ಬಳ್ಳಾರಿ: ಬಳ್ಳಾರಿಯಲ್ಲಿ 1999ರ ಇತಿಹಾಸ ಪುನರಾವರ್ತನೆಯಾಗಿದೆ. ಉತ್ತರ ಪ್ರದೇಶ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸೋನಿಯಾ ಗಾಂಧಿ ಕರ್ನಾಟಕದ ಬಳ್ಳಾರಿಯಿಂದಲೂ ಸ್ಪರ್ಧಿಸಿದ್ದರು. ಬಳಿಕ ಈ ಕ್ಷೇತ್ರ ಬಿಟ್ಟರು. ಅದು ಬೇರೆ ಮಾತು. ಆಗಿನ್ನೂ ಬಳ್ಳಾರಿ ಮತ್ತು ವಿಜಯನಗರ ವಿಭಜನೆ ಆಗಿರಲಿಲ್ಲ. ಲೋಕಸಭೆ ಚುನಾವಣೆ ಜತೆಗೆ ರಾಜ್ಯ ವಿಧಾನಸಭೆ ಚುನಾವಣೆಯೂ ನಡೆದಿತ್ತು. ಅಖಂಡ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ ವಿಭಜಿತ ಬಳ್ಳಾರಿ ಜಿಲ್ಲೆಯ ಐದೂ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ.
ಆಗ ಬಳ್ಳಾರಿ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಸೋನಿಯಾರ ಪ್ರಭಾವ ಇತ್ತು. ಮೊನ್ನೆಯ ಚುನಾವಣೆಯಲ್ಲಿ ಗೆಲುವಿನ ಹಿಂದೆ ರಾಹುಲ್ ಗಾಂಧಿ ಕೈಗೊಂಡಿದ್ದ ‘ಭಾರತ್ ಜೋಡೊ ಯಾತ್ರೆ’ ಪ್ರಭಾವ ಕೆಲಸ ಮಾಡಿದಂತಿದೆ. 2022ರ ಅಕ್ಟೋಬರ್ 14ರಂದು ಸಂಜೆ ಬಳ್ಳಾರಿ ಜಿಲ್ಲೆಗೆ ಬಂದಿದ್ದ ರಾಹುಲ್, ಸತತ ಮೂರು ದಿನ ಇಲ್ಲಿ ಪಾದಯಾತ್ರೆ ಕೈಗೊಂಡಿದ್ದರು. ಅವರು ಕೇವಲ ರಸ್ತೆಯಲ್ಲಿ ನಡೆದು ಹೋಗುವ ಕೆಲಸ ಮಾಡಲಿಲ್ಲ. ಎಲ್ಲ ವರ್ಗಗಳ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಬಡವರು, ಕೆಳ ಮಧ್ಯಮ ವರ್ಗ ಮತ್ತು ಕಾರ್ಮಿಕರ ಜತೆ ಸಂವಾದ ನಡೆಸಿದರು. ಜಿಲ್ಲೆಯ ಪ್ರಮುಖ ಜೀನ್ಸ್ ಉದ್ಯಮದ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು.
