ADVERTISEMENT

ವಕ್ಫ್‌ ಹೋರಾಟ ಚುನಾವಣೆಗಾಗಿ ಅಲ್ಲ: ಬಿ.ವೈ. ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 9:54 IST
Last Updated 4 ನವೆಂಬರ್ 2024, 9:54 IST
   

ಬಳ್ಳಾರಿ: ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆಯ ಗೆಲುವಿನ ತಂತ್ರವಾಗಿ ‘ವಕ್ಫ್‌’ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೋಮವಾರ ಹೇಳಿದರು.

ರೈತರ ಆಸ್ತಿಗಳಿಗೆ ವಕ್ಫ್‌ ಮಂಡಳಿ ನೀಡಿರುವ ನೋಟಿಸ್‌ ವಿರುದ್ಧ ಬಳ್ಳಾರಿ ನಗರದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ನಿಜಾಮರ ಕಾಲದಲ್ಲಿ ರಜಾಕಿಗಳು ಜನರನ್ನು ಲೂಟಿ ಮಾಡುತ್ತಿದ್ದರು. ಅದೇ ರೀತಿ ರೈತರ 15 ಸಾವಿರ ಎಕರೆಯಷ್ಟು ಜಮೀನನ್ನು ಕಸಿಯುವ ಪ್ರಯತ್ನ ಕಾಂಗ್ರೆಸ್‌ ಮಾಡುತ್ತಿದೆ. ಸರ್ಕಾರದ ಈ ನಡೆ ವಿರುದ್ಧ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ’ ಎಂದರು.

‘ಜಮೀರ್‌ ಎಂಬ ದೇಶದ್ರೋಹಿ ಮೂಲಕ ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ಬೆದರಿಸಿ ರೈತರ ಜಮೀನುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ವಿರಕ್ತ ಮಠದ ಜಮೀನು ವಕ್ಫ್‌ಗೆ ಹೋಗುವಂತಾಗಿದೆ. ಕೊಪ್ಪಳದಲ್ಲಿ ದಲಿತರ ಜಮೀನು ಕಬಳಿಸಲಾಗುತ್ತಿದೆ. ಕಲಬುರಗಿಯ ಸವಳೇಶ್ವರ ಗ್ರಾಮದ ಬೀರೇಶ್ವರ ದೇಗುಲದ ಜಮೀನನ್ನು ವಕ್ಫ್‌ ಆಸ್ತಿ ಎಂದು ಗುರುತಿಸಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಮತ್ತು ಜಮೀರ್‌ ಕಾರಣ’ ಎಂದರು.

ADVERTISEMENT

‘ವಕ್ಫ್‌ ತಿದ್ದುಪಡಿ ಕಾಯಿದೆ ಸಂಸದೀಯ ಸಮಿತಿಯ ಮುಂದೆ ಇದೆ. ಪ್ರಧಾನಿ ನರೇಂದ್ರ ಮೋದಿ ಏನಾದರೂ ಈ ಕಾನೂನು ಜಾರಿಗೆ ತಂದರೆ, ರೈತರಿಂದ ಜಮೀನು ಪಡೆಯುವುದು ಕಷ್ಟ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ದೇವರು ನಿಮ್ಮ ಎಲ್ಲ ಕೆಲಸ ನೋಡುತ್ತಿದ್ದಾನೆ. 99 ತಪ್ಪುಗಳನ್ನು ಸಿದ್ದರಾಮಯ್ಯ ಈಗಾಗಲೇ ಮಾಡಿದ್ದಾರೆ. 100ನೇ ತಪ್ಪು ಮಾಡಿದ ಕೂಡಲೇ ಕಾಂಗ್ರೆಸ್‌ ಸರ್ಕಾರದ ಸಂಹಾರ ಆಗುತ್ತದೆ’ ಎಂದು ವಾಗ್ದಾಳಿ ನಡೆಸಿದರು.

