ADVERTISEMENT

ತೆಕ್ಕಲಕೋಟೆ | ಪಾಚಿಗಟ್ಟಿದ ನೀರು: ಸಾಂಕ್ರಾಮಿಕ ರೋಗ ಭೀತಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 5:22 IST
Last Updated 23 ಮಾರ್ಚ್ 2024, 5:22 IST
ಮೈಲಾಪುರ ಗ್ರಾಮದ ನೀರಿನ ಕೆರೆ ಪಾಚಿಗಟ್ಟಿದ್ದು ಇದೇ ನೀರನ್ನು ಕುಡಿಯಲು ಪೂರೈಕೆ ಮಾಡಲಾಗುತ್ತಿದೆ
ಮೈಲಾಪುರ ಗ್ರಾಮದ ನೀರಿನ ಕೆರೆ ಪಾಚಿಗಟ್ಟಿದ್ದು ಇದೇ ನೀರನ್ನು ಕುಡಿಯಲು ಪೂರೈಕೆ ಮಾಡಲಾಗುತ್ತಿದೆ   

ತೆಕ್ಕಲಕೋಟೆ: 'ಕುಡಿಯುವ ನೀರು ಸಂಗ್ರಹಕ್ಕಾಗಿ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಗೆ ಜನವರಿ ತಿಂಗಳಿನಿಂದಲೂ ವಂತಿಕೆ ಪ್ರಕಾರ ನೀರು ಹರಿಸಲಾಗುತ್ತಿದ್ದರೂ, ಕೆರೆಗಳಿಗೆ ನೀರು ತುಂಬಿಸದ ಸ್ಥಳೀಯ ಆಡಳಿತಗಳಿಂದಾಗಿ ತಾಲ್ಲೂಕಿನ ಬಹುತೇಕ ಕೆರೆಗಳು ಮಾರ್ಚ್ ಅಂತ್ಯಕ್ಕೆ ಖಾಲಿಯಾಗುವ ಲಕ್ಷಣ ಕಂಡು ಬರುತ್ತಿದ್ದು ನೀರಿನ ಬವಣೆ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣ ಇದೆ.

ಪಟ್ಟಣದ ಸಮೀಪದ ಉಪ್ಪಾರ ಹೊಸಳ್ಳಿ ಬಹುಗ್ರಾಮ ಕುಡಿಯುವ ನೀರು ಒದಗಿಸುವ ಕರೆಯಿಂದ ಬಲಕುಂದಿ, ಮೈಲಾಪುರ, ಬಾಲಾಜಿ ಕ್ಯಾಂಪ್ ನ 14 ಸಾವಿರ ಜನ ವಸತಿಗೆ ಸರಬರಾಜು ಮಾಡುವ ಈ ಕೆರೆಯಲ್ಲಿ ಕೇವಲ 20 ದಿನಗಳಿಗೆ ಆಗುವಷ್ಟು ಮಾತ್ರ ನೀರು ಸಂಗ್ರಹ ಇದೆ. ಇದರಿಂದಾಗಿ ಗ್ರಾಮಗಳಲ್ಲಿ 8 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಮೈಲಾಪುರ ಹಾಗೂ ಬೂದುಗುಪ್ಪ ಕೆರೆಗಳ ನೀರು ಪಾಚಿಗಟ್ಟಿದ್ದು, ಅದೇ ನೀರನ್ನು ಕುಡಿಯಲು ಬಳಸುತ್ತಿರುವುರಿಂದ ಸಾಂಕ್ರಾಮಿಕ ರೋಗದ ಭೀತಿಯೂ ಆವರಿಸಿದೆ. ಮೈಲಾಪುರ ಗ್ರಾಮದಲ್ಲಿ ಎರಡು ಕೊಳವೆಬಾವಿಗಳು ಇದ್ದು, ಒಂದು ಕೆಟ್ಟಿದೆ. ಕುಡಿಯುವ ನೀರಿಗಾಗಿ ಜನ ಕೆರೆಯ ಬಳಿಯ ಟ್ಯಾಂಕ್‌ನಿಂದ ನೀರು ಪಡೆಯಬೇಕಾಗಿದ್ದು, ಸಾರ್ವಜನಿಕವಾಗಿ ನಳಗಳಿಗೆ ನೀರು ಪೂರೈಕೆ ನಿಲ್ಲಿಸಲಾಗಿದೆ.

ADVERTISEMENT

ಕೂಗಳತೆ ದೂರದಲ್ಲಿ ವೇದಾವತಿ (ಹಗರಿ) ನದಿ ಇದ್ದು, ಈ ಬಾರಿ ಸಂಪೂರ್ಣ ಬತ್ತಿಹೋಗಿದೆ. ನದಿಯಲ್ಲಿ ಕೊರೆಯಲಾದ ಕೊಳವೆಬಾವಿಗಳ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಇತ್ತ ನದಿ ನೀರು ಇಲ್ಲ ಅತ್ತ ಬೋರ್ ವೆಲ್ ನೀರು ಸಿಗದೆ 'ಸಮುದ್ರದ ನಂಟು ಉಪ್ಪಿಗೆ ಬರ' ಎಂಬಂತಾಗಿದೆ.

