ದೇವನಹಳ್ಳಿ: ಇಲ್ಲಿನ ಕೊಯಿರಾ ಕೆರೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ರೈತ, ಸ್ಥಳೀಯ ನಿವಾಸಿ ಎಸ್.ಟಿ.ಅಮರ್‌ನಾಥ್ ಸ್ಥಳೀಯ ಗ್ರಾಮಸ್ಥರಿಗೆ ಒಂದು ಲಕ್ಷ ರೂಪಾಯಿ ಧನಸಹಾಯ ಮಾಡಿದರು.
ಕೆರೆಗಳ ಅಭಿವೃದ್ಧಿ ಕುರಿತು ಮಾತನಾಡಿದ ಅವರು, 50 ವರ್ಷಗಳ ಹಿಂದೆ ತುತ್ತು ಅನ್ನದ ಬರಗಾಲವಿತ್ತು. ಹಸಿವಿನಿಂದ ಲಕ್ಷಾಂತರ ಮಕ್ಕಳು, ನೊಂದ ಜನರು ಸಾವನ್ನಪ್ಪಿದರು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಮೆರಿಕದಿಂದ ಕೆಂಪು ಜೋಳ ಮತ್ತು ಗೋಧಿಯನ್ನು ಆಮದು ಮಾಡಿಕೊಂಡು ಸಹಕಾರ ಸಂಘಗಳ ಮೂಲಕ ಪ್ರತಿ ಕುಟುಂಬಕ್ಕೆ ಇಂತಿಷ್ಟು ವಿತರಣೆಗೆ ಮುಂದಾಗಿತ್ತು. ಇಂದಿನ ನೀರಿನ ಪರಿಸ್ಥಿತಿ ನೋಡಿದರೆ ಅದೇ ಮಾದರಿಯಲ್ಲಿ ಲೀಟರ್ ಲೆಕ್ಕದಲ್ಲಿ ವಿತರಿಸುವ ಕಾಲ ಶೀಘ್ರದಲ್ಲೆ ಬರಬಹುದೇ ಎನ್ನುವ ಮಟ್ಟಕ್ಕೆ ಜಲಮೂಲ ಅವನತಿಯತ್ತ ಸಾಗಿದೆ ಎಂದು ಹೇಳಿದರು.
ರೈತರಿರಲಿ, ಖಾಸಗಿ ಡೆವಲಪರ್ಸ್ ಇರಲಿ ಒಂದು ಕೊಳವೆ ಬಾವಿ ಕೊರೆಯಿಸಿದರೆ ನೀರು ಸಿಗುವ ಖಾತರಿ ಇಲ್ಲ. ಅದು ವಿಫಲವಾದರೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ. ಕೆರೆ ಅಭಿವೃದ್ಧಿ ಪಡಿಸಿದರೆ ಜಲಮೂಲ ರಕ್ಷಣೆಯ ಜತೆಗೆ ಕೆರೆಯ ಸುತ್ತಮುತ್ತ ಇರುವ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚುತ್ತದೆ. ಮೊದಲು ಕೆರೆ ಅಭಿವೃದ್ಧಿ ಪಡಿಸಿ ನಂತರ ಕೊಳವೆ ಬಾವಿ ಕೊರೆಯಿಸಿದರೆ ಅನುಕೂಲ, ಕಾಮಗಾರಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಹೇಳಿದರು.
ಮುಖಂಡ ಚಿಕ್ಕೆಗೌಡ ಮಾತನಾಡಿ, ಪ್ರಸ್ತುತ ಕೆರೆಯಂಗಳದ ನಾಲ್ಕು ಎಕರೆಗಳಲ್ಲಿ ಹೂಳು ಎತ್ತಲಾಗಿದೆ. ಉಳಿಕೆ ಹೂಳು ಎತ್ತಲು ಜೆ.ಸಿ.ಬಿ., ಹಿಟಾಚಿ, ವಾಹನಗಳಿಗೆ ಡೀಸೆಲ್ ಹಾಕಿಸಲು ಹಣದ ಕೊರತೆ ಇದೆ. ಸಂಘ ಸಂಸ್ಥೆಗಳು, ದಾನಿಗಳು ಸಮಾಜಸೇವಕರು ಸಹಕರಿಸಬೇಕು ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.