ADVERTISEMENT

ಉಪ ಚುನಾವಣೆ ಫಲಿತಾಂಶ: ಸಂಡೂರು ಗೆಲ್ಲೋರು ಯಾರು?

ಆರ್. ಹರಿಶಂಕರ್
Published 23 ನವೆಂಬರ್ 2024, 4:28 IST
Last Updated 23 ನವೆಂಬರ್ 2024, 4:28 IST
ಬಂಗಾರು ಹನುಮಂತ 
ಬಂಗಾರು ಹನುಮಂತ    

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ. ಮತಗಳ ಎಣಿಕೆ ಮಾಡುವುದಕ್ಕೆ ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಎಲ್ಲ ಸಿದ್ಧತೆಯೂ ಆಗಿದೆ.

ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಇ. ಅನ್ನಪೂರ್ಣ, ಬಿಜೆಪಿಯಿಂದ ಬಂಗಾರು ಹನುಮಂತ, ಕರ್ನಾಟಕ ಜನತಾ ಪಕ್ಷದಿಂದ ಅಂಜಿನಪ್ಪ ಎನ್‌., ಪಕ್ಷೇತರರಾಗಿ ಟಿ.ಎಂ.ಮಾರುತಿ, ಟಿ. ಎರ‍್ರಿಸ್ವಾಮಿ, ಎನ್.ವೆಂಕಣ್ಣ ಸ್ಪರ್ಧೆ ಮಾಡಿದ್ದಾರೆ. 

ಕಾಂಗ್ರೆಸ್‌–ಬಿಜೆಪಿ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದ್ದು, ಇಬ್ಬರಲ್ಲಿ ಯಾರು ಮುಂದಿನ ಮೂರೂವರೆ ವರ್ಷಗಳ ಕಾಲ ಸಂಡೂರಿನ ಶಾಸಕರಾಗಲಿದ್ದಾರೆ ಎಂಬ ಸಂಗತಿ ಬಹುತೇಕ ಮಧ್ಯಾಹ್ನದ ಹೊತ್ತಿಗೆ ಬಹಿರಂಗವಾಗಲಿದೆ. 

ADVERTISEMENT

ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,36,402 ಮತದಾರರಿದ್ದು, ಅದರಲ್ಲಿ 1,80,189 ಮತದಾರರು ತಮ್ಮ ಮತದ ಹಕ್ಕನ್ನು ಚಲಾಯಿಸಿದ್ದಾರೆ. 1,17,935 ಪುರುಷ ಮತದಾರರಲ್ಲಿ 90,922 ಪುರುಷರು ಮತ  ಹಾಕಿದ್ದಾರೆ. 1,18,438 ಮಹಿಳಾ ಮತದಾರರಲ್ಲಿ 89,252 ಮಹಿಳೆಯರು ಮತದಾನ ಮಾಡಿದ್ದಾರೆ. 29 ಇತರೆ ಮತದಾರರ ಪೈಕಿ 12 ಮಂದಿ ಮತದಾನ ಮಾಡಿದ್ದಾರೆ.

ನ. 13ರಂದು ಮತದಾನ ನಡೆದ ಬಳಿಕ, ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೋಬಳಿವಾರು, ಬೂತ್‌ ವಾರು ಮತದಾನದ ಲೆಕ್ಕಾಚಾರಗಳನ್ನು ಮಾಡಿ ಮುಗಿಸಿದ್ದಾರೆ. ಎಲ್ಲಿ ಎಷ್ಟು ಲೀಡ್‌ ಸಿಗಲಿದೆ, ಎಲ್ಲಿ ಎಷ್ಟು ಕೊರತೆ ಆಗಲಿದೆ ಎಂಬ ಮಾಹಿತಿ ಕಲೆ ಹಾಕಿದ್ದಾರೆ. ಸೋಲು ಗೆಲುವಿನ ಕುರಿತು ಎರಡೂ ಪಕ್ಷಗಳಲ್ಲೂ ಅವರದ್ದೇ ಅಂದಾಜಿನ ಲೆಕ್ಕಗಳಿವೆ. ಆದರೂ, ಯಾರನ್ನೇ ಕೇಳಿದರೂ ‘ಈ ಬಾರಿ ಗೆಲವು ನಮ್ಮದೇ’ ಎಂದು ಹೇಳುತ್ತಿದ್ದಾರೆ. 