ಈ ವರ್ಷದ ಏಪ್ರಿಲ್ 28ರಂದು ನಗರದಲ್ಲಿ ರೋಡ್ ಶೋ ನಡೆಸಿ, ಚುನಾವಣಾ ಪ್ರಚಾರ ಕೈಗೊಂಡಿದ್ದ ರಾಹುಲ್ ಮತ್ತೊಮ್ಮೆ ಇದೇ ವಿಷಯ ಕುರಿತು ಉಲ್ಲೇಖಿಸಿದರು. ಕಾಂಗ್ರೆಸ್ ಸರ್ಕಾರ ಬಂದರೆ ₹ 5 ಸಾವಿರ ಕೋಟಿ ವೆಚ್ಚದಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ಮಾಡುವುದಾಗಿ ವಾಗ್ದಾನ ನೀಡಿದರು. ಅಲ್ಲದೆ, ಐದು ಗ್ಯಾರಂಟಿಗಳನ್ನು ಕುರಿತು ವಿವರಿಸಿದ್ದರು. ರಾಹುಲ್ ಮಾತಿಗೆ ಜನ ನಿರೀಕ್ಷೆ ಮೀರಿ ಮನ್ನಣೆ ನೀಡಿದ್ದಾರೆ. ಆದರೆ, ಜೀನ್ಸ್ ಉದ್ಯಮಿಗಳಿಗೆ ಕೊಟ್ಟ ಭರವಸೆ ಇನ್ನು ಈಡೇರಿಲ್ಲ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಭಾವ ಎಷ್ಟಿತ್ತೆಂದರೆ ಎದುರಾಳಿ ಬಿಜೆಪಿ ಅಭ್ಯರ್ಥಿಗಳು ತರಗೆಲೆಯಂತೆ ಉದುರಿಹೋಗಿದ್ದಾರೆ. ಈ ಪಕ್ಷದ ಪ್ರಭಾವಿ ನಾಯಕರಲ್ಲಿ ಒಬ್ಬರೆಂದು ಬಿಂಬಿತವಾಗಿದ್ದ ಮಾಜಿ ಸಚಿವ ಶ್ರೀರಾಮುಲು ಅವರೇ ಸೋತಿದ್ದಾರೆ. ಈ ಚುನಾವಣೆಯಲ್ಲಿ ಜಿಲ್ಲೆಯ ಕೆಲವು ಮುಖಂಡರು ಕಾಂಗ್ರೆಸ್ ತೊರೆದರು. ಕೆಲವರು ತಟಸ್ಥರಾದರು. ಒಳಗೊಳಗೆ ಅನೇಕರು ಎದುರಾಳಿಗಳ ಜತೆ ಕೈಜೋಡಿಸಿದರು. ಇದ್ಯಾವುದೂ ಕಾಂಗ್ರೆಸ್ ಬಿರುಗಾಳಿ ತಡೆಯಲು ಸಾಧ್ಯವಾಗಲಿಲ್ಲ. ಬಳ್ಳಾರಿ ಗ್ರಾಮೀಣದಲ್ಲಿ ಗೆದ್ದ ನಾಗೇಂದ್ರ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾದರು.
2020ರ ಏಪ್ರಿಲ್‌ನಲ್ಲಿ ಪಾಲಿಕೆ ಚುನಾವಣೆ ನಡೆದು, ಕಾಂಗ್ರೆಸ್ ಬಹುಮತ ಪಡೆದರೂ, 2022ರ ಮಾರ್ಚ್‌ವರೆಗೆ ಒಂದಿಲ್ಲೊಂದು ಕಾರಣದಿಂದ ಮೇಯರ್ ಆಯ್ಕೆಗೆ ಅವಕಾಶ ಕೊಟ್ಟಿರಲಿಲ್ಲ. ಬಳಿಕ ಒಂದು ವರ್ಷದ ಅವಧಿಗೆ ರಾಜೇಶ್ವರಿ ಮೇಯರ್ ಆಗಿ ಕೆಲಸ ಮಾಡಿದರು. ಆರು ತಿಂಗಳ ಅವಧಿಗೆ ಡಿ. ತ್ರಿವೇಣಿ ಅವರನ್ನು ಆಯ್ಕೆ ಮಾಡಲಾಯಿತು. ಪೂರ್ವ ಷರತ್ತಿನಂತೆ ನವೆಂಬರ್ 4ರಂದು ತ್ರಿವೇಣಿ ಮೇಯರ್ ಸ್ಥಾನ ಬಿಟ್ಟುಕೊಟ್ಟರು. ತ್ರಿವೇಣಿ ಉತ್ತರಾಧಿಕಾರಿ ಆಗಿ ಯಾರನ್ನು ಆಯ್ಕೆ ಮಾಡಬೇಕೆಂಬ ವಿಷಯದಲ್ಲಿ ಆಡಳಿತ ಪಕ್ಷದಲ್ಲಿ ಭಿನ್ನಮತ ತಲೆದೋರಿದ್ದು ಸಚಿವ ನಾಗೇಂದ್ರ ಮತ್ತು ಶಾಸಕ ಭರತ್ ನಡುವೆ ತಿಕ್ಕಾಟ ನಡೆಯುತ್ತಿದೆ. ಇದರಿಂದ ಮೇಯರ್ ಆಯ್ಕೆ ಕಗ್ಗಂಟಾಗಿದೆ.
