ಬಳ್ಳಾರಿ: ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಹೂ ಮುಡಿಯುವಂತಿಲ್ಲ. ಗಾಜಿನ ಬಳೆ ತೊಡುವಂತಿಲ್ಲ. ಕೇಶರಾಶಿ ಇಳಿಬಿಟ್ಟು ಓಡಾಡುವಂತಿಲ್ಲ. ತುರುಬು ಕಟ್ಟುವುದು ಕಡ್ಡಾಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಹೊಡಿಸಿರುವ ಸುತ್ತೋಲೆಯನ್ನು ಜಿಲ್ಲೆಯ ಮಹಿಳಾ ಪೊಲೀಸರು ಸ್ವಾಗತಿಸಿದ್ದಾರೆ.
’ಪ್ರಜಾವಾಣಿ’ಯೊಂದಿಗೆ ಭಾನುವಾರ ಕೆಲವು ಅಧಿಕಾರಿ ಮತ್ತು ಸಿಬ್ಬಂದಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಇಲ್ಲಿವೆ.
ಅನನ್ಯತೆ ಅಗತ್ಯ: ‘ಅಂಚೆ ಇಲಾಖೆಯ ಮಹಿಳಾ ಸಿಬ್ಬಂದಿಯೂ ಸೀರೆ ಉಡುತ್ತಾರೆ. ಮಹಿಳಾ ಪೊಲೀಸರೂ ಸೀರೆ ಇಟ್ಟರೆ ಇಲಾಖೆಗಳ ವ್ಯತ್ಯಾಸ ಮರೆಯಾಗುತ್ತದೆ. ಜನರಲ್ಲೂ ಗೊಂದಲ ಮೂಡುತ್ತದೆ. ಪ್ಯಾಂಟ್ ಶರ್ಟ್ ಸಮವಸ್ತ್ರ ಈ ಗೊಂದಲವನ್ನು ನಿವಾರಿಸುತ್ತದೆ’ ಎಂದು ಎಸ್ಪಿ ಕಚೇರಿಯ ಕಾನ್‌ಸ್ಟೆಬಲ್‌ಗಳಾದ ಲಲಿತಾ ಮತ್ತು ಶೀಲಾ ಅಭಿಪ್ರಾಯಪಟ್ಟರು.
‘ಅವಕಾಶವಿದೆಯೇ ಇಲ್ಲವೋ ತಿಳಿಯದೆಯೇ ನಾವು ಆಗಾಗ ಖಾಕಿ ಸೀರೆಯನ್ನು ಉಡುತ್ತಿದ್ದೆವು. ಆದರೆ ಇನ್ನು ಮುಂದೆ ಪ್ಯಾಂಟ್–ಶರ್ಟ್ ಸಮವಸ್ತ್ರವನ್ನು ಧರಿಸುತ್ತೇವೆ’ ಎಂದು ಹೇಳಿದರು.
‘ನಾವು ಸೇವೆಗೆ ಸೇರಿದಂದಿನಿಂದ ಇದುವರೆಗೂ ಖಾಕಿ ಸೀರೆಯನ್ನು ಉಟ್ಟಿಲ್ಲ. ನಮಗೆ ಉಡಬೇಕು ಎಂದೂ ಅನ್ನಿಸಿಲ್ಲ. ಪ್ಯಾಂಟ್ ಶರ್ಟ್ ಸಮವಸ್ತ್ರದಲ್ಲೇ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ’ ಎಂದು ಕಂಪ್ಲಿ ಭಾಗದ ಮಹಿಳಾ ಕಾನ್‌ಸ್ಟೆಬಲ್‌ಗಳಿಬ್ಬರು ಪ್ರತಿಕ್ರಿಯಿಸಿದರು.
‘ಕಾರ್ಯಾಚರಣೆ ವೇಳೆ ಕಡ್ಡಾಯವಾಗಿ ಪ್ಯಾಂಟ್–ಶರ್ಟ್ ಸಮವಸ್ತ್ರ ಧರಿಸುತ್ತೇನೆ. ಹೆಚ್ಚಿನ ಕಾರ್ಯಭಾರವಿಲ್ಲದ ಸಮಯದಲ್ಲಿ, ಹೆಚ್ಚು ಹೊತ್ತು ಕಚೇರಿಯಲ್ಲಿರಬೇಕಾದಾಗ ಮಾತ್ರ ಆಗಾಗ ಸೀರೆ ಉಟ್ಟು ಬರುತ್ತಿದ್ದೆ. ಇನ್ನು ಮುಂದೆ ಸದಾ ಪ್ಯಾಂಟ್–ಶರ್ಟ್ ಸಮವಸ್ತ್ರ ಧರಿಸಿಯೇ ಕೆಲಸ ಮಾಡುವೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.
‘ಬಹಳಷ್ಟು ಮಹಿಳಾ ಪೊಲೀಸರು ಗಾಜಿನ ಬಳೆ, ದೊಡ್ಡದಾದ ಕಿವಿಯೋಲೆಗಳನ್ನು ಧರಿಸುವುದಿಲ್ಲ. ಕಪ್ಪು ಬಣ್ಣದ ಹೇರ್‌ಪಿನ್ ಮತ್ತು ಹೇರ್ ಬ್ಯಾಂಡ್‌ಗಳನ್ನೇ ಧರಿಸುತ್ತಿದ್ದೇವೆ’ ಎಂದರು.
ಹಿರಿಯರಿಗೆ ತೊಂದರೆ: ‘ಗಟ್ಟಿಮುಟ್ಟಾಗಿರುವವರು ಪ್ಯಾಂಟ್ ಶರ್ಟ್ ಸಮವಸ್ತ್ರ ಧರಿಸುವುರಿಂದ ಯಾವ ತೊಂದರೆಯೂ ಆಗುವುದಿಲ್ಲ. ಆದರೆ ಅನಾರೋಗ್ಯದಿಂದ ಬಳಲುವವರು, ನಿವೃತ್ತಿಯ ಅಂಚಿನಲ್ಲಿರುವವರಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಈ ಬಗ್ಗೆ ಇಲಾಖೆಯು ಗಮನ ಹರಿಸಬೇಕು’ ಎಂದು ಮಹಿಳಾ ಎಎಸ್‌ಐ ಪದ್ಮಾವತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.