ಎಂ.ಮುನಿನಾರಾಯಣ
ವಿಜಯಪುರ(ದೇವನಹಳ್ಳಿ): ದೇಶದ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಲಕ್ಷಾಂತರ ಮಂದಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಸಂಕೇತವಾಗಿ ಸಿಕ್ಕಿರುವ ಸ್ವಾತಂತ್ರ್ಯಕ್ಕೂ ವಿಜಯಪುರಕ್ಕೂ ಅವಿನಾಭಾವ ಸಂಬಂಧವಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ವಿಜಯಪುರವನ್ನು ವೇದಗಾನಪುರ, ವಡಿಗೇನಹಳ್ಳಿ ಎಂದು ಕರೆಯಲಾಗುತ್ತಿತ್ತು. 1947 ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ್ಯ ಬಂದ ವಿಜಯದ ಸಂಕೇತವಾಗಿ ವಡಿಗೇನಹಳ್ಳಗೆ ವಿಜಯಪುರವೆಂದು ನಾಮಕರಣ ಮಾಡಿ, ಅಂದಿನ ಸರ್ಕಾರದ ರಾಜ್ಯಪತ್ರದಲ್ಲಿ ಆದೇಶ ಹೊರಡಿಸಲಾಗಿತ್ತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಸಮಯದಲ್ಲಿ ಬೂದಿಗೆರೆಯಲ್ಲಿ ಹುಟ್ಟಿ ಬೆಳೆದು, ವಡಿಗೇನಹಳ್ಳಿಯಲ್ಲಿ ವಾಸವಾಗಿದ್ದ ವೈ.ಎಂ.ಗವಿಯಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು 28.09.1939ರಿಂದ 30.10.1939ರವರೆಗೆ ಜೈಲು ವಾಸ ಅನುಭವಿಸಿದ್ದರು. ಇಲ್ಲಿನ ಎ.ವಿ.ಶಂಕರಪ್ಪ, ಎಸ್.ವಿ.ಪಿಳ್ಳಣ್ಣ, ಹನುಮಂತರಾಯಪ್ಪ, ವೆಂಕಟರಾಮಯ್ಯ,(ಬಿಲ್ ಕುಲ್ ರಾಮಯ್ಯ), ಸೇರಿದಂತೆ ಹಲವರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.
ಬ್ರಿಟಿಷ್ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಹೋರಾಟಗಾರರನ್ನು ರಕ್ಷಿಸಲು ಸ್ಥಳೀಯರು ತಮ್ಮ ಮನೆಗಳಲ್ಲಿ ಆಶ್ರಯ ನೀಡುತ್ತಿದ್ದರು. ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದರು. ಚೇತರಿಕೆ ಕಂಡ ಮೇಲೆ ಹೋರಾಟಗಾರರು ಪುನಃ ಹೋರಾಟದಲ್ಲಿ ಧುಮುಕುತ್ತಿದ್ದರು ಎಂದು ಹಿರಿಯ ಸಮಾಜ ಸೇವಕ ಸೂರ್ಯಪ್ರಕಾಶ್ ಮೆಲುಕು ಹಾಕಿದರು.
ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ದೊಡ್ಡಬಳ್ಳಾಪುರದ ರುಮಾಲೆ ಚನ್ನಬಸಪ್ಪ, ಕರಿಂಖಾನ್ ಇತರರು ಮಾತನಾಡಿಸಲು ಬರುತ್ತಿದ್ದರು. ಅಭಿನಂದನಾ ಪತ್ರ ಬರೆದುಕೊಟ್ಟಿದ್ದಾರೆ ತಂದೆ 59ನೇ ವಯಸ್ಸಿನಲ್ಲೇ ನಿಧನರಾದ ಹಿನ್ನೆಲೆಯಲ್ಲಿ ಜನರೂ ಕೂಡ ಅವರನ್ನು ಮರೆದಿದ್ದಾರೆ.
ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಟಗಾರ ವೈ.ಎಂ.ಗವಿಯಪ್ಪ ಅವರ ನೆನಪಿಗಾಗಿ ಪಟ್ಟಣದಲ್ಲಿ ಯಾವುದಾದರೂ ಒಂದು ರಸ್ತೆಗೆ ಅವರ ಹೆಸರು ನಾಮಕರಣ ಮಾಡಬೇಕು. ಅವರ ಪುತ್ಥಳಿಯನ್ನು ನಿರ್ಮಾಣ ಮಾಡಿಸಿ ಅನಾವರಣಗೊಳಿಸುವ ಮೂಲಕ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸವನ್ನು ಸ್ಥಳೀಯ ಸರ್ಕಾರ ಮಾಡಬೇಕು ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.