ಜಿಲ್ಲೆಯಲ್ಲಿ ಒಂದೆಡೆ ರಾಜಕೀಯದ ಮೇಲಾಟ, ಮತ್ತೊಂದೆಡೆ ಬರಗಾಲದ ರುದ್ರ ನರ್ತನ. ಹಾನಿಯಾದ ಬೆಳೆಗಳಿಗೆ ಪರಿಹಾರ ಈಗ ಬರಬಹುದು, ನಾಳೆ ಬರಬಹುದು ಎಂದು ರೈತರು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಆದರೆ, ರಾಜಕಾರಣಿಗಳು ಮಾತ್ರ ಇದ್ಯಾವುದರ ಪರಿವೇ ಇಲ್ಲದೆ, ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ.
ಮಳೆಯಾಗದೆ ಸುಮಾರು 13 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯೇ ಆಗಿಲ್ಲ. ಮತ್ತೊಂದೆಡೆ, ಬಿತ್ತನೆಯಾದರೂ ಕೈಗೆ ಬಾರದ ಬೆಳೆ. ಜಿಲ್ಲೆಯಲ್ಲಿರುವ ಒಟ್ಟು ಕೃಷಿ ಪ್ರದೇಶ 1.73 ಲಕ್ಷ ಹೆಕ್ಟೇರ್. ಇದಲ್ಲದೆ, 1 ಲಕ್ಷ ಹೆಕ್ಟೇರ್‌ಗೂ ಹೆಚ್ಚು ತೋಟಗಾರಿಕೆ ಪ್ರದೇಶವಿದೆ. ಕೃಷಿಯಲ್ಲಿ 1.08 ಲಕ್ಷ ಹೆಕ್ಟೇರ್ ನೀರಾವರಿ ಜಮೀನು. ಉಳಿದಿದ್ದು ಮಳೆಯಾಶ್ರಿತ ಭೂಮಿ. ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆಯಂತೆ ₹ 500 ಕೋಟಿಗೂ ಅಧಿಕ ಮೊತ್ತದ ಪರಿಹಾರವನ್ನು ರೈತರಿಗೆ ಕೊಡಬೇಕಾಗಿದೆ.
ಸಾಲ ಬಾಧೆ ತಾಳಲಾರದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕೃತ ಮಾಹಿತಿಯಂತೆ ಜಿಲ್ಲೆಯಲ್ಲಿ ಜನವರಿಯಿಂದ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಪರಿಹಾರ ವಿತರಿಸಲಾಗಿದೆ. ನಗರದಲ್ಲಿ ಅಲ್ಲೊಂದು. ಇಲ್ಲೊಂದು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ.
ಅನಂತಪುರ ರಸ್ತೆಯಲ್ಲಿ ನಿರ್ಮಿಸಿರುವ ಜಿಲ್ಲಾ ಆಡಳಿತ ಭವನ ಜನವರಿ 1ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆ ಆಗಿದೆ. ತಾಳೂರು ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಟ್ಟಿರುವ ವಕೀಲರ ಸಂಘದ ಕಟ್ಟಡವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ನವೆಂಬರ್ 11ರಂದು ಉದ್ಘಾಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.