ADVERTISEMENT

ನದಿಗೆ ನೀರು | ಭತ್ತದ ನಾಟಿ ಚುರುಕು: 35 ಸಾವಿರ ಹೆಕ್ಟೇರ್ ಗುರಿ

ಚಿಕ್ಕೋಬನಹಳ್ಳಿ ಚಾಂದ್ ಬಾಷ
Published 27 ಜುಲೈ 2024, 3:31 IST
Last Updated 27 ಜುಲೈ 2024, 3:31 IST
ತೆಕ್ಕಲಕೋಟೆ ಸಮೀಪದ ಮಾಳಾಪುರ ಗ್ರಾಮದಲ್ಲಿ ಭತ್ತದ ನಾಡಿಯಲ್ಲಿ ತೊಡಗಿರುವ ಮಹಿಳೆಯರು
ತೆಕ್ಕಲಕೋಟೆ ಸಮೀಪದ ಮಾಳಾಪುರ ಗ್ರಾಮದಲ್ಲಿ ಭತ್ತದ ನಾಡಿಯಲ್ಲಿ ತೊಡಗಿರುವ ಮಹಿಳೆಯರು   

ತೆಕ್ಕಲಕೋಟೆ: ಈ ಬಾರಿಯ ಮುಂಗಾರು ರೈತರಿಗೆ ಆಶಾದಾಯಕವಾಗಿದ್ದು, ಎರಡನೆ ಬೆಳೆಗೆ ನೀರು ಒದಗಿಸುವ ಭರವಸೆ ಮೂಡಿದೆ. ಜತೆಗೆ ತುಂಗಭದ್ರಾ ಜಲಾಶಯ ತುಂಬಿ ನಾಲೆಗೆ ನೀರು ಬಿಟ್ಟಿದ್ದು ರೈತರ ಉತ್ಸಾಹ ಇಮ್ಮಡಿಗೊಳಿಸಿದೆ.

ಪಂಪ್‌ಸೆಟ್ ಹಾಗೂ ಮಳೆಗೆ ಸಸಿಮಡಿ ಹಾಕಿ ಭೂಮಿ ಸಿದ್ದಪಡಿಸಿಕೊಂಡಿದ್ದ ನದೀಪಾತ್ರದ ಎಂ.ಸೂಗೂರು, ಮಣ್ಣೂರು, ನಡಿವಿ, ರುದ್ರಪಾದ, ನಿಟ್ಟೂರು, ಉಡೇಗೋಳ, ಕೆಂಚನಗುಡ್ಡ ಗ್ರಾಮಗಳಲ್ಲಿ ಭತ್ತದ ನಾಟಿ ಕಾರ್ಯ ಜೋರಾಗಿದೆ.

ಸಸಿಗೆ ಹೆಚ್ಚಿದ ಬೇಡಿಕೆ: ತಿಂಗಳ ಹಿಂದೆಯೆ ಪಂಪ್‌ಸೆಟ್ ಮೂಲಕ ಸಸಿಮಡಿ ಹಾಕಿ ಸಸಿ ಬೆಳೆಸಿದ್ದ ರೈತರಿಗೆ ನದಿಗೆ ನೀರು ಬಂದಿರುವ ಹಿನ್ನಲೆಯಲ್ಲಿ ಭಾರಿ ಬೇಡಿಕೆ ಉಂಟಾಗಿದೆ. ಒಂದು ಸೆಂಟ್ಸ್ ಸಸಿಗೆ ₹1500 ಇದ್ದು ಎಕರೆಗೆ 2 ಸೆಂಟ್ಸ್ ಬೇಕಾಗುತ್ತದೆ. ಸಸಿ ನಾಟಿ ಹಾಗೂ ಬಾಜು ಮಾಡಲು ₹3200 ಕೂಲಿ ನಡೆಯುತ್ತಿದೆ. ಈಗಾಗಲೇ ಸುಮಾರು 6 ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಭತ್ತದ ನಾಟಿ ಕಾರ್ಯ ಮುಗಿದಿದ್ದು, ಉಳಿದ ರೈತರು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