‘ಈ ಬಾರಿಯ ಚುನಾವಣೆಯನ್ನು ಹಿಂದಿನ ಚುನಾವಣೆಗಳಂತೆ ಇಂಥವರೇ ಗೆಲ್ಲುತ್ತಾರೆ ಎಂದು ಹೇಳಲು ಆಗುತ್ತಿಲ್ಲ. ಹಿಂದಿನ ಚುನಾವಣೆಗೂ ಈ ಚುನಾವಣೆಗೂ ವತ್ಯಾಸಗಳಿವೆ’ ಎಂದು ಸಂಡೂರಿನ ಮತದಾರರೂ ಮಾತನಾಡಿಕೊಳ್ಳುತ್ತಿದ್ದಾರೆ.   

ದಿಗ್ಗಜರ ಪ್ರಚಾರ: ತೀವ್ರ ಪೈಪೋಟಿಯಿಂದ ಕೂಡಿದ್ದ ಸಂಡೂರು ಉಪ ಚುನಾವಣೆಯಲ್ಲಿ ಎರಡೂ ರಾಜಕೀಯ ಪಕ್ಷಗಳೂ ನಿರಂತರ ಅಬ್ಬರದ ಪ್ರಚಾರ ನಡೆಸಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ದಿನ ಕ್ಷೇತ್ರದಲ್ಲೇ ಉಳಿದು 15ಕ್ಕೂ ಹೆಚ್ಚು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡರು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಸಚಿವರಾದ ಸಂತೋಷ್‌ ಲಾಡ್‌, ಮುನಿಯಪ್ಪ, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಹಲವರು ಪ್ರಚಾರ ನಡೆಸಿದ್ದರು. 

ಬಿಜೆಪಿ ಕಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಶಾಸಕ ಜನಾರ್ದನ ರೆಡ್ಡಿ, ಸಂಸದ ಗೋವಿಂದ ಕಾರಜೋಳ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಹಲವು ನಾಯಕರು ಪ್ರಚಾರ ಮಾಡಿದ್ದರು. 

ಅಕ್ರಮ ಗಣಿಗಾರಿಕೆ ವಿಚಾರವನ್ನು ಕಾಂಗ್ರೆಸ್‌ ತನ್ನ ಪ್ರಚಾರದುದ್ದಕ್ಕೂ ಪ್ರಸ್ತಾಪಿಸಿದೆ. ಬಿಜೆಪಿ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟಿತ್ತು. 

ಸಂಭ್ರಮಾಚರಣೆಗೆ ಸಜ್ಜು: ‘ನಾವೇ ಗೆಲ್ಲುತ್ತೇವೆ’ ಎಂಬ ವಿಶ್ವಾಸದಲ್ಲಿರುವ ರಾಜಕೀಯಪಕ್ಷಗಳ ನಾಯಕರು ಈಗಾಗಲೇ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಭಾರೀ ಪ್ರಮಾಣದ ಪಟಾಕಿ, ದೊಡ್ಡ ಹೂವಿನಹಾರಗಳನ್ನು ಬುಕ್ ಮಾಡಿಕೊಂಡಿದ್ದಾರೆ.

