ಸಂಡೂರು: ಹಲವು ವರ್ಷಗಳಿಂದ ನೀರಿಲ್ಲದೆ ಖಾಲಿಯಾಗಿದ್ದ ಇಲ್ಲಿನ ಧರ್ಮಾಪುರದ ಈಶ್ವರ ದೇವಸ್ಥಾನದ ಕಲ್ಯಾಣಿಯಲ್ಲಿ ಜೀವಸೆಲೆ ಉಕ್ಕಿದೆ. ಉತ್ತಮ ಮಳೆಯಿಂದಾಗಿ 15ರಿಂದ 20 ಅಡಿ ವರೆಗೆ ನೀರು ಸಂಗ್ರಹಗೊಂಡಿದೆ.
ಸೂಕ್ತ ರಕ್ಷಣೆ ಹಾಗೂ ಪೋಷಣೆ ಇಲ್ಲದೆ ಬಾವಿಯು ಶಿಥಿಲಾವಸ್ಥೆಗೆ ತಲುಪಿತ್ತು. ಹಿಂದಿನ ವರ್ಷ ಸ್ಥಳೀಯ ಶ್ರೀಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ (ಎಸ್‍ಕೆಎಂಇ) ಕಂಪನಿಯರು ₹8.70 ಲಕ್ಷ ವೆಚ್ಚದಲ್ಲಿ ಬಾವಿಯಲ್ಲಿನ ಹೂಳನ್ನು ತೆಗೆಸಿದ್ದರು. ಶಿಥಿಲಾ ವಸ್ಥೆಗೆ ತಲುಪಿದ್ದ ಬಾವಿಯ ಕಟ್ಟಡವನ್ನು ಭದ್ರಗೊಳಿಸಿ, ಸುತ್ತಲೂ ತಂತಿ ಬೇಲಿ ಹಾಕಿಸಿ ರಕ್ಷಣೆ ಒದಗಿಸಿದ್ದರು.
ಜಿಲ್ಲೆಯ ಮಠಾಧೀಶರ ಧರ್ಮ ಪರಿಷತ್‍ನ ವಿವಿಧ ಮಠಗಳ ಸ್ವಾಮೀಜಿಗಳು ಬಾವಿಯ ಹೂಳನ್ನು ತೆಗೆದು ಸ್ವಚ್ಛಗೊಳಿಸಿದ್ದರು.
ಕಲ್ಯಾಣಿಯ ಸನಿಹದಲ್ಲಿನ ನಾರಿಹಳ್ಳ ಮೈದುಂಬಿ ಹರಿಯುತ್ತಿದೆ. ಒಂದೆಡೆ ನಾರಿಹಳ್ಳದ ಸೆಲೆ, ಮತ್ತೊಂದೆಡೆ ಮಳೆಯ ನೀರು ಬಾವಿಯನ್ನು ಸೇರಿ ಅಲ್ಲಿನ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತಿವೆ. ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವುದು
ಗ್ರಾಮಸ್ಥರಲ್ಲಿ ಸಂತಸ ಉಂಟು ಮಾಡಿದೆ. ನೀರಿನ ಪ್ರಮಾಣ ಹೆಚ್ಚಳವನ್ನು ಕಣ್ತುಂಬಿಕೊಳ್ಳಲು ಸಮೀಪದ ಗ್ರಾಮಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
‘ನಾರಿಹಳ್ಳ ಮೈದುಂಬಿರುವು ದರಿಂದ ಅದರ ಸೆಲೆಯಿಂದಾಗಿ ಕಲ್ಯಾಣಿಯಲ್ಲಿ ಪ್ರತಿದಿನ ಒಂದರಿಂದ ಎರಡು ಅಡಿ ನೀರು ಹೆಚ್ಚಾಗುತ್ತಿದೆ. ಬಾವಿಯನ್ನು ಪುನರುಜ್ಜೀವನಗೊಳಿಸಿದ್ದು ಅನುಕೂಲವಾಗಿದೆ’ ಎನ್ನುತ್ತಾರೆ ಧರ್ಮಾಪುರದ ಉಗ್ರಪ್ಪ ಹಾಗೂ ಎಸ್‍ಕೆಎಂಇ ಕಂಪನಿಯ ಅಬ್ದುಲ್ ವಹಾಬ್. ಜೀರ್ಣೋದ್ಧಾರದ ಬಳಿಕ ಧರ್ಮಾಪುರದ ಕಲ್ಯಾಣಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವುದಕ್ಕೆ ಗ್ರಾಮದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.