ದೇವನಹಳ್ಳಿ: ಬಮೂಲ್ ಒಕ್ಕೂಟ 12 ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿನ ಸದಸ್ಯರ ಮಕ್ಕಳಿಗೆ ವಾರ್ಷಿಕ ₹ 12 ಲಕ್ಷ ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಿದೆ ಎಂದು ತಾಲ್ಲೂಕು ಹಾಲು ಒಕ್ಕೂಟ ಶಿಬಿರ ಕಚೇರಿ ಸಹಾಯಕ ವ್ಯವಸ್ಥಾಪಕ ಎಂ.ಇ. ಮುನಿರಾಜುಗೌಡ ಹೇಳಿದರು.
ಇಲ್ಲಿನ ಸಾವಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ನಡೆದ 2018–19 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿಅವರು ಮಾತನಾಡಿದರು.
‘ಒಕ್ಕೂಟದ ವತಿಯಿಂದ ಪಶು ಕೊಟ್ಟಿಗೆ ಶುಚಿತ್ವ ನಿರ್ವಹಣೆಗೆ ಮ್ಯಾಟ್, ಮೇವು ಕತ್ತರಿಸುವ ಯಂತ್ರ, ಹಾಲು ಕಡೆಯುವ ಯಂತ್ರ, ಪಶು ಸಾಕಾಣಿಕೆ ಶೆಡ್ ನಿರ್ಮಾಣಕ್ಕೆ ರಿಯಾಯಿತಿ ಮತ್ತು ಪ್ರೋತ್ಸಾಹ ಧನ ನೀಡುತ್ತದೆ’ ಎಂದು ಹೇಳಿದರು.
ಪ್ರತಿಹಸುಗಳಿಗೆ ವಿಮೆ ಮಾಡಿಸಲು ಶೇ 50 ರಷ್ಟು ಪ್ರೀಮಿಯಂ ಅನ್ನು ಒಕ್ಕೂಟ ಭರಿಸುತ್ತದೆ. ಶೇ 3.6 ರಿಂದ ಶೇ 8.5 ರವರೆ ಜಿಡ್ಡಿನಾಂಶ ಹೆಚ್ಚು ಇರುವ ಪ್ರತಿ ಲೀಟರ್ ಹಾಲಿಗೆ ಪ್ರತ್ಯೇಕ ಹೆಚ್ಚುವರಿ ಹಣ ಸಿಗಲಿದೆ. ಗುಣಮಟ್ಟದ ಹಾಲಿಗೆ ಹಾಲು ಉತ್ಪಾದಕರು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
’ಪಶುಗಳು ಹೆಚ್ಚು ಹಸಿವಿನಿಂದ ಇದ್ದಾಗ ಪಶು ಮೇವು ಕೊಡಬೇಕೇ ಹೊರತು ಪಶು ಆಹಾರ ನೀಡಬಾರದು. ಖನಿಜಾಂಶ ಮತ್ತು ಲವಣಯುಕ್ತ ಪೌಷ್ಟಿಕಾಂಶ ಇರುವ ಸಮತೋಲನ ಆಹಾರವನ್ನು ಪಶುಗಳಿಗೆ ನಿಗದಿತ ಅವಧಿಯಲ್ಲಿ ನೀಡಬೇಕು. ಬೆಳಿಗ್ಗೆ ಮತ್ತು ಸಂಜೆ ಸಮಯಕ್ಕೆ ಸರಿಯಾಗಿ ಡೇರಿಗೆ ಹಾಲು ಪೂರೈಕೆ ಮಾಡಿದರೆ ಹಾಲು ಸಾಗಾಣಿಕೆ ವಾಹನಗಳಿಗೆ ಅನುಕೂಲವಾಗಲಿದೆ’ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಕುಮಾರ್ ಮಾತನಾಡಿ, 2018–19ನೇ ಸಾಲಿನಲ್ಲಿ ಸಹಕಾರ ಸಂಘವು ₹ 57.16 ಲಕ್ಷ ಒಟ್ಟು ವಹಿವಾಟು ನಡೆಸಿದೆ. ₹ 12.43 ಲಕ್ಷ ವ್ಯಾಪಾರ ಲಾಭದ ಪೈಕಿ ₹ 7.07 ಲಕ್ಷ ನಿವ್ವಳ ಲಾಭ ಬಂದಿದೆ. ಶೇ 3.20 ರಷ್ಟು ಬೋನಸ್ ಹಾಲು ಉತ್ಪಾದಕರಿಗೆ ನೀಡಬೇಕಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಒಂದು ಲಕ್ಷ ಹೆಚ್ಚು ಲಾಭ ಗಳಿಸಿದೆ ಎಂದು ಹೇಳಿದರು.
ಸಹಕಾರ ಸಂಘದ ಉಪಾಧ್ಯಕ್ಷ ಅಳ್ಳಪ್ಪ, ನಿರ್ದೇಶಕರಾದ ಎನ್.ರಾಜಶೇಖರ್, ಚಿಕ್ಕನಾರಾಯಣಸ್ವಾಮಿ, ಮುನಿಕೃಷ್ಣಪ್ಪ, ಮಂಜುನಾಥ್, ಆನಂದ್, ಚಿಕ್ಕಮೋಟಪ್ಪ, ಬಿ.ಚಿನ್ನಪ್ಪ, ಭಾಗಮ್ಮ ,ಮುನಿರತ್ನಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.