ಆನೇಕಲ್: ತಾಲ್ಲೂಕಿನ ಅತ್ತಿಬೆಲೆ ಕೈಗಾರಿಕಾ ಪ್ರದೇಶ ವಡ್ಡರಪಾಳ್ಯ ಬಳಿಯ ಎಟಿಎಂ ಯಂತ್ರವನ್ನು ಕದ್ದಯೊಯ್ದ ಕಳ್ಳರು ಅದರಲ್ಲಿದ್ದ ಹಣ ಪಡೆಯಲಾಗದೆ ಯಂತ್ರವನ್ನು ಮಂಚನಹಳ್ಳಿಯ ನೀಲಗಿರಿ ತೋಪಿನಲ್ಲಿ ಎಸೆದು ಹೋಗಿದ್ದಾರೆ.
ಸೋಮವಾರ ಬೆಳಗಿನ ಜಾವ 3.30ರ ಸುಮಾರಿಗೆ ಸರಕು ಸಾಗಣೆ ವಾಹನದಲ್ಲಿ ಬಂದ ವ್ಯಕ್ತಿಗಳಿಬ್ಬರು ವಡ್ಡರಪಾಳ್ಯದ ಬಳಿ ಇರುವ ಎಟಿಎಂನಲ್ಲಿ ಹಣ ಕದಿಯಲು ಯತ್ನಿಸಿದ್ದರು.
ಅದು ಸಾಧ್ಯವಾಗದೇ ಎಟಿಎಂ ಯಂತ್ರವನ್ನೇ ಕಿತ್ತು ವಾಹನದಲ್ಲಿ ಹಾಕಿಕೊಂಡು ಹೋಗಿರುವ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲಿಂದ ಹೊರಟ ಕಳ್ಳರು ಮಂಚನಹಳ್ಳಿಯ ನೀಲಗಿರಿ ತೋಪಿನಲ್ಲಿ ಎಟಿಎಂ ಅನ್ನು ಹ್ಯಾಕ್–ಸಾ ಬ್ಲೇಡ್‌ನಿಂದ ಕತ್ತರಿಸಿ ಹಣ ದೋಚುವ ಯತ್ನ ನಡೆಸಿದ್ದಾರೆ.
ಆದರೆ, ಬೆಳಗಾದರೂ ಎಟಿಎಂನಿಂದ ಹಣ ತೆಗೆಯಲು ಸಾಧ್ಯವಾಗಲಿಲ್ಲ. ಬೆಳಗಾಗುತ್ತಿದ್ದಂತೆ ಜನಂಚಾರ ಆರಂಭವಾದೊಡನೆ ಕಳ್ಳರು ಯಂತ್ರವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಸ್ಥಳೀಯ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆನರಾ ಬ್ಯಾಂಕ್‌ಗೆ ಸೇರಿದ್ದ ಎಟಿಎಂನಲ್ಲಿ ₹10 ಲಕ್ಷ ಹಣವಿತ್ತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.