‘ವಕ್ಫ್‌ ಆಸ್ತಿಯನ್ನು ಕಾಂಗ್ರೆಸ್‌ನ ಪುಡಾರಿಗಳೇ ಕಬಳಿಸಿದ್ದಾರೆ. ಮುಖ್ಯಮಂತ್ರಿ ಪ್ರಾಮಾಣಿಕರಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ’ ಎಂದೂ ಅವರು ಸವಾಲು ಹಾಕಿದರು.

‘ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಬಿಜೆಪಿ ಸುಮ್ಮನೆ ಕೂರುವುದಿಲ್ಲ. ಕಾರಜೋಳ ಅವರ ಸತ್ಯಶೋಧನಾ ಸಮಿತಿ ವರದಿ ನಮ್ಮ ಕೈಸೇರಿದೆ. ನ್ಯಾಯವಾದಿಗಳ ತಂಡವನ್ನೂ ಪಕ್ಷ ರಚನೆ ಮಾಡಿದೆ. ಯಾವುದೇ ರೈತರಿಗೆ ಅನ್ಯಾಯವಾಗಿದ್ದಲ್ಲಿ ವಕೀಲರ ತಂಡವನ್ನು ಸಂಪರ್ಕಿಸಬಹುದು. ಒಂದು ಇಂಚು ಜಾಗ ವಕ್ಫ್‌ಗೆ ಹೋಗಲು ಬಿಜೆಪಿ ಬಿಡುವುದಿಲ್ಲ. ನಾವು ರೈತರ ಪರ ಇರಲಿದ್ದೇವೆ’ ಎಂದು ಅವರು ಇದೇ ವೇಳೆ ಹೇಳಿದರು.

ಮೌಖಿಕ ಆದೇಶ ಸಾಲದು: ಕಾರಜೋಳ

ಸಂಸದ ಗೋವಿಂದ ಕಾರಜೋಳ ಮಾತನಾಡಿ, ‘ವಕ್ಫ್‌ ತಿದ್ದುಪಡಿ ಕಾಯಿದೆ –2024’ ಅನ್ನು ಸಂಸತ್‌ನಲ್ಲಿ ಮಂಡಿಸಲು ಮೋದಿ ಅವರು ಮುಂದಾದಾಗ ಕಾಂಗ್ರೆಸ್‌ ಪ್ರತಿಭಟಿಸಿತು. ಅದನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿದೆ. ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ಸಿದ್ದರಾಮಯ್ಯ ಜಮೀರ್‌ ಮೂಲಕ ರೈತರ ಆಸ್ತಿ ಕಬಳಿಸಿಲು ಮುಂದಾಗಿದ್ದಾರೆ’ ಎಂದರು.

‘ತಾಯಿಯ ತಾಳಿಗೂ ಕಾಂಗ್ರೆಸ್‌ ಕೈ ಹಾಕುತ್ತದೆ ಎಂದು ಮೋದಿ ಎಚ್ಚರಿಕೆ ಕೊಡುತ್ತಲೇ ಬಂದಿದ್ದರು. ಇಂದು ಜಮೀನುಗಳು ವಕ್ಫ್‌ ಆಸ್ತಿಯಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ 1.20 ಲಕ್ಷ ಎಕರೆ ಇದ್ದ ವಕ್ಫ್‌ ಜಮೀನು, ಈಗ 9 ಲಕ್ಷ ಎಕರೆಗೆ ಏರಿದೆ. ಇದೇನು ದಾನವಾಗಿ ಸಿಕ್ಕಿದ್ದಾ, ಖರೀದಿಸಲಾಗಿದ್ದ. ಇದರ ಬಗ್ಗೆ ಕಾಂಗ್ರೆಸ್ಸಿಗರು ಉತ್ತರ ಕೊಡಬೇಕು’ ಎಂದರು.

‘ನೋಟಿಸ್‌ ಹಿಂಪಡೆಯುವುದಾಗಿ ಸಿಎಂ ಮೌಖಿಕ ಆದೇಶ ನೀಡಿದರೆ ಸಾಲದು. ಕಾನೂನು ರೀತಿ ಆದೇಶ ಮಾಡಬೇಕು. ಎಲ್ಲ ಕಾನೂನು ಪ್ರಕ್ರಿಯೆ ಮಾಡಿ, ಪಹಣ ತಿದ್ದುಪಡಿ ಮಾಡಿ ರೈತರಿಗೆ ನೀಡಬೇಕು‘ ಎಂದು ಒತ್ತಾಯಿಸಿದರು.

