ಹೊಸಪೇಟೆ(ವಿಜಯನಗರ): ‘ಜಗದೀಶ ಶೆಟ್ಟರ್ ಅವರಿಗೆ ಕಾಂಗ್ರೆಸ್ ಪಕ್ಷ ಏನು ಕಡಿಮೆ ಮಾಡಿತ್ತು? ಅಂತಹ ಬಿಜೆಪಿಗೆ ಮತ್ತೆ ಯಾವ ಮುಖ ಇಟ್ಟುಕೊಂಡು ಹೋದ್ರು’ ಎಂದು ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಅವರಿಗೆ ಯಾವ ರೀತಿಯೂ ಅನ್ಯಾಯ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಅಂತಹ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಅವರಿಗೆ ಗೌರವ ಕೊಟ್ಟು ಎಂಎಲ್‍ಸಿ ಮಾಡಿತ್ತು. ಆದರೆ ಮೂರು ತಿಂಗಳಿಗೇ ರಾಜಿನಾಮೆ ಕೊಟ್ಟಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಅವರಿಗೆ ಟಿಕೆಟ್ ಕೊಡಲಾಯಿತು. ಅವರಿಗೆ ತಮ್ಮ ಸ್ವಂತ ಶಕ್ತಿ ಇದ್ದರೆ ಗೆಲ್ಲಬಹುದಾಗಿತ್ತು. ಎಲ್ಲರಿಗಿಂತ ಹೀನಾಯವಾಗಿ ಸೋತಿದ್ದಾರೆ. ಆದರೂ ಪಕ್ಷ ಅವರನ್ನು ಗೌರವದಿಂದ ನಡೆಸಿಕೊಂಡಿದೆ’ ಎಂದು ಜಮೀರ್ ಹೇಳಿದರು.
‘ಶೆಟ್ಟರ್ ಅವರು ಮತ್ತೆ ಬಿಜೆಪಿಗೆ ಹೋಗಿರುವುದು ನನಗೆ ನೋವಾಗಿದ್ದು, ಅವರು ಪಕ್ಷ ಬಿಟ್ಟು ಬಂದ ಮೇಲೆ ಬಿಜೆಪಿಗೆ ಬೈದಷ್ಟು ಹಿಂದೆ ಕಾಂಗ್ರೆಸ್‍ನವರಿಗೂ ಬೈದಿಲ್ಲ’ ಎಂದ ಅವರು, ‘ಶೆಟ್ಟರ್ ಪಕ್ಷ ಬಿಟ್ಟು ಹೋದರು ಎಂದುಕೊಂಡು ಲಕ್ಷ್ಮಣ ಸವದಿ ಅವರು ಪಕ್ಷ ಬಿಟ್ಟು ಹೋಗಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.