ADVERTISEMENT

ಬಳ್ಳಾರಿ ಜಿಲ್ಲೆಯಾದ್ಯಂತ ಪರಿಸರ ದಿನಕ್ಕೆ ವರುಣನ ಸೊಬಗು

ಗೃಹ ರಕ್ಷಕ ದಳ ಸಿಬ್ಬಂದಿ ಪರಿಸರ ಕಾಳಜಿ: ಸಂಘ–ಸಂಸ್ಥೆಗಳಿಂದ ಸಸಿ ನೆಟ್ಟು ಜಾಗೃತಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 14:06 IST
Last Updated 16 ಜೂನ್ 2024, 14:06 IST
 ಹರಪನಹಳ್ಳಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಜರುಗಿದ ಪರಿಸರ ದಿನಾಚರಣೆಯಲ್ಲಿ ಎಚ್.ಮಲ್ಲಿಕಾರ್ಜುನ್ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
 ಹರಪನಹಳ್ಳಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಜರುಗಿದ ಪರಿಸರ ದಿನಾಚರಣೆಯಲ್ಲಿ ಎಚ್.ಮಲ್ಲಿಕಾರ್ಜುನ್ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.   

ಹರಪನಹಳ್ಳಿ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸುತ್ತಿರುವ ಗೃಹ ರಕ್ಷಕ ದಳದ ಪರಿಸರ ಕಾಳಜಿ ಮಾದರಿಯಾಗಿದೆ ಎಂದು ಎಸ್‌ಯುಜೆಎಂ ಕಾಲೇಜಿನ ಕನ್ನಡ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ್ ತಿಳಿಸಿದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಗೃಹ ರಕ್ಷಕ ದಳದ ವತಿಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆಗೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಗೃಹ ರಕ್ಷಕ ದಳದ ಪಾತ್ರ ಮುಖ್ಯವಾಗಿದೆ. ಪ್ರತಿಯೊಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿ ಗೌರವಿಸಬೇಕು ಎಂದು ಹೇಳಿದರು.ಶಿಕ್ಷಕ ಬಿ.ಜಯಮಾಲತೇಶ್ ಮಾತನಾಡಿ, ಗೃಹ ರಕ್ಷಕ ದಳದ ಸಿಬ್ಬಂದಿ ಗೌರವ ಧನದ ಆಧಾರದ ಮೇಲೆ ಜೀವನ ನಡೆಸುತ್ತಿದ್ದಾರೆ. ಅವರು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಜಿಲ್ಲಾ ಗೃಹ ರಕ್ಷಕ ದಳದ ಬೋಧಕ ಪ್ರಶಾಂತ ಪಾಟೀಲ್ ಮಾತನಾಡಿದರು. ಘಟಕಾಧಿಕಾರಿ ಎಸ್.ಎಂ.ಮಲ್ಲಿಕಾರ್ಜುನಯ್ಯ, ಹಿರಿಯ ಅಧಿಕಾರಿ ವಾಗೀಶ್ ಪೂಜಾರ್, ಎಂ.ಮಾಲತೇಶ, ಶಾನುಬೋಗರ ಹಾಲಸ್ವಾಮಿ, ಕೆ.ಸುಭಾಷ್, ಎಚ್.ಬಸವರಾಜ್, ಎಚ್.ರಾಜಪ್ಪ, ಜಿ.ರಾಮಚಂದ್ರಪ್ಪ, ಕೆ.ಕೋಟೆಪ್ಪ, ಮಂಜುನಾಥ್ ಇದ್ದರು.

ಮುದೇನೂರಿನಲ್ಲಿ ಸಸಿ ನೆಡುವಿಕೆ

ಹೂವಿನಹಡಗಲಿ: ತಾಲ್ಲೂಕಿನ ಮುದೇನೂರು ಗ್ರಾಮದ ಗೋಣಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಸಸಿಗಳನ್ನು ನೆಟ್ಟು ಪರಿಸರ ದಿನ ಆಚರಿಸಿದರು.

ಸಂಘದ ಅಧ್ಯಕ್ಷ ವಿ.ಬಿ.ಕೊಟ್ರೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಗಿಡಮರಗಳನ್ನು ಕಡಿದು ಎಲ್ಲೆಡೆ ಕಾಂಕ್ರೀಟ್ ಕಾಡು ರೂಪಿಸುತ್ತಿರುವುದರಿಂದ ಮಳೆ ಕಡಿಮೆಯಾಗಿ ತಾಪಮಾನ ಏರಿಕೆಯಾಗುತ್ತಿದೆ. ಲಭ್ಯವಿರುವ ಜಾಗಗಳಲ್ಲಿ ಪ್ರತಿಯೊಬ್ಬರು ಗಿಡಮರ ಬೆಳೆಸುವ ಸಂಕಲ್ಪ ಮಾಡಬೇಕು’ ಎಂದು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಮಹೇಶ್ವರಯ್ಯ, ತಾಲ್ಲೂಕು ಕಾರ್ಯದರ್ಶಿ ವಿ.ದುರುಗಪ್ಪ, ಅಶೋಕ, ಹೊಳೆಯಾಚೆ ಕೊಟ್ರಪ್ಪ, ಮುಖ್ಯಶಿಕ್ಷಕ ಕೆ.ಶಶಿಧರ, ಶಿಕ್ಷಕಿ ದಾನಮ್ಮ ಇದ್ದರು.