ಅನ್ನಪೂರ್ಣಾ ತುಕಾರಾಂ
ಪ್ರತಿಷ್ಠಿತ ಚುನಾವಣೆ  ಇದು
ಸಂಡೂರಿನ ಪ್ರತಿಷ್ಠೆಯ ಚುನಾವಣೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದಾಗಿ ಬಿಜೆಪಿಯೂ ಹೇಳಿದೆ. ಅದೇನೆ ಇದ್ದರೂ ಇದು ಸಚಿವ ಸಂತೋಷ್ ಲಾಡ್‌ ಮತ್ತು ಶಾಸಕ ಜನಾರ್ದನ ರೆಡ್ಡಿ ಪ್ರತಿಷ್ಠೆಯ ಚುನಾವಣೆ ಎಂಬ ಮಾತು ರಾಜಕೀಯ ವಲಯದಲ್ಲಿ ಗಟ್ಟಿಯಾಗಿ ಕೇಳಿಸುತ್ತಿದೆ.  ಸಂತೋಷ್‌ ಲಾಡ್‌ಗೆ ಕ್ಷೇತ್ರವನ್ನು ಉಳಿಸಿಕೊಳ್ಳಲೇ ಬೇಕಿರುವ ಅನಿವಾರ್ಯತೆ ಇದೆ. ಇಲ್ಲಿ ಬರುವ ಫಲಿತಾಂಶ ಇನ್ನು ಕೆಲವೇ ತಿಂಗಳಲ್ಲಿ ನಡೆಯುವ ಸಂಪುಟ ಪುನರಚನೆ ಮೇಲೆ ಪರಿಣಾಮ ಬೀರಿದರೂ ಬೀರಬಹುದು ಎಂಬ ಅಭಿಪ್ರಾಯವಿದೆ.  ಜನಾರ್ದನ ರೆಡ್ಡಿಗೂ ಇದು ಅತ್ಯಂತ ಪ್ರಮುಖ ಚುನಾವಣೆ. ಹಿಂದೊಮ್ಮೆ ಬಿ.ಎಸ್‌ ಯಡಿಯೂರಪ್ಪ ಅವರ ವಿರುದ್ಧವೇ ಗುಟುರು ಹಾಕುತ್ತಿದ್ದ ರೆಡ್ಡಿಗೆ ಈಗ ಬಿಜೆಪಿಯಲ್ಲಿ ಅಂಥ ಬಲವಿಲ್ಲ. ಆ ಬಲ ತಂದುಕೊಳ್ಳಬೇಕಿದ್ದರೆ ಇಲ್ಲಿ ಗೆದ್ದು ತೋರಿಸಲೇಬೇಕು ಎಂಬ ಅನಿವಾರ್ಯವಿದೆ. ಹೀಗಾಗಿ ಸಂಡೂರಿನ ಚುನಾವಣೆ ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆದಿದೆ. 
ಕೈಕೊಟ್ಟ ಜೆಡಿಎಸ್‌ ‘ಮಿತ್ರ’ 
ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯನ್ನು ಮೈತ್ರಿ ಮೂಲಕ ಎದುರಿಸಲು ಬಿಜೆಪಿ ಮತ್ತು ಜೆಡಿಎಸ್‌ ನಿರ್ಧರಿಸಿದ್ದವು. ಚನ್ನಪಟ್ಟಣದಲ್ಲಿ ಬಿಜೆಪಿಯ ಅಗ್ರ ನಾಯಕರೇ ಪ್ರಚಾರ ಮಾಡಿದ್ದರು. ಆದರೆ ಸಂಡೂರಿನಲ್ಲಿ ಜೆಡಿಎಸ್‌ನ ಸ್ಥಳೀಯ ಕೆಲ ನಾಯಕರು ಹೊರತುಪಡಿಸಿದರೆ ರಾಜ್ಯ ನಾಯಕರು ಪ್ರಚಾರಕ್ಕೆ ಬರಲೇ ಇಲ್ಲ. ಒಂದು ದಿನ ಪ್ರಚಾರಕ್ಕೆ ಬರುವ ಮಾತು ನೀಡಿದ್ದ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಮಿತ್ರ ಪಕ್ಷಕ್ಕೆ ಕೈಕೊಟ್ಟಿದ್ದರು. ಹೀಗಾಗಿ ಸಂಡೂರಿನ ಮಟ್ಟಿಗೆ ಮೈತ್ರಿ ಎಂಬುದು ಮಾತಿಗಷ್ಟೇ ಎಂಬಂತಾಗಿತ್ತು.  
ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಮುಂದು 
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತಗಟ್ಟೆ ಸಮೀಕ್ಷೆಯನ್ನು ಕೆಲ ಸಂಸ್ಥೆಗಳು ಮಾಡಿವೆ. ಎಲ್ಲ ಸಮೀಕ್ಷಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದನ್ನು ನಿರಾಕರಿಸಿರುವ ಬಿಜೆಪಿ ನಾಯಕರು ನಾವೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.