ಕಾಲುವೆಗೆ ನೀರು: ಈ ಬಾರಿ ತಾಲ್ಲೂಕಿನಾದ್ಯಂತ ವಾಡಿಕೆಯಂತೆ 30.2 ಸೆಂ.ಮೀ ಮಳೆ ಆಗಬೇಕಾಗಿತ್ತು ಆದರೆ 24.3 ಸೆಂ.ಮೀ ಮಳೆಯಾಗಿದ್ದು, ಶೇ 19 ಕೊರತೆ ನಡುವೆಯೂ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಈ ಬಾರಿ ಕಾಲುವೆಗೆ ಜುಲೈ 20ಕ್ಕೆ ನೀರು ಬಿಡಲಾಗಿದೆ. ರೈತರು ಭೂಮಿ ಹದಗೊಳಿಸಿದ್ದು ಭತ್ತ ನಾಟಿ ಮಾಡಲು ಅಣಿಯಾಗಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 60,735 ಹೆಕ್ಟೇರ್ ಪ್ರದೇಶ ಲಭ್ಯವಿದೆ. ಅದರಲ್ಲಿ 40,686 ಹೆಕ್ಟೇರ್ ನೀರಾವರಿ ಹಾಗೂ 20,049 ಹೆಕ್ಟೇರ್ ಖುಷ್ಕಿ ಪ್ರದೇಶ ಹೊಂದಿದ್ದು, ಈ ಬಾರಿಯ ಮಳೆಗೆ 24,565 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಸೂರ್ಯಕಾಂತಿ, ಮುಸುಕಿನ ಜೋಳ, ಜೋಳ, ಸಜ್ಜೆ, ನವಣೆ, ಮೆಣಸಿನ ಕಾಯಿ, ಹತ್ತಿ, ಕಬ್ಬು ಸೇರಿದಂತೆ ಈಗಾಗಲೇ ಶೇ.83ರಷ್ಟು ಬಿತ್ತನೆಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ತಾಲ್ಲೂಕಿನಾದ್ಯಂತ ತುಂಗಭದ್ರಾ ಅಚ್ಚುಕಟ್ಟು ಭಾಗದಲ್ಲಿ ಭತ್ತವನ್ನು ಹೆಚ್ಚು ಬೆಳೆಯಲಾಗುತ್ತದೆ. ತಾಲ್ಲೂಕಿನಲ್ಲಿ 35,142 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷ ಭತ್ತ ನಾಟಿಯ ಗುರಿ ಹೊಂದಲಾಗಿದೆ. ನದಿದಂಡೆ ಗ್ರಾಮಗಳ ರೈತರು ಪಂಪ್‌ಸೆಟ್ ನೀರಾವರಿ ಮೂಲಕ ಈಗಾಗಲೇ ಭತ್ತದ ಸಸಿ ನಾಟಿ ಮಾಡಿದ್ದಾರೆ. ಇಲ್ಲಿ ಶೇ 20ರಷ್ಟು ನಾಟಿ ಕಾರ್ಯ ಪೂರ್ಣಗೊಂಡಿದೆ.

‘ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಿದ್ದು ರೈತರಿಗೆ ಖುಷಿಯಾಗಿದೆ, ಜಲಾಶಯ ಭರ್ತಿಯಾಗಿದ್ದು ಈ ಬಾರಿ ಎರಡು ಬೆಳೆಗೆ ಅನುಕೂಲವಾಗುವ ವಿಶ್ವಾಸ ಇದೆ' ಎಂದು ರೈತ ಮುಖಂಡ ವಾ.ಹುಲುಗಪ್ಪ ಹರ್ಷ ವ್ಯಕ್ತಪಡಿಸಿದರು.

ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಸಸಿಮಡಿ ಹಾಕಿರುವುದು
ತೆಕ್ಕಲಕೋಟೆ ಸಮೀಪದ ಮಾಳಾಪುರ ಗ್ರಾಮದಲ್ಲಿ ಭತ್ತದ ನಾಡಿಯಲ್ಲಿ ತೊಡಗಿರುವ ಮಹಿಳೆಯರು
ಸಿರುಗುಪ್ಸ ತಾಲ್ಲೂಕಿನ ರೈತರಿಗೆ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಲು ಹತ್ತಿ ತೊಗರಿ ಸಜ್ಜೆಗೆ ಜುಲೈ 31 ಹಾಗೂ ಭತ್ತಕ್ಕೆ ಆಗಸ್ಟ್‌ 14ರವರೆಗೆ ಅವಕಾಶವಿದೆ. ರೈತ ಸಂಪರ್ಕ ಕೇಂದ್ರ ಗ್ರಾಮ ಒನ್ ಇಲ್ಲವೇ ಹತ್ತಿರದ ಬ್ಯಾಂಕ್ ಸಂಪರ್ಕಿಸಿ
–ಎಸ್.ಬಿ ಪಾಟೀಲ್ ಕೃಷಿ ಸಹಾಯಕ ನಿರ್ದೇಶಕ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.