. ಇದಕ್ಕೆ ಉತ್ತಮ ಉದಾಹರಣೆ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಕೆರೆ.
ಇನ್ನು, ಸೂಕ್ತ ನಿರ್ವಹಣೆಯಿಲ್ಲದೇ ಗಿಡ, ಗಂಟೆ ಬೆಳೆದು ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ಕೆಲ ಕೆರೆಗಳು ಬಂದಿವೆ. ಮತ್ತೆ ಕೆಲವು ಪುನರುಜ್ಜೀವನಗೊಂಡಿವೆ. ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆಗೆಸಿರುವುದರಿಂದ ಅನೇಕ ಕೆರೆಗಳು ಮರು ಜೀವ ಪಡೆದಿವೆ. ಜಿಲ್ಲೆಯ ಹೂವಿನಹಡಗಲಿಯಲ್ಲಿ ತುಂಗಭದ್ರಾ ನದಿ ಮೂಲಕ ಹೆಚ್ಚಿನ ಕೆರೆಗಳನ್ನು ತುಂಬಿಸಿರುವುದರಿಂದ ಅಲ್ಲಿ ಅಂತರ್ಜಲ ಸಾಕಷ್ಟು ವೃದ್ಧಿಯಾಗಿದೆ. ಅಲ್ಲಿ ಆಗಿರುವ ಕೆಲಸವನ್ನು ಇತರೆ ಜನಪ್ರತಿನಿಧಿಗಳು ಮಾದರಿ ಆಗಿಟ್ಟುಕೊಂಡು ಮಾಡಿದರೆ ಅಲ್ಲೂ ಜಲವೈಭವ ಕಾಣಬಹುದು.
ತುಂಗಭದ್ರಾ ನದಿಗೆ ಹೊಂದಿಕೊಂಡಂತಿರುವ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿಯಲ್ಲಿ ಕೆರೆ ಪುನರುಜ್ಜೀವನಗೊಳಿಸುವ ಕೆಲಸವಾಗಿಲ್ಲ. ಕೊಟ್ಟೂರು, ಕೂಡ್ಲಿಗಿಯಲ್ಲಿ ಅನೇಕ ಕೆರೆಗಳಿವೆ. ಆದರೆ, ಹೇಳಿಕೊಳ್ಳುವಂತಹ ನದಿಗಳು ಆ ಭಾಗದಲ್ಲಿ ಹರಿಯುವುದಿಲ್ಲ. ಮಳೆ ಬಂದರಷ್ಟೇ ಅವುಗಳು ತುಂಬುತ್ತವೆ. ಇನ್ನು, ನಿರ್ವಹಣೆಯ ಕೊರತೆಯಿಂದ ಕೆರೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ.
‘ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ’:
‘ಪ್ರತಿ ವರ್ಷ ಜಲಾಶಯ ತುಂಬಿದಾಗ ನೂರಾರು ಟಿಎಂಸಿ ಅಡಿ ನೀರು ನದಿ ಮೂಲಕ ಹರಿದು ಹೋಗುತ್ತಿದೆ. ಆ ನೀರನ್ನು ಜಿಲ್ಲೆಯ ಕೆರೆ, ಕಟ್ಟೆಗಳನ್ನು ತುಂಬಿಸಬೇಕೆಂದು ಸತತವಾಗಿ ಆಗ್ರಹಿಸುತ್ತಲೇ ಬರಲಾಗಿದೆ. ಆದರೆ, ಯಾವ ಸರ್ಕಾರ ಬಂದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೂ ಇಚ್ಛಾಶಕ್ತಿ ಇಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್ ಆರೋಪಿಸಿದರು.
‘ಆಂಧ್ರ ಪ್ರದೇಶದ ಕಡಪ, ಕರ್ನೂಲು, ಅನಂತಪುರದ ಜಿಲ್ಲೆಗಳಲ್ಲಿ ಇದೇ ತುಂಗಭದ್ರಾ ಅಣೆಕಟ್ಟೆಯಿಂದ ಕಾಲುವೆಗಳ ಮೂಲಕ ಹರಿದು ಬರುವ ನೀರನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲಿನವರಿಗೆ ಕುಡಿಯುವ ನೀರು, ನೀರಾವರಿಯ ಮಹತ್ವದ ಅರಿವಿದೆ. ಆದರೆ, ನಮ್ಮವರಿಗೆ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಮುಖಂಡರ ಭಾಷಣಕ್ಕಷ್ಟೇ ರೈತರು ಸೀಮಿತರಾಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.