ಬಳ್ಳಾರಿಯಲ್ಲಿ 4 ಸಾವಿರ ಎಕರೆಗೆ ನೋಟಿಸ್‌: ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ‘ಬಳ್ಳಾರಿಯಲ್ಲೂ 4 ಸಾವಿರ ಎಕರೆ ಭೂಮಿಗೆ ನೋಟಿಸ್‌ ನೀಡಲಾಗಿದೆ. ಹೈದರಾಬಾದ್‌ನ ಅಸಾದುದ್ದೀನ್‌ ಒವೈಸಿ ಅವರಂತಾಗಲು ಜಮೀರ್‌ ಅಹಮದ್‌ ಪ್ರಯತ್ನಿಸುತ್ತಿದ್ದಾರೆ. ಅವರನನ್ನು ಗಡಿಪಾರು ಮಾಡಬೇಕು’ ಎಂದರು.

‘ರೈತರ ಬಾಯಲ್ಲಿ ಮಣ್ಣು ಹಾಕಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ರೈತರ ಶಾಪದಿಂದಲೇ ಕಾಂಗ್ರೆಸ್‌ ತೊಲಗಿ ಹೋಗಲಿದೆ’ ಎಂದರು.

ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮತ್ತಿತರರು ಈ ವೇಳೆ ಇದ್ದರು.

ತಾವಿದ್ದಲ್ಲಿಗೇ ಡಿಸಿ ಕರೆಸಿಕೊಂಡ ವಿಜಯೇಂದ್ರ

‘ಇಲ್ಲಿ ಯಾರೂ ರೌಡಿಗಳಿಲ್ಲ, ಪುಡಾರಿಗಳಿಲ್ಲ. ಎಲ್ಲರೂ ರೈತರೇ ಬನ್ನಿ’ ಎಂದು ಹೇಳಿ ತಾವಿದ್ದಲ್ಲಿಗೇ ಬಳ್ಳಾರಿ ಜಿಲ್ಲಾಧಿಕಾರಿಯನ್ನು ಕರೆಸಿಕೊಂಡ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮನವಿ ಪತ್ರವನ್ನು ಅವರ ಕೈಗೆ ನೀಡಿದರು.

ಸಂಘ, ಸಂಸ್ಥೆಗಳು ಪ್ರತಿಭಟನೆ ನಡೆಸಿದರೆ ಜಿಲ್ಲಾಧಿಕಾರಿಗಳ ಕಚೇರಿಗೇ ತೆರಳಿ ಮನವಿ ಪತ್ರ ಸಲ್ಲಿಸುವುದು ವಾಡಿಕೆ. ಆದರೆ, ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಬಂದಿದ್ದ ಕಾರಣಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಪ್ರತಿಭಟನಾ ಸ್ಥಳಕ್ಕೇ ತೆರಳಿದ್ದರು. ಕಚೇರಿ ಆವರಣದ ಕಟ್ಟೆಯ ಮೇಲೆ ನಿಂತಿದ್ದ ವಿಜಯೇಂದ್ರ ಅವರನ್ನು ಕೆಳಗಿಳಿದು ಬರುವಂತೆ ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾಧಿಕಾರಿ ಮಾತಿಗೆ ಆಕ್ರೋಶಗೊಂಡ ವಿಜಯೇಂದ್ರ, ‘ಇಲ್ಯಾರೂ ರೌಡಿಗಳಿಲ್ಲ, ಪುಡಾರಿಗಳಿಲ್ಲ ಬನ್ನಿ’ ಎಂದು ಹೇಳಿದರು. ಮರುಮಾತಾಡದೇ ಕಟ್ಟೆಯ ಬಳಿಗೇ ತೆರಳಿದ ಜಿಲ್ಲಾಧಿಕಾರಿ ಮನವಿ ಪತ್ರ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.