ADVERTISEMENT

ವಪೆ ಹರಿದು ಉಸಿರಾಡಲು ಕಷ್ಟ ಪಡುತ್ತಿದ್ದ ಚಿರತೆ: ಶಸ್ತ್ರಚಿಕಿತ್ಸೆ ಬಳಿಕ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 23:43 IST
Last Updated 10 ಜುಲೈ 2024, 23:43 IST
ಶಸ್ತ್ರಚಿಕಿತ್ಸೆಗೂ ಮುನ್ನ ಚಿರತೆ
ಶಸ್ತ್ರಚಿಕಿತ್ಸೆಗೂ ಮುನ್ನ ಚಿರತೆ   

ಆನೇಕಲ್: ಹೊಟ್ಟೆ ಭಾಗ ಮತ್ತು ಶ್ವಾಸಕೋಶವನ್ನು ಬೇರ್ಪಡಿಸುವ ವಪೆ (ತಿಳುವಾದ ಹಾಳೆಯಂತ ಪದರು) ಹರಿದು ಉಸಿರಾಡಲು ಕಷ್ಟಪಡುತ್ತಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿರತೆಗೆ ಮಾರ್ಚ್‌ನಲ್ಲಿ ಪಶುವೈದ್ಯರ ತಂಡ ನಡೆಸಿದ್ದ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಈಗ ಚಿರತೆ ಚೇತರಿಸಿಕೊಳ್ಳುತ್ತಿದೆ.

ಅಪರೂಪದ ಶಸ್ತ್ರಚಿಕಿತ್ಸೆಯ ಬಳಿಕ ಚಿರತೆಯನ್ನು ಆರೇಳು ತಿಂಗಳ ಕಾಲ ಜೋಪಾನ ಮಾಡಲಾಗಿದೆ. ಚಿರತೆ  ಆರೋಗ್ಯವಾಗಿದ್ದು ಇದೀಗ  ಲವಲವಿಕೆಯಿಂದ ಓಡಾಡುತ್ತಿದೆ. ಇದು ಉದ್ಯಾನದ ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಸಂತಸ ತಂದಿದೆ.

ಡಯಾಫ್ರಾಗ್ನಾಮ್ಯಾಟಿಕ್‌ ಹರ್ನಿಯಾ (ಹೈಟಲ್‌ ಹರ್ನಿಯಾ ಟೈಪ್‌ 1) ಸಮಸ್ಯೆಯಿಂದ ನರಳುತ್ತಿದ್ದ ಚಿರತೆಯ ಹೊಟ್ಟೆಯು ಶ್ವಾಸಕೋಶದ ಮೇಲೆ ಬರುತ್ತಿತ್ತು. ಇದರಿಂದಾಗಿ ಉಸಿರಾಟದ ಸಮಸ್ಯೆ ಉಂಟಾಗುತ್ತಿತ್ತು. ಓಡಾಡಲೂ ಪರದಾಡುತ್ತಿದ್ದ ಚಿರತೆ ತಿಂದ ಆಹಾರವನ್ನೂ ವಾಂತಿ ಮಾಡಿಕೊಳ್ಳುತ್ತಿತ್ತು.    

ADVERTISEMENT

ಇದರಿಂದ ಚಿರತೆಯ ತೂಕ 13 ಕೆ.ಜಿ.ಗೆ ಇಳಿದಿತ್ತು. ಸಾವು–ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಚಿರತೆಯ ಕುರಿತು ಬನ್ನೇರುಘಟ್ಟದ ವೈದ್ಯರ ತಂಡವು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ದೊರೆತ ಬಳಿಕ ಉದ್ಯಾನದ ಪಶು ವೈದ್ಯರ ತಂಡ ಮಾರ್ಚ್ 27ರಂದು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿತ್ತು. ಈ ಶಸ್ತ್ರಚಿಕಿತ್ಸೆ ಏಷ್ಯಾದಲ್ಲಿಯೇ ಮೊದಲು ಎಂದು ಚಿಕಿತ್ಸಕರ ತಂಡ ಹೇಳಿದೆ. 

ಬನ್ನೇರುಘಟ್ಟ ಜೈವಿಕ ಉದ್ಯಾನದ ಪಶು ವೈದ್ಯರಾದ ಡಾ.ಕಿರಣ್‌ ಕುಮಾರ್, ಡಾ.ಆನಂದ್, ಡಾ.ಮಂಜುನಾಥ್‌ ಅವರ ತಂಡವು ನುರಿತ ಪ್ರಾಣಿಪಾಲಕರ ಜೊತೆಗೂಡಿ ಶಸ್ತ್ರಚಿಕಿತ್ಸೆ ನಡೆಸಿತ್ತು.

‘ಚಿರತೆ ಪ್ರಸ್ತುತ ಸುಮಾರು 40 ಕೆ.ಜಿ. ತೂಕವಿದ್ದು, ಆರೋಗ್ಯವಾಗಿದೆ. ಇಂತಹ ಶಸ್ತ್ರಚಿಕಿತ್ಸೆಯಿಂದ ಚಿರತೆಗಳು ಬದುಕುಳಿದ ಪ್ರಕರಣಗಳಿಲ್ಲ. ವೈದ್ಯಕೀಯ ದಾಖಲೆಗಳ ಪ್ರಕಾರ ಏಷ್ಯಾದಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ಇದೇ ಮೊದಲು’ ಎಂದು ಡಾ.ಕಿರಣ್‌ ಕುಮಾರ್‌ ತಿಳಿಸಿದರು.

ಗದ್ದೆಯಲ್ಲಿ ಸಿಕ್ಕಿದ್ದ ಮೂರು ಕಾಲುಗಳ ಮರಿ!

ಮಂಡ್ಯ ಜಿಲ್ಲೆಯ ಗದ್ದೆಯೊಂದರಲ್ಲಿ ಸಿಕ್ಕಿದ್ದ ನಾಲ್ಕು ತಿಂಗಳ ಚಿರತೆ ಮರಿಯನ್ನು ಮೈಸೂರು ಮೃಗಾಲಯದವರು ಸಂರಕ್ಷಿಸಿದ್ದರು.  2023ರ ಡಿ. 6ರಂದು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ನೀಡಿದ್ದರು. ಚಿರತೆಗೆ ಮುಂಭಾಗದ ಬಲಗಾಲು ಇರಲಿಲ್ಲ. ಮೂರು ಕಾಲುಗಳಿಂದಾಗಿ ಚಿರತೆ ಓಡಾಡಲೂ ಪರದಾಡುತ್ತಿತ್ತು. 

ಬನ್ನೇರುಘಟ್ಟ ಉದ್ಯಾನದ ಮೂರು ಕಾಲಿನ ಚಿರತೆಯ ನೋಟ
ಶಸ್ತ್ರಚಿಕಿತ್ಸೆಯ ನಂತರ ಚಟುವಟಿಕೆಯಿಂದಿರುವ ಚಿರತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.