ಉಪ್ಪಾರ ಹೊಸಳ್ಳಿ ಗ್ರಾಮದ ಕೆರೆಯ ಪಕ್ಕದ ನೀರು ಶುದ್ದೀಕರಣ ಘಟಕದ ತೊಟ್ಟಿಗಳು ಪಾಚಿಗಟ್ಟಿರುವುದು
ಕೆರೆಯ ನೀರು ತಳಮಟ್ಟಕ್ಕೆ ತಲುಪಿದ್ದು ಇದೇ ನೀರನ್ನು ಬಿಡುತ್ತಿದ್ದಾರೆ. ನೀರು ಮಣ್ಣಿನ ವಾಸನೆಯಿಂದ ಕೂಡಿದೆ
ಪ್ರಹ್ಲಾದ ಉಪ್ಪಾರ, ಹೊಸಳ್ಳಿ ಗ್ರಾಮಸ್ಥ
ದಿನಬಳಕೆ ನೀರಿಗೆ ಯಾವುದೇ ತೊಂದರೆ ಆಗಬಾರದು ಎಂದು ಹಗರಿ ನದಿಯಲ್ಲಿ 7 ಕೊಳವೆಬಾವಿ ಕೊರೆಸಲಾಗಿದ್ದು ಎರಡರಲ್ಲಿ ನೀರು ಸಿಕ್ಕಿದೆ ಜತೆಗೆ ಎರಡು ಖಾಸಗಿ ಕೊಳವೆಬಾವಿಗಳಿಂದಲೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ
ಬಿ.ಎಂ.ಸುನೀತ ರುದ್ರಮುನಿ, ಅಧ್ಯಕ್ಷೆ ಬಲಕುಂದಿ ಗ್ರಾಮ ಪಂಚಾಯಿತಿ
ಮಾರ್ಚ್ 21 ರಿಂದ ತುಂಗಭದ್ರಾ ಬಾಗೇವಾಡಿ ಕಾಲುವೆಗೆ ನೀರು ಸರಬರಾಜು ಮಾಡುವ ಬಗ್ಗೆ ಮೇಲಾಧಿಕಾರಿಗಳು ತಿಳಿಸಿದ್ದು ನೀರು ಬಿಟ್ಟಲ್ಲಿ ಕೆರೆ ತುಂಬಿಸಲು ಪ್ರಯತ್ನಿಸಲಾಗುವುದು
ನಾಗಮಣಿ, ಅತ್ತಲಿ ಪಿಡಿಒ
ತಾಲ್ಲೂಕಿನಾದ್ಯಂತ 36 ಕೆರೆಗಳು ಇವೆ. ಇದರಲ್ಲಿ 4 ಕೆರೆಗಳು ಮಾತ್ರ ತುಂಬಿದ್ದು ಉಳಿದ 32 ಕೆರೆಗಳಿಗೆ ತುಂಗಭದ್ರಾ ಕಾಲುವೆಯ ಬಾಗೇವಾಡಿ ಉಪ ಕಾಲುವೆಗೆ ನೀರು ಬಿಟ್ಟಲ್ಲಿ ತುಂಬಿಸಲು ಕ್ರಮ ಕೈಗೊಳ್ಳಲಾಗುವುದು
-ರವೀಂದ್ರ ನಾಯ್ಕ್ ಎಇಇ ಸಿರುಗುಪ್ಪ

ಕೆರೆಗೆ ನೀರು ತುಂಬಿಸದೇ ನಿರ್ಲಕ್ಷ್ಯ: ಆರೋಪ

'ನೀರಾವರಿ ಸಲಹಾ ಸಮಿತಿ ಸಭೆಯಲ್ಲಿನ ತೀರ್ಮಾನದಂತೆ ಬೇಸಿಗೆಯಲ್ಲಿ ತುಂಗಭದ್ರಾ ಕೆಳಮಟ್ಟದ ಕಾಲುವೆಗೆ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ 10 ದಿನಗಳಿಗೊಮ್ಮೆ 100 ಕ್ಯೂಸೆಕ್‌ನಂತೆ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸಲು ನೀರು ಬಿಡಲಾಗುತ್ತಿದೆ. ಆದರೆ ತಾಲ್ಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆಯಿಂದಾಗಿ ಕೆರೆ ಕಟ್ಟೆಗಳು ಖಾಲಿಯಾಗಿ ಜನ ಅಲ್ಲದೆ ಜಾನುವಾರುಗಳಿಗೂ ನೀರಿನ ಬವಣೆ ತಪ್ಪಿಲ್ಲ ಎನ್ನುವಂತಾಗಿದ್ದು ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಏಳುವ ಲಕ್ಷಣ ಗೋಚರಿಸುತ್ತಿದೆ.

'ಕೆರೆಯ ಸುತ್ತ ಯಾವುದೇ ಸುತ್ತು ಗೋಡೆಯಾಗಲಿ ಇಲ್ಲವೆ ತಂತಿ ಬೇಲಿ ಇಲ್ಲದಿರುವುದರಿಂದ ನೀರಿನ ದುರ್ಬಳಕೆ ಆಗುತ್ತಿದೆ. ಜಿಲ್ಲಾ ಪಂಚಾಯಿತಿ ಸಿಇಒ ಬಂದಾಗ ಅವರ ಗಮನಕ್ಕೆ ತರಲಾಗಿದ್ದು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಗ್ರಾಮಸ್ಥರು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.