ADVERTISEMENT

ನಿರ್ಬಂಧ ಮೀರಿ ಬನಶಂಕರಿ ರಥೋತ್ಸವ: ಭಕ್ತರ ಉತ್ಸಾಹದ ಮುಂದೆ ಪೊಲೀಸರು ಅಸಹಾಯಕ

ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 13:39 IST
Last Updated 17 ಜನವರಿ 2022, 13:39 IST
ಬಾದಾಮಿ ಸಮೀಪದ ಬನಶಂಕರಿಯಲ್ಲಿ ಸೋಮವಾರ ಸಂಜೆ ಜರುಗಿದ ದೇವಿಯ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರುಚಿತ್ರ: ಸಂಗಮೇಶ ಬಡಿಗೇರ
ಬಾದಾಮಿ ಸಮೀಪದ ಬನಶಂಕರಿಯಲ್ಲಿ ಸೋಮವಾರ ಸಂಜೆ ಜರುಗಿದ ದೇವಿಯ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರುಚಿತ್ರ: ಸಂಗಮೇಶ ಬಡಿಗೇರ   

ಬಾಗಲಕೋಟೆ: ಬಾದಾಮಿ ಸಮೀಪದ ಬನಶಂಕರಿಯಲ್ಲಿ ದೇವಿಯ ರಥೋತ್ಸವ ಸೋಮವಾರ ಸಂಜೆ ವೈಭವದಿಂದ ಜರುಗಿತು. ಕೋವಿಡ್ ಮೂರನೇ ಅಲೆ ತಡೆಗೆ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧಗಳಿಗೆ ಸೊಪ್ಪು ಹಾಕದೇ, ಪೊಲೀಸರ ಲಘು ಲಾಠಿ ಪ್ರಹಾರಕ್ಕೂ ಜಗ್ಗದೇ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಬನದ ಹುಣ್ಣಿಮೆಯ ಸೊಬಗು ಮೈದಳೆಯುವ ಮುನ್ನ ಮುಸ್ಸಂಜೆಯಲ್ಲಿ ಬನಶಂಕರಿಯ ಮಲಪ್ರಭೆಯ ತಟದಲ್ಲಿ ‘ಶಂಭೂಕೋ’ ಜಯಘೋಷ ಮಾರ್ದನಿಸಿತು. ಕರ್ನಾಟಕ ಸೇರಿ ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದ ಬಂದಿದ್ದ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಕೋವಿಡ್ ಕಾರಣದಿಂದ ಜಿಲ್ಲಾಡಳಿತ ಬನಶಂಕರಿ ಜಾತ್ರೆ ರದ್ದು ಮಾಡಿತ್ತು. ದೇವಾಲಯಕ್ಕೆ ಜನವರಿ 31ರವರೆಗೆ ಭಕ್ತರಿಗೆ ಪ್ರವೇಶ ನಿಷೇಧಿಸಿತ್ತು. ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳ ಕೈಗೊಳ್ಳಲು ಮಾತ್ರ ಅವಕಾಶ ನೀಡಿ, ಹುಣ್ಣಿಮೆ ದಿನಸಂಜೆ ಸರಳವಾಗಿ ರಥೋತ್ಸವ ಆಚರಣೆಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ದೇವಾಲಯದ ಪರಿಸರಕ್ಕೆ ಹೊರಗಿನಿಂದ ಯಾರೂ ಬಾರದಂತೆ ತಡೆಯಲು ಬನಶಂಕರಿಯ ಸಂಪರ್ಕ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸರು ವಿಶೇಷ ಬಂದೋಬಸ್ತ್ ಕೈಗೊಂಡಿದ್ದರು.

ADVERTISEMENT

ರಥೋತ್ಸವದಲ್ಲಿ ಪಾಲ್ಗೊಳ್ಳಲು ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಿಂದ ಪಾದಯಾತ್ರೆಯಲ್ಲಿ ಬಂದವರನ್ನು ದೇವಸ್ಥಾನದ ಪರಿಸರಕ್ಕೆ ಬಿಟ್ಟಿರಲಿಲ್ಲ.

ಬ್ಯಾರಿಕೇಡ್ ಕಿತ್ತರು:ಆದರೆ ಸಂಜೆ ಗೋಧೂಳಿ ಹೊತ್ತಿಗೆ ಸಮೀಪದ ಮಾಡಲಗೇರಿಯಿಂದ ರಥ ಎಳೆಯುವ ಹಗ್ಗ ಹೊತ್ತು ತಂದ ಬಂಡಿಗಳನ್ನು ಗದಗ ರಸ್ತೆ (ಚೊಳಚಗುಡ್ಡ) ಭಾಗದಿಂದ ಒಳಗೆ ಬಿಡಲಾಯಿತು. ಈ ಅವಕಾಶ ಬಳಸಿಕೊಂಡು ಭಾರೀ ಸಂಖ್ಯೆಯಲ್ಲಿ ಒಳ ಬಂದ ಭಕ್ತರ ಗುಂಪು ಬ್ಯಾರಿಕೇಡ್‌ಗಳನ್ನು ಕಿತ್ತು ಹಾಕಿ ರಥೋತ್ಸವ ಜರುಗುವ ಮೈದಾನಕ್ಕೆ ನುಗ್ಗಿತು. ಈ ವೇಳೆ ನೂಕು–ನುಗ್ಗಲು ತಡೆಯಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಕೊನೆಗೆ ಭಕ್ತರ ಉತ್ಸಾಹದ ನಡುವೆ ಅಸಹಾಯಕರಾಗಿ ನಿಂತರು.

ಅದಕ್ಕೂ ಮುನ್ನ ದೇವಿಯ ಉತ್ಸವ ಮೂರ್ತಿಯನ್ನು ವಾದ್ಯ ವೈಭವದೊಂದಿಗೆ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಅರ್ಚಕರು ರಥಾಂಗ ಹೋಮ ಕೈಗೊಂಡರು. ದೇವಾಲಯದಿಂದ ಪಾದಗಟ್ಟೆಯವರೆಗೆ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಶಾಕಾಂಬರಿ ಮೂರ್ತಿಯನ್ನು ಅರ್ಚಕರು ಪಲ್ಲಕ್ಕಿಯಲ್ಲಿ ಹೊತ್ತುತಂದು ತೇರಿನಲ್ಲಿ ಪ್ರತಿಷ್ಠಾಪಿಸಿದ್ದರು. ಮಹಿಳೆಯರು, ಮಕ್ಕಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾಸ್ಕ್, ಸುರಕ್ಷಿತ ಅಂತರ ಎಲ್ಲವೂ ಮಾಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.