ಸಿರುಗುಪ್ಪ: ತಾಲ್ಲೂಕಿನಾದ್ಯಂತ ರಾಜ್ಯ ವಕ್ಫ್ ಮಂಡಳಿಗೆ ಸೇರಿದ ನೂರಾರು ಎಕರೆ ಭೂಮಿ ಬಹುತೇಕ ಪ್ರಭಾವಿಗಳ ಕೈಯ್ಯಲ್ಲಿದ್ದು, ಅನಧಿಕೃತ ಒತ್ತುವರಿ ಹಾಗೂ ಪರಭಾರೆಯಿಂದಾಗಿ ವಕ್ಷ್ ಆಸ್ತಿ ರಕ್ಷಣೆಯೇ ಸವಾಲಾಗಿ ಪರಿಣಮಿಸಿದೆ.
ವ್ಯವಸ್ಥಾಪನ ಸಮಿತಿ ರಚನೆಯೇ ಕಗ್ಗಂಟು: ವಕ್ಫ್ ಆಸ್ತಿ ರಕ್ಷಣೆಗೆ ಇರಬೇಕಾದ ಸ್ಥಳೀಯ ಸಂಸ್ಥೆಗಳ ಆಯ್ಕೆಯೇ ಗಗನ ಕುಸುಮವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ನಗರದ ಜಾಮಿಯಾ ಮಸೀದಿಯ ಸಮಿತಿ ಕಳೆದ 4 ವರ್ಷಗಳಿಂದ ರಚನೆ ಆಗಿಯೇ ಇಲ್ಲ.
‘ಜಾಮಿಯಾ ಮಸೀದಿಯ ಖಾತೆಯಲ್ಲಿ ಸುಮಾರು ₹40 ಲಕ್ಷ ಜಮೆ ಇದೆ. ಅಲ್ಲದೆ ಮಸೀದಿ ಹೆಸರಿನಲ್ಲಿ 129 ಎಕರೆ 27 ಸೆಂಟ್ಸ್ ಭೂಮಿ ಇದ್ದು, ಇದರ ವ್ಯವಸ್ಥಾಪನಾ ಸಮಿತಿ ರಚನೆ ಆಗದೇ ಇರುವುದರಿಂದ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿ ಸುಧಾರಣೆಗೆ ಕೈಗೊಳ್ಳಬಹುದಾದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ' ಎನ್ನುತ್ತಾರೆ ಸಮಾಜದ ಮುಖಂಡ ಚಿಟಗಿ ಹುಸೇನ್ ಸಾಬ್.
ವಕ್ಫ್ ಕಾಯ್ದೆ ಸೆಕ್ಷನ್ 54 (ಒತ್ತುವರಿ)ರಲ್ಲಿ 53 ಪ್ರಕರಣಗಳನ್ನು ದಾಖಲಿಸಲಾಗಿದ್ದು, 4 ಪ್ರಕರಣಗಳ ವಿಲೇವಾರಿ ಆಗಿದೆ. ಈ ಪೈಕಿ 3 ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದು, 50 ಪ್ರಕರಣಗಳು ತನಿಖೆಯ ಹಂತದಲ್ಲಿವೆ. ಸೆಕ್ಷನ್ 54ರ ಎಲ್ಲ ಪ್ರಕರಣಗಳು ವಕ್ಫ್ ಸೆಕ್ಷನ್ 52 (ಪರಭಾರೆ)ರಲ್ಲಿ ದಾಖಲಿಸಬೇಕಾಗಿದೆ. ಇತ್ತೀಚಿಗೆ ಮುದ್ಧಟನೂರು ಗ್ರಾಮದ 1.26 ಎಕರೆ ಹಾಗೂ ಸಿರುಗುಪ್ಪ ಸೌದಾಗರ್ ಮಸೀದಿಯ 5.40 ಸೆಂಟ್ಸ್ ಆಸ್ತಿಯನ್ನು ಮರಳಿ ವಕ್ಫ್‌ಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿ ಹೊಂದಿರುವ ವಕ್ಫ್ ಮಂಡಳಿಯು ತನ್ನ ಅಧಿಕಾರ ವಿಕೇಂದ್ರೀಕರಣಗೊಳಿಸದೆ ಇರುವುದ ರಿಂದ ಪ್ರತಿಯೊಂದು ತೀರ್ಮಾನಕ್ಕೂ ರಾಜ್ಯ ವಕ್ಷ್ ಮಂಡಳಿ ಪರವಾನಿಗೆ ಪಡೆಯಬೇಕಾಗಿದೆ ಇದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ತಾಲ್ಲೂಕು ಮಟ್ಟದಲ್ಲಿ ವಕ್ಷ್ ಕಚೇರಿ ಇಲ್ಲದಿರುವುದು, ಇನ್ನೂ ಆನ್ ಲೈನ್ ಗೆ ಬದಲಾಗದ ಕೇಂದ್ರ ಕಚೇರಿ, ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ, ಅನುಷ್ಠಾನಗೊಳ್ಳದ ‘ಸಕಾಲ’ ಯೋಜನೆ ಇದರಿಂದ ಭೂ ವ್ಯಾಜ್ಯಗಳು ನಿಧಾನಗತಿಯಲ್ಲಿ ಸಾಗಿ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿರುವುದು ಕಂಡುಬರುತ್ತಿದೆ.
ಸಿರುಗುಪ್ಪ ನಗರ ಸೇರಿದಂತೆ ತಾಲ್ಲೂಕಿನ ತೆಕ್ಕಲಕೋಟೆ, ದೇಶನೂರು, ಹಳೇಕೋಟೆ, ಕೆಂಚನಗುಡ್ಡ, ಸಿರಿಗೇರಿ, ಇಡಗಿಹಾಳ್, ನಾಡಂಗ, ಮುದೇನೂರು, ಬಾಗೇವಾಡಿ ಸೇರಿದಂತೆ ವಿವಿಧ ಗ್ರಾಮಗಳ ಒಟ್ಟು 809 ಎಕರೆ 98 ಸೆಂಟ್ಸ್ ವಕ್ಫ್ ಆಸ್ತಿ ಇದ್ದು, ಕೆಲವೆಡೆ ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ.
ಇದರಲ್ಲಿ ಬಹಳಷ್ಟು ವಕ್ಫ್ ಆಸ್ತಿಯನ್ನು ವೈಯಕ್ತಿಕ ಹೆಸರಿಗೆ ಮಾಡಿಕೊಂಡಿರುವವರ ಪ್ರಮಾಣವೇ ಹೆಚ್ಚಾಗಿದೆ. ಇದನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಇಲಾಖೆ ನಿಧಾನಗತಿಯಲ್ಲಿ ಮಾಡುತ್ತಿದೆ.
ವಕ್ಷ್ ಆಸ್ತಿ ಒತ್ತುವರಿ ಹಾಗೂ ಪರಭಾರೆ ಪ್ರಕರಣಗಳನ್ನು ಗುರುತಿಸಲಾಗಿದ್ದು ಯಾರೇ ಪ್ರಭಾವಿಗಳಿರಲಿ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದುಹುಮಾಯೂನ್ ಖಾನ್ಅಧ್ಯಕ್ಷ, ಜಿಲ್ಲಾ ವಕ್ಷ್ ಮಂಡಳಿ, ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.