ದೊಡ್ಡಬಳ್ಳಾಪುರ: ರಾತ್ರಿ ವೇಳೆ ಕಾರ್ಮಿಕರನ್ನು ಬೆದರಿಸಿ ಹಣ ಮತ್ತು ಮೊಬೈಲ್ ಸುಲಿಗೆ ಮಾಡುತ್ತಿದ್ದ ಮೂವರು ದರೋಡೆಕೋರರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಆಕಾಶ್ (19), ಪ್ರವೀಣ (18), ಹನುಮಂತ (22) ಬಂಧಿತರು. ಇವರಿಂದ ₹4.2 ಲಕ್ಷ ಮೌಲ್ಯದ 20 ಸ್ಮಾರ್ಟ್ ಪೋನ್ ವಶಕ್ಕೆ ಪಡೆಯಲಾಗಿದೆ ಎಂದು ಇನ್‌ಸ್ಪೆಕ್ಟರ್ ಸಾಧಿಕ್ ಪಾಷ ತಿಳಿಸಿದ್ದಾರೆ.
ಏ.14ರ ರಾತ್ರಿ 11.30 ಗಂಟೆ ಸುಮಾರಿನಲ್ಲಿ ಆಲೂರು-ದುದ್ದನಹಳ್ಳಿಯ ಅಮರ್ ತನ್ನ ಸ್ನೇಹಿತ ಕೋಡಿಹಳ್ಳಿಯ ನಿವಾಸಿ ಕುಮಾರ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಸೊಣ್ಣಪ್ಪನಹಳ್ಳಿ ಗ್ರಾಮಕ್ಕೆ ತೆರಳತ್ತಿದ್ದರು. ಈ ವೇಳೆ ದಾರಿ ಮಧ್ಯದಲ್ಲಿ ಮೂವರು ಅಪರಿಚಿತರು ಅಮರ್ ಅವರ ಬೈಕ್ ತಡೆದು ಮಾರಕಾಸ್ತ್ರ ತೋರಿಸಿ, ಇಬ್ಬರಿಂದ ಮೊಬೈಲ್ ಮತ್ತು ಹಣ ಕಸಿಯಲು ಯತ್ನಿಸಿದ್ದರು.
ಈ ವೇಳೆ ಸಮೀಪದ ಗ್ರಾಮಸ್ಥರು ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿದು, ಪೊಲೀಸರ ವಶಕ್ಕೆ ನೀಡಿದ್ದಾರೆ.
ಬೆಂಗಳೂರಿಗೆ ವಲಸೆ ಬಂದಿದ್ದ ಇವರು ಚಿಕ್ಕಜಾಲದಲ್ಲಿ ವಾಸವಿದ್ದುಕೊಂಡು ಗಾರೆ ಕೆಲಸ ಮಾಡುತ್ತಿದ್ದರು. ಇವರಲ್ಲಿ ಒಬ್ಬ ವಿದ್ಯಾರ್ಥಿ ಸಹ ಸೇರಿದ್ದಾರೆ.
ಉತ್ತರ ಭಾರತದ ಕಾರ್ಮಿಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಇವರು ಕಾರ್ಮಿಕರಿಗೆ ಸಂಬಳ ಆದ ದಿನ ರಾತ್ರಿ ಹೊತ್ತು ಹೊಂಚು ಹಾಕಿ ಮಾರಾಕಾಸ್ತ್ರ ತೋರಿಸಿ ಹೆದರಿಸುತ್ತಿದ್ದರು. ಇವರಿಂದ ಹಣ ಮತ್ತು ಮೊಬೈಲ್ ಸುಲಿಗೆ ಮಾಡುತ್ತಿದ್ದರು. ಸುಲಿಗೆ ಮಾಡಿದ ಹಣದಲ್ಲಿ ಮೋಜು–ಮಸ್ತಿ ಮಾಡುತ್ತಿದ್ದರು ಎಂದು ಇನ್ ಸ್ಪೆಕ್ಟರ್ ಸಾಧಿಕ್ ಪಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.