ಹೊಸಕೋಟೆ: ಹೊಸಕೋಟೆ ಚಿಂತಾಮಣಿ ರಸ್ತೆಯನ್ನು ಸುಮಾರು ₹39 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಿ ಮರು ಡಾಂಬರೀಕರಣ ಮಾಡುವ ಕಾಮಗಾರಿಗೆ ಸಂಸದ ಬಿ.ಎನ್.ಬಚ್ಚೇಗೌಡ ಮತ್ತು ಶಾಸಕ ಶಾಸಕ ಶರತ್ ಬಚ್ಚೇಗೌಡ ಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ‘ಹೊಸಕೋಟೆ-ಚಿಂತಾಮಣಿ ರಸ್ತೆಗೆ ಡಾಂಬರೀಕರಣ ಮಾಡಿ ಹಲವು ವರ್ಷಗಳು ಕಳೆದಿದ್ದು, ರಸ್ತೆ ಅಲ್ಲಲ್ಲಿ ಹಾಳಾಗಿದೆ. ಆದ್ದರಿಂದ ರಸ್ತೆಯನ್ನು ಮರುಡಾಂಬರೀಕರಣ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸುಮಾರು ₹39 ಕೋಟಿ ವೆಚ್ಚದದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ’ ಎಂದರು.
‘ಹೊಸಕೋಟೆಯಿಂದ ಚಿಂತಾಮಣಿಯವರೆಗೂ ಟ್ರಾಫಿಕ್ ಹೆಚ್ಚಾಗುತ್ತಿದ್ದು, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸಂಸದ ಬಚ್ಚೇಗೌಡ ಮತ್ತು ನಾನು ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ, ವಿಸ್ತರಿಸುವತೆ ಮನವಿ ಮಾಡಿದ್ದೇವೆ. ಅದರಂತೆ ಆಂಧ್ರದ ಕಡಪದಿಂದ ಅಮರಾವತಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ’ ಎಂದರು.
‘ವೈದ್ಯಕೀಯ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರೊಂದಿಗೆ ರಸ್ತೆ ಅಭಿವೃದ್ಧಿಯ ಕುರಿತು ಚರ್ಚಿಸಿದ್ದು, ಅದರಂತೆ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಮುನ್ನ ಮೊದಲ ಹಂತದಲ್ಲಿ ಮರು ಡಾಂಬರೀಕರಣ ಮಾಡಿಕೊಂಡು, ಮುಂದಿನ ದಿನಗಳಲ್ಲಿ ವಿಸ್ತರಿಸಲು ಕ್ರಮ ಜರುಗಿಸಲಾಗುವುದು. ಅಲ್ಲಿಯವರೆಗೆ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಮರುಡಾಂಬರೀಕರಣ ನೆರವಾಗಲಿದೆ’ ಎಂದರು.
‘ತಾಲ್ಲೂಕಿನ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಿಂದ ಚಿಂತಾಮಣಿಗೆ ಹೆಚ್ಚಿನ ಪ್ರಯಾಣಿಕರು ಬಂದು ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೂ ರಸ್ತೆ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಜತೆಗೆ ₹60 ಕೋಟೆ ವೆಚ್ಚದಲ್ಲಿ ಹೊಸಕೋಟೆಯಿಂದ ಮಾಲೂರು ಸೇರುವ ರಸ್ತೆ ಅಭಿವೃದ್ಧಿ, ವಿಜಯಪುರದಿಂದ ಹೊಸೂರಿಗೆ ಹೋಗುವ ರಸ್ತೆಯನ್ನು ಸುಮಾರು ₹1,875 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಆ ಕಾಮಗಾರಿಗೆ ಈಗಾಗಲೇ ಡಿಪಿಆರ್ ತಯಾರಾಗುತ್ತಿದ್ದು, ಆದಷ್ಟು ಬೇಗ ಎಲ್ಲ ರಸ್ತೆಗಳು ಉತ್ತಮ ಗುಣಮಟ್ಟದ ರಸ್ತೆಗಳಾಗಿ ಪರಿವರ್ತನೆಯಾಗಲಿವೆ’ ಎಂದರು.
ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ‘ಹೊಸಕೋಟೆಯಿಂದ ಅತ್ತಿಬೆಲೆ ರಸ್ತೆ ಮರುಡಾಂಬರೀಕರ ಮಾಡಲು ಕೊರಳೂರು ಮೂಲಕ ಬೆರಿಕೆ, ಬಾಗಲೂರು ಮಾರ್ಗವಾಗಿ 35 ಕಿ.ಮೀ ಕಾಮಗಾರಿಗೆ ₹16.50 ಕೋಟಿ ಮಂಜೂರಾಗಿದೆ. ಅದನ್ನು ಈ ವಾರದಲ್ಲಿ ಕಾಮಗಾರಿ ಮಾಡಲು ಪೂಜೆ ಹಮ್ಮಿಕೊಳ್ಳಲಾಗಿದೆ. ಹೊಸಕೋಟೆಯಿಂದ ದೂಡ್ಡಗಟ್ಟಿಗನಬ್ಬಿ, ಕೊರಳೂರು, ಸಮೇತನಹಳ್ಳಿ, ಮೇಡಿಮಲ್ಲಸಂದ್ರ ಮತ್ತು ಸರ್ಜಾಪುರದವರೆಗೂ ಮರು ಡಾಂಬರೀಕರಣ ಮಾಡುತ್ತೇವೆ’ ಎಂದರು.
‘ದಾಬಸಪೇಟೆಯಿಂದ ಹೊಸಕೋಟೆಗೆ ₹2,500 ಕೋಟಿ ಸೇರಿ ಒಟ್ಟು ₹19,500 ಕೋಟಿ ಕೇಂದ್ರ ಸರ್ಕಾರದಿಂದ ರಸ್ತೆಗಳ ಅಭಿವೃದ್ಧಿಗೆ ಸಿಕ್ಕಿದೆ. ಇದರಿಂದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕಕ್ಕೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.