ಹೊಸಪೇಟೆ: ತಾಲ್ಲೂಕಿನ ಹಂಪಿಯಲ್ಲಿ ವೈ ಫೈ ಸೌಲಭ್ಯ ಮರೀಚಿಕೆಯಾಗಿ ಎರಡು ತಿಂಗಳಾದರೂ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಪ್ರವಾಸಿಗರು ಹೆಣಗಾಡುವಂತಾಗಿದೆ.
ದೇಶ–ವಿದೇಶಗಳಿಂದ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್.ಐ.) ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಪರಿಸರದಲ್ಲಿ ವೈ–ಫೈ ಸೌಲಭ್ಯ ಕಲ್ಪಿಸಿತ್ತು. ಯಾರು ಬೇಕಾದರೂ 30 ನಿಮಿಷಗಳವರೆಗೆ ಉಚಿತವಾಗಿ ಅದರ ಪ್ರಯೋಜನ ಪಡೆಯಬಹುದಿತ್ತು.. ಆದರೆ, ಎರಡು ತಿಂಗಳಿಂದ ಈ ಸೌಲಭ್ಯ ಇಲ್ಲದಾಗಿದೆ.
ವೈ–ಫೈ ಏಕೆ?
ನದಿ, ಬೆಟ್ಟ ಗುಡ್ಡಗಳಿಂದ ಕೂಡಿರುವ ಹಂಪಿಯ ಕೆಲವು ಕಡೆಗಳಲ್ಲಿ ಬಿ.ಎಸ್.ಎನ್.ಎಲ್. ಹೊರತುಪಡಿಸಿದರೆ ಇತರೆ ದೂರವಾಣಿ ಕಂಪೆನಿಗಳ ನೆಟವರ್ಕ್ ಸಿಗುವುದಿಲ್ಲ. ಇಲ್ಲಿಗೆ ಬಂದ ಪ್ರವಾಸಿಗರು ಅನ್ಯ ಭಾಗದಲ್ಲಿರುವ ಜನರೊಂದಿಗೆ ಸಂಪರ್ಕಿಸಿ ಮಾತನಾಡುವುದು ಕಷ್ಟವಾಗುತ್ತಿತ್ತು. ಜನ ಅದಕ್ಕಾಗಿ ಕಮಲಾಪುರಕ್ಕೆ ಹೋಗಿ, ಅಲ್ಲಿಂದ ಕರೆ ಮಾಡಿ ಮಾತನಾಡುತ್ತಿದ್ದರು.
ಅದನ್ನು ಮನಗಂಡು ಪುರಾತತ್ವ ಸರ್ವೇಕ್ಷಣ ಇಲಾಖೆಯು, ‘ಡಿಜಿಟಲ್ ಇಂಡಿಯಾ’ ಯೋಜನೆಯ ಭಾಗವಾಗಿ ಎರಡು ವರ್ಷಗಳ ಹಿಂದೆ ವೈ–ಫೈ ಸೌಲಭ್ಯ ಕಲ್ಪಿಸಿತ್ತು. ಅದರಿಂದ ಪ್ರವಾಸಿಗರಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ, ಈಗ ಏಕಾಏಕಿ ಅದು ಇಲ್ಲವಾಗಿರುವುದರಿಂದ ಜನ ಮತ್ತೆ ಸಮಸ್ಯೆ ಎದುರಿಸುವಂತಾಗಿದೆ.
‘ಹಂಪಿಗೆ ನಿತ್ಯ ಹೊರರಾಜ್ಯ, ಹೊರದೇಶಗಳಿಂದ ಸಾಕಷ್ಟು ಜನ ಬರುತ್ತಾರೆ. ಅವರಿಗೆ ಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಎರಡು ತಿಂಗಳಿಂದ ವೈ–ಫೈ ಸೇವೆ ಸ್ಥಗಿತಗೊಂಡಿದೆ. ಅದರಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ. ವೈ–ಫೈ ಸೌಲಭ್ಯ ಕಲ್ಪಿಸಿದರೆ ಪ್ರವಾಸಿಗರು ಹೆಣಗಾಡುವುದು ತಪ್ಪುತ್ತದೆ. ಕೂಡಲೇ ಅದನ್ನು ಸರಿಪಡಿಸಲು ಮುಂದಾಗಬೇಕು’ ಎಂದು ಹಂಪಿ ನಿವಾಸಿ ರಮೇಶ ಆಗ್ರಹಿಸಿದರು.
‘ಈ ಹಿಂದೆ ವೈ–ಫೈ ಸೌಲಭ್ಯ ಇದ್ದಾಗ ಹಂಪಿ ಮಾರ್ಗದರ್ಶಿಗಳು ಅದರ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುತ್ತಿದ್ದರು. ಪ್ರವಾಸಿಗರು ಕೆಲಹೊತ್ತು ದೇವಸ್ಥಾನಕ್ಕೆ ಬಂದು, ಅದರ ಪರಿಸರದಲ್ಲಿ ಕುಳಿತುಕೊಂಡು ಅವರ ಕೆಲಸ ಮುಗಿಸಿಕೊಳ್ಳುತ್ತಿದ್ದರು. ಸಂಬಂಧಿಸಿದವರೊಂದಿಗೆ ಚಾಟ್ ಮಾಡುತ್ತಿದ್ದರು. ಈಗ ಯಾರೊಬ್ಬರೂ ಈ ಕಡೆಗೆ ಸುಳಿಯುತ್ತಿಲ್ಲ. ಈ ಕಾರಣಕ್ಕಾಗಿಯೇ ಕೆಲವರು ಹೊಸಪೇಟೆ, ಕಮಲಾಪುರ ಪಟ್ಟಣದಲ್ಲಿರುವ ಹೋಟೆಲ್‌ಗಳಲ್ಲಿ ರೂಂ ಬುಕ್ ಮಾಡಿ ಉಳಿದುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.