ಪರಿಸರ ಜಾಗೃತಿ ಸಾಮಾಜಿಕ ಜಾಲತಾಣಗಳಿಗೆ ಸೀಮಿತ

ಕುರುಗೋಡು: ‘ಸಸಿಗಳ ವಿತರಣೆ ಮತ್ತು ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳಲು ಸೀಮಿತವಾಗಬಾರದು’ ಎಂದು ಎಮ್ಮಿಗನೂರಿನ ಹಂಪಿ ಸಾವಿರ ದೇವರು ಗುರುಮಹಾಂತರ ಮಠದ ವಾಮದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ವಿಜಯನಗರ ಶೈಕ್ಷಣಿಕ ಮತ್ತು ಸೇವಾಟ್ರಸ್ಟ್ ಸೋಮವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಮತ್ತು ಸಸಿ ಉಚಿತ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪ್ರಕೃತಿ ಮುನಿದರೆ ಭೂಮಿಯ ಮೇಲೆ ಯಾರೂ ಬದುಕಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಈ ವರ್ಷದ ಬೇಸಿಗೆ ಎಲ್ಲರಿಗೂ ಅರ್ಥಮಾಡಿಸಿದೆ. ಮುಂದಿನ ದಿನಗಳಲ್ಲಿ ಆರೋಗ್ಯಕರ ಜೀವನ ನಡೆಸಬೇಕಾದರೆ ಗಿಡಮರಗಳನ್ನು ಬೆಳೆಸಿ ಪರಿಸರ ಉಳಿಸುವ ಕಾಯಕ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು’ ಎಂದು ಸಲಹೆ ನೀಡಿದರು.

‘ರೈತರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿ ಸರ್ಕಾರದ ಸೌಲಭ್ಯಗಳು ಪಡೆದುಕೊಳ್ಳಬೇಕಾದರೆ ಇಂತಿಷ್ಟು ಮರಗಳನ್ನು ಬೆಳೆಸಲೇಬೇಕು ಎನ್ನುವ ಕಾನೂನು ಜಾರಿಯಾದರೆ ಮಾತ್ರ ಮುಂದಿನ ಪೀಳಿಗೆಗೆ ಸ್ವಚ್ಛಂದ ಪರಿಸರ ಬಳುವಳಿಯಾಗಿ ನೀಡಲು ಸಾಧ್ಯ’ ಎಂದರು.

ಪೊಲೀಸ್ ವೃತ್ತ ನಿರೀಕ್ಷಕ ವಿಶ್ವನಾಥ ಕೆ.ಹಿರೇಗೌಡರ್ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಗಿಡಮರಗಳನ್ನು ನಾಶನಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಗಿಡಮರಗನ್ನು ಬೆಳೆಸದಿದ್ದರೂ ಪರವಾಗಿಲ್ಲ. ಬೆಳೆದಿರುವ ಮರಗಳನ್ನು ಕಡಿಯದಂತೆ ಉಳಿಸಿ ಬೆಳೆಸುವ ಕಾಯಕ ಮಾಡಬೇಕು ಎಂದು ಸಲಹೆ ನೀಡಿದರು.

ವಲಯ ಅರಣ್ಯಾಧಿಕಾರಿ ತೋಷನ್ ಕುಮಾರ್, ವಿಜಯನಗರ ಶೈಕ್ಷಣಿಕ ಮತ್ತು ಸೇವಾ ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ ಮತ್ತು ಪ್ರಗತಿಪರ ರೈತ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿದರು.

ವಿಜಯನಗರ ಶೈಕ್ಷಣಿಕ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಗಣಪಾಲ್ ಐನಾಥರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‍ಐ ಸುಪ್ರಿತ್ ವಿ., ಕೃಷಿ ಪರಿಕರಗಳ ಮಾರಾಟಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಶೇಖರ್, ಮಾರುತಿ ಗಾಳಿ, ಅಗ್ನಿಶಾಮಕ ಅಧಿಕಾರಿ ರಾಮಲಿಂಗ, ಕುರಿ ಹನುಮಣ್ಣ, ಅರ್ವಿ ಶರಣಬಸವ, ಚವ್ಹಾಣ್, ಚೇಗೂರು ಯುವರಾಜ, ಮತ್ತು ಬಿ.ಸದಾಶಿವಪ್ಪ ಇದ್ದರು.

