ಹೊಸಪೇಟೆ (ವಿಜಯನಗರ): ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಇಬ್ಬರು ಉಪರಾಷ್ಟ್ರಪತಿಗಳು ನಗರಕ್ಕೆ ಭೇಟಿ ನೀಡಿದ್ದಾರೆ.
ನಗರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಉಪರಾಷ್ಟ್ರಪತಿ ಜಾಕೀರ್ ಹುಸೇನ್ ಅವರ ಬಳಿಕ ಎಂ. ವೆಂಕಯ್ಯ ನಾಯ್ಡು ಅವರು ಎರಡನೆಯವರು ಎನ್ನುವುದು ವಿಶೇಷ. ಈ ಇಬ್ಬರೂ ಉಪರಾಷ್ಟ್ರಪತಿಗಳು ಆಗಸ್ಟ್‌ನಲ್ಲೇ ನಗರಕ್ಕೆ ಭೇಟಿ ನೀಡಿರುವುದು ಮತ್ತೊಂದು ವಿಶೇಷ.
1962ರಿಂದ 1967ರವರೆಗೆ ಭಾರತದ ಉಪರಾಷ್ಟ್ರಪತಿ ಆಗಿದ್ದ ಜಾಕೀರ್ ಹುಸೇನ್ ಅವರು 1964ರಲ್ಲಿ ನಗರಕ್ಕೆ ಭೇಟಿ ಕೊಟ್ಟಿದ್ದರು. ಅಂದಹಾಗೆ, ಅವರು ಎರಡು ಸಮಾರಂಭಗಳಲ್ಲಿ ಭಾಗವಹಿಸಿದ್ದರು. 1964ರಲ್ಲಿ ಹೊಸಪೇಟೆ ನಗರಸಭೆಗೆ 50 ವರ್ಷ ತುಂಬಿದ್ದವು. ಅದರ ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಬಂದಿದ್ದರು.
ಇದೇ ವೇಳೆ ಅವರು ನಗರದಲ್ಲಿ ಹೊಸದಾಗಿ ಆರಂಭಿಸಿದ ವಿಜಯನಗರ ಕಾಲೇಜು ಕೂಡ ಉದ್ಘಾಟಿಸಿದ್ದರು. ಕಾಕತಾಳೀಯವೋ ಏನೋ, 1964ರ ಆಗಸ್ಟ್ 22ರಂದೇ ಕಾಲೇಜಿನ ಉದ್ಘಾಟನೆ ಮಾಡಿದ್ದರು. ಭಾನುವಾರಕ್ಕೆ (ಆ.22) ಬರೋಬ್ಬರಿ 57 ವರ್ಷಗಳು ತುಂಬಲಿವೆ. ಇದೇ ಸಂದರ್ಭದಲ್ಲೇ ಎಂ. ವೆಂಕಯ್ಯ ನಾಯ್ಡು ಅವರು ಕೂಡ ನಗರಕ್ಕೆ ಭೇಟಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ವಿಜಯನಗರ ಕಾಲೇಜು ಎದುರಿನ ತಾಲ್ಲೂಕು ಕ್ರೀಡಾಂಗಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಹೆಲಿಕ್ಯಾಪ್ಟರ್‌ನಲ್ಲಿ ಶುಕ್ರವಾರ ಬಂದಿಳಿದಿರುವ ಅವರು, ಭಾನುವಾರ ಇಲ್ಲಿಂದಲೇ ಪಯಣ ಬೆಳೆಸಲಿದ್ದಾರೆ. ಇಬ್ಬರು ತುಂಗಭದ್ರಾ ಜಲಾಶಯ ಕಣ್ತುಂಬಿಕೊಂಡಿದ್ದಾರೆ.
ಜಾಕೀರ್ ಹುಸೇನ್ ಅವರು ಭೇಟಿ ನೀಡಿದ ಚಿತ್ರ, ಕೈಬರಹದಿಂದ ಅವರಿಗೆ ಬರೆದ ಆಹ್ವಾನ ಪತ್ರಿಕೆ ಈಗಲೂ ವಿಜಯನಗರ ಕಾಲೇಜಿನ ಹಿರಿಯ ಪ್ರಾಧ್ಯಾಪಕ, ಸಾಹಿತಿ ಮೃತ್ಯುಂಜಯ ರುಮಾಲೆ ಅವರ ಸಂಗ್ರಹದಲ್ಲಿವೆ.
‘ಹೊಸಪೇಟೆ ನಗರಸಭೆಯ ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟನೆಗೆ ಜಾಕೀರ್ ಹುಸೇನ್ ಅವರು ಬರುವುದು ನಿಶ್ಚಯವಾಗಿತ್ತು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಬಳ್ಳಾರಿಯ ಅಂದಿನ ಶಾಸಕ ಅಲ್ಲಂ ಕರಿಬಸಪ್ಪ ಅವರು ಜಾಕೀರ್ ಹುಸೇನ್ ಅವರಿಂದಲೇ ವಿಜಯನಗರ ಕಾಲೇಜು ಉದ್ಘಾಟಿಸಲು ಮನಸ್ಸು ಮಾಡಿದರು. ಅಂದಿನ ರಾಜ್ಯದ ಶಿಕ್ಷಣ ಮಂತ್ರಿ ಎಸ್.ಆರ್. ಕಂಠಿ ಅವರ ಪತ್ನಿ ಮರಿಬಸಮ್ಮ ಕಂಠಿ ಅವರು ಸಂಡೂರಿನ ಯಶವಂತನಗರದವರು. ಅವರು ಅಲ್ಲಂ ಕರಿಬಸಪ್ಪ ಅವರ ಸಂಬಂಧಿಕರು. ಇಬ್ಬರು ಎಸ್.ಆರ್. ಕಂಠಿ ಅವರ ಮನವೊಲಿಸಿ ಜಾಕೀರ್ ಹುಸೇನ್ ಅವರ ಕಾರ್ಯಕ್ರಮ ನಿಗದಿಪಡಿಸಲು ಯಶಸ್ವಿಯಾಗಿದ್ದರು. ಸ್ವತಃ ಎಸ್.ಆರ್. ಕಂಠಿ ಅವರು ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು’ ಎಂದು ಸ್ಮರಿಸುತ್ತಾರೆ ಮೃತ್ಯುಂಜಯ ರುಮಾಲೆ.
‘ಕಾಕತಾಳೀಯವೋ ಅಥವಾ ವಿಧಿ ಲಿಖಿತವೋ ಜಾಕೀರ್ ಹುಸೇನ್ ಅವರು ಈ ಹಿಂದೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಈಗ ವೆಂಕಯ್ಯ ನಾಯ್ಡು ಅವರು ಭೇಟಿ ನೀಡಿರುವುದು ವಿಶೇಷ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.