ದೇವನಹಳ್ಳಿ: ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ನಾ ನಾಯಕಿ’ ಸಮಾವೇಶಕ್ಕೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ದೇವನಹಳ್ಳಿಯ ಸಾದಹಳ್ಳಿ ಟೋಲ್ ಬಳಿ ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಮಾಜಿ ಶಾಸಕ ಜಮೀರ್ ಅಹ್ಮದ್ ಖಾನ್, ಎಂ.ಬಿ. ಪಾಟೀಲ್ ಸೇರಿದಂತೆ ರಾಜ್ಯ ನಾಯಕರನ್ನು ಒಳಗೊಂಡ ತಂಡ ಅವರನ್ನು ಕರೆತಂದರು.
ಪ್ರಿಯಾಂಕಾ ಗಾಂಧಿ ಟೋಲ್ ಬಳಿ ಆಗಮಿಸುತ್ತಿದ್ದಂತೆ ತಮಟೆ ನಾದನಕ್ಕೆ ಮಹಿಳಾ ಕಾರ್ಯಕರ್ತರು ಕುಪ್ಪಳಿಸಿ ಜೈಕಾರ ಕೂಗಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಾಂತ ಕುಮಾರ್ 150 ಕೆ.ಜಿ ತೂಕದ ಸೇಬಿನ ಹಾರ ಹಾಕಿ ಸ್ವಾಗತಿಸಿದರು. ಪ್ರಿಯಾಂಕಾ ವೇದಿಕೆಯಿಂದ ಕೆಳಗಿಳಿದು ಕಾರ್ಯಕರ್ತರಿಗೆ ಹಸ್ತಲಾಘವ ಮಾಡುವ ಮೂಲಕ ಧನ್ಯವಾದ ತಿಳಿಸಿದರು.
ಕನ್ನಮಂಗಲ ಗೇಟ್‌ನಿಂದ ಕಾಲ್ನಡಿಗೆಯಲ್ಲಿ ಬಂದ ಮಹಿಳೆಯರು ಕಾಂಗ್ರೆಸ್ ನಾಯಕರಿಗೆ ಜೈಕಾರ ಕೂಗುತ್ತಿದ್ದರು. ಬಿಜೆಪಿಯವರು ದೇಶ ಹಾಳು ಮಾಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಂದು ಘೋಷಣೆ ಹಾಕಿದರು. ಕಾಂಗ್ರೆಸ್ ಬಾವುಟ ಹಿಡಿದು ಶಕ್ತಿ ಪ್ರದರ್ಶನಕ್ಕೆ ಮುಂದಾದರು. ವೇದಿಕೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಕೆಲ ಕಾಂಗ್ರೆಸ್ ನಾಯಕರೊಂದಿಗೆ ಪೊಲೀಸರು ವಾಗ್ವಾದಕ್ಕೆ ಇಳಿದಿದ್ದ ದೃಶ್ಯ ಕಂಡುಬಂತು.
‘ದೇವನಹಳ್ಳಿ ಕ್ಷೇತ್ರದಿಂದ 3 ಸಾವಿರಕ್ಕೂ ಹೆಚ್ಚಿನ ಜನರು ಸಮಾವೇಶದಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ಸ್ವಾಗತಕ್ಕೆ ಟೋಲ್‌ಬಳಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಜಮಾವಣೆಯಾಗಿರುವುದು ನೋಡಿದರೇ ಈಗಾಗಲೇ ಕಾಂಗ್ರೆಸ್ ಅಲೆ ಪ್ರಾರಂಭವಾಗಿರುವು ಕುರಿತು ಇದೊಂದು ಮುನ್ಸೂಚನೆಯಾಗಿದೆ. ನಾಡಿನ ತಾಯಂದಿರ ಆಶೀರ್ವಾದದಿಂದ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ’ ಎಂದು ಮಾಜಿ ಶಾಸಕ ವೆಂಕಟಸ್ವಾಮಿ ಹೇಳಿದರು.
ಬ್ಯಾಟರಾಯನಪುರ ಶಾಸಕ ಕೃಷ್ಣಭೈರೇಗೌಡ, ಮಾಜಿ ಶಾಸಕ ಮುನಿನರಸಿಂಹಯ್ಯ, ಜಿಲ್ಲಾ ಉಪಾಧ್ಯಕ್ಷ ವಿ.ಶಾಂತಕುಮಾರ್, ಸಿ.ಜಗನ್ನಾಥ್, ಶೆಟ್ಟಿಗೆರೆ ರಾಜಣ್ಣ, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಅನಂತಕುಮಾರಿ, ಮಹಿಳಾ ಘಟಕದ ಅಧ್ಯಕ್ಷೆ ರಾಧರೆಡ್ಡಿ, ಜಿ.ಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಆರ್.ನಾಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.