ಬುಡಕಟ್ಟು ಜನಾಂಗ ಅಭಿವೃದ್ಧಿ ಯೋಜನೆಯಡಿ ಸಸಿ ವಿತರಣೆ

ಸಂಡೂರು: ನಬಾರ್ಡ್ ಬುಡಕಟ್ಟು ಜನಾಂಗ ಅಭಿವೃದ್ಧಿ ಯೋಜನೆಯಡಿ ತಾಲ್ಲೂಕಿನ 73-ಹುಲಿಕುಂಟೆ ಗ್ರಾಮದಲ್ಲಿ ಯೋಜನೆಯ ಫಲಾನುಭವಿಗಳಿಗೆ ಮಾವು ಹಾಗೂ ನಿಂಬೆಯ ಸಸಿಗಳನ್ನು ವಿತರಿಸಲಾಯಿತು.

ಸಂಕಲ್ಪ ಅಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಬಾರ್ಡ್ ಜಿಲ್ಲಾ ಮುಖ್ಯಸ್ಥ ಯುವರಾಜ್ ಕುಮಾರ್ ಸಸಿಗಳನ್ನು ವಿತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಫಲಾನುಭವಿಗಳನ್ನು ಕುರಿತು ಮಾತನಾಡಿದ ಅವರು ನಬಾರ್ಡ್ ಕೃಷಿ,ಹಣಕಾಸು,ಮೂಲ ಸೌಕರ್ಯ,ಬ್ಯಾಂಕಿಂಗ್,ತಂತ್ರಜ್ಞಾನ , ಕಿರು ಬಂಡವಾಳ ಹಾಗೂ ಗ್ರಾಮೀಣ ಉತ್ತೇಜನ ಮಾಡುವುದರ ಮೂಲಕ ಭಾರತೀಯ ಹಳ್ಳಿಗಳಲ್ಲಿ ಜನರ ಜೀವನ ಪರಿವರ್ತಿಸಲು ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಕಲ್ಪ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸೋಮಶೇಖರ್ .ಕೆ,ಹಿರಿಯ ತೋಟಗಾರಿಕೆ ನಿರ್ದೇಶಕ ಹನುಮಪ್ಪ ನಾಯಕ,ಸಹಾಯಕ ಕೃಷಿ ಅಧಿಕಾರಿ ರಮೇಶ್,ಬಂಡ್ರಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕಿ ನೇತ್ರಾವತಿ,ರಾಘವೇಂದ್ರ,ಹನುಮಂತಪ್ಪ,ಸೌಭಾಗ್ಯ ಲಕ್ಷ್ಮಿ ಇತರರು ಭಾಗವಹಿಸಿದ್ದರು.

ಈದ್ಗ ಮೈದಾನ ಹಸಿರೀಕರಣಗೊಳಿಸಿ

ಬಳ್ಳಾರಿ: ಕೌಲ್ ಬಜಾ‌ರ್ ಪ್ರದೇಶದ ಈದ್ಗಾ ಮೈದಾನದಲ್ಲಿ ಗಿಡಗಳನ್ನು ನೆಡಲು ಆಗ್ರಹಿಸಿ ಜಿಲ್ಲಾ ವಕ್ಫ್‌ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ‘ಈದ್ಗಾ ಮೈದಾನವು ಗಿಡ ಮರಗಳಿಲ್ಲದೆ ಬಿಕೋ ಎನ್ನುತ್ತಿದ್ದು ಬೇಸಿಗೆಯಲ್ಲಿ ಯುವಕರು ಮೈದಾನವನ್ನು ಆಟೋಟಗಳಿಗೆ ಬಳಸುತ್ತಾರೆ. ಅಲ್ಲದೆ ಹಿರಿಯ ನಾಗರಿಕರು ವಾಯುವಿಹಾರಕ್ಕೆ ಬರುತ್ತಾರೆ. ಆದರೆ ಇಲ್ಲಿ ಗಿಡ ಮರಗಳ ಅಭಾವ ಇದ್ದು ಅರಣ್ಯ ಅಧಿಕಾರಿಗಳು ಈದ್ಯಾ ಮೈದಾನದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಅವರು ಆಗ್ರಹಿಸಿದರು. ‘ಮಳೆಗಾಲದ ಸಂದರ್ಭ ಅರಣ್ಯ ಇಲಾಖೆಯು ಈದ್ಗಾ ಮೈದಾನದಲ್ಲಿ ಗಿಡ ಮರ ನೆಡಲು ಕ್ರಮ ಕೈಗೊಂಡಲ್ಲಿ ಸಮುದಾಯದ ವತಿಯಿಂದ ಅವುಗಳ ರಕ್ಷಣಾ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ನಾಮ ನಿರ್ದೇಶನ ಸದಸ್ಯ ಆರ್ಷದ್ ಅಲಿ ಸಮೀರ್ ಮುಖಂಡರಾದ  ರಫೀಕ್ ಧರ್ಮಗುರು ಮುಜಮಿಲ್ ಅನ್ವರ್ (ಅನ್ನು ) ಬಾಬಾಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.