ಮರಿಯಮ್ಮನಹಳ್ಳಿ: ಪಕ್ಷದ ಕಾರ್ಯಕರ್ತರನ್ನು ಎಂದಿಗೂ ನಿರ್ಲಕ್ಷಿಸಬಾರದು. ಅವರು ಪಕ್ಷದ ಬೆನ್ನೆಲುಬು, ಶಕ್ತಿ, ಜೀವಾಳ ಇದ್ದಂತೆ ಎಂಬುದನ್ನು ಅರಿತುಕೊಂಡು ಚುನಾವಣೆ ಎದುರಿಸಬೇಕು ಎಂದು ಸಚಿವ ಆನಂದ್‍ಸಿಂಗ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಾರ್ಡ್‍ವರ್ಕ್, ಸ್ಮಾರ್ಟ್‍ವರ್ಕ್, ನೆಟ್‍ವರ್ಕ್ ಹಾಗೂ ಟೀಮ್‍ವರ್ಕ್ ತಂತ್ರ ಅನುಸರಿಸಿ ಚುನಾವಣೆ ಎದುರಿಸಿದ್ದಲ್ಲಿ ಗೆಲುವು ನಿಶ್ಚಿತ‘ ಎಂದು ಅಭ್ಯರ್ಥಿ ಬಲ್ಲಾಹುಣ್ಸಿ ರಾಮಣ್ಣ ಅವರಿಗೆ ಕಿವಿಮಾತು ಹೇಳಿದರು.
‘ನಮ್ಮ ಪಕ್ಷದಲ್ಲಿದ್ದ ವ್ಯಕ್ತಿ ಬೇರೆ ಪಕ್ಷದ ಅಭ್ಯರ್ಥಿಯಾಗಿ ಅವರು ದೊಡ್ಡ ತಪ್ಪು ಮಾಡಿದ್ದಾರೆ‘ ಎಂದು ಬಿಜೆಪಿ ತೊರೆದು ಜೆಡಿಎಸ್ ಅಭ್ಯರ್ಥಿಯಾದ ನೇಮಿರಾಜ ನಾಯ್ಕ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
‘ಪಕ್ಷ ಒಂದು ಬಾರಿ ಅಥವಾ ಎರಡು ಬಾರಿ ಅವಕಾಶ ನೀಡುತ್ತೆ. ಆದರೆ, ಗೆಲ್ಲುವವರೆಗೂ ನೀನೆ ನಿಲ್ಲು ಎಂದು ಟಿಕೆಟ್ ನೀಡುತ್ತಾ’ ಎಂದು ಪ್ರಶ್ನಿಸಿದ ಅವರು, ‘ಕ್ಷೇತ್ರದಲ್ಲಿ ಜಾತಿ ಜಾತಿ ಮಧ್ಯೆ ಕಿಡಿ ಹಚ್ಚುವವರಿದ್ದು, ಯಾರೂ ಗಾಳಿ ಮಾತಿಗೆ ಕಿವಿಗೊಡದೆ, ವಿಜಯನಗರ ಜಿಲ್ಲೆ ಉದಯಕ್ಕೆ ಕಾರಣರಾದ ಯಡಿಯೂರಪ್ಪ ಅವರ ಋಣ ತೀರಿಸಲು ಈ ಬಾರಿ ಬಿಜೆಪಿ ಬೆಂಬಲಿಸಬೇಕು‘ ಎಂದರು.
‘ಇನ್ನು ಕ್ಷೇತ್ರದಲ್ಲಿ ಪರಮೇಶ್ವರಪ್ಪ ಅವರಿಗೆ ಯಾವುದೊ ಫಾರಂ ನೀಡಿ ಹೊರ ದಬ್ಬಿದ ಜೆಡಿಎಸ್ ಪಕ್ಷದಲ್ಲಿ ಎಷ್ಟು ಫಾರಂಗಳಿಯೊ ನಮಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದ ಅವರು, ಸಮಾಜಿಕ ನ್ಯಾಯದಡಿ ಪಕ್ಷಕ್ಕೆ ಬಂದಿರುವುದು ಪಕ್ಷಕ್ಕೆ ಬಲ ಬಂದಿದೆ‘ ಎಂದರು.
ಇದೇ ವೇಳೆ ಚುನಾವಣಾ ಕಾರಣ ಮೇ 2ರಂದು ವಿಜಯನಗರ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಲಿದ್ದಾರೆ ಎಂದು ಆನಂದ್‍ಸಿಂಗ್ ತಿಳಿಸಿದರು.
ಜೆಡಿಎಸ್ ಪಕ್ಷದ ಟಿಕೆಟ್ ವಂಚಿತ ಎಲ್.ಪರಮೇಶ್ವರಪ್ಪ ಹಾಗೂ ಅವರ ಬೆಂಬಲಿಗರು ಬಿಜೆಪಿ ಪಕ್ಷ ಸೇರಿದರು. ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ಚುನಾವಣಾ ಜಿಲ್ಲಾ ಉಸ್ತುವಾರಿ ಪ್ರವೀಣ್, ಮಂಡಲ ಅಧ್ಯಕ್ಷ ವಿರೇಶ್‍ಸ್ವಾಮಿ, ಅಭ್ಯರ್ಥಿ ಬಲ್ಲಾಹುಣ್ಸಿ ರಾಮಣ್ಣ, ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.