ವಿಜಯಪುರ: ‘ಸಾಧನೆ ಮಾಡಬೇಕೆನ್ನುವ ಛಲವೊಂದಿದ್ದರೆ ಅಂಗವೈಕಲ್ಯ ಯಾವ ಲೆಕ್ಕಕ್ಕೂ ಬರುವುದಿಲ್ಲ. ನಮ್ಮೊಳಗಿನ ಕೌಶಲಗಳನ್ನೇ ನಮ್ಮ ಸಾಧನೆಗೆ ಮೆಟ್ಟಿಲನ್ನಾಗಿಸಿಕೊಳ್ಳಬೇಕು’ ಎಂದು ಗುರುರಾಜ್ ಹೇಳುತ್ತಾರೆ.
ಹೋಬಳಿಯ ದಂಡಿಗಾನಹಳ್ಳಿ ನಿವಾಸಿಯಾಗಿರುವ ಗುರುರಾಜ್ ಅವರಿಗೆ ಎರಡು ವರ್ಷವಾಗಿದ್ದಾಗ ಪೊಲಿಯೋದಿಂದ ಎಡಗಾಲು ಇಲ್ಲದಂತಾಗಿದೆ. 10ನೇ ತರಗತಿಯವರೆಗೂ ವ್ಯಾಸಂಗ ಮಾಡಿರುವ ಅವರು, ‘ನಾನೊಬ್ಬ ಅಂಗವಿಕಲ’ ಎನ್ನುವ ಸಂಕುಚಿತ ಭಾವನೆಯನ್ನು ಬದಿಗೊತ್ತಿ, ಚಿಕ್ಕಂದಿನಲ್ಲೆ ಮೈಗೂಡಿಸಿಕೊಂಡಿದ್ದ ಚಿತ್ರಕಲೆಯನ್ನು ತನ್ನ ಜೀವನದ ಮುಂದಿನ ಗುರಿಯನ್ನಾಗಿಸಿಕೊಂಡಡರು.
ಚಿತ್ರಕಲೆಯಲ್ಲೇ ವೃತ್ತಿ ಬದುಕು ಆರಂಭಿಸಿದ ಅವರು, ಚಾಕ್ ಪೀಸ್, ನ್ಯೂಸ್ ಪೇಪರ್ ಸೇರಿದಂತೆ ತ್ಯಾಜ್ಯ ವಸ್ತುಗಳಿಂದ ಅನೇಕ ಕಲಾಕೃತಿಗಳನ್ನು ತಯಾರಿಸಿ ಚಿತ್ರಕಲಾ ಪರಿಷತ್ತಿನಿಂದ ನಡೆಯುವ ಪ್ರದರ್ಶನ ಮೇಳೆ, ಮೈಸೂರು ದಸರಾ ಸೇರಿದಂತೆ ಅನೇಕ ಸಮಾರಂಭಗಳಲ್ಲಿ ಪ್ರದರ್ಶನ ಮಾಡಿ ಗಮನಸೆಳೆದಿದ್ದಾರೆ.
ಬೇಲೂರಿನ ಚನ್ನಕೇಶವಸ್ವಾಮಿ ದೇವಾಲಯದ ಚಿತ್ರವನ್ನು ನೋಡಿದ ಅವರು, ಅದೇ ಮಾದರಿಯಲ್ಲಿ ಚಾಕ್ ಪೀಸ್‌ನಲ್ಲಿ ದೇವಾಲಯ ತಯಾರಿಸಿದ್ದಾರೆ. ತನ್ನದೇ ಆಕೃತಿಯಲ್ಲಿ ರೋಬೊ ಮಾನವನನ್ನು ಸೃಷ್ಟಿಸಿದ್ದಾರೆ. ಕೇವಲ ಕಲಾಕೃತಿಗಳನ್ನು ರಚಿಸುವುದರಲ್ಲಷ್ಟೇ ಅಲ್ಲದೆ, ಜೀವನೋಪಾಯಕ್ಕಾಗಿ ಫ್ಲವರ್ ಡೆಕೋರೇಷನ್ ಮಾಡುವ ಕಲೆಯನ್ನು ಮಾಡುತ್ತಿದ್ದಾರೆ.
ತನಗೆ ಗೊತ್ತಿರುವ ಕಲೆಯನ್ನು ಬಳಕೆ ಮಾಡಿಕೊಂಡು, ಸ್ವಂತ ದುಡಿಮೆಯಲ್ಲಿ ತೊಡಗಿಸಿಕೊಂಡಿರುವ ಗುರುರಾಜ್, 20 ಮಂದಿಗೆ ಕೆಲಸ ಕೊಟ್ಟಿದ್ದಾರೆ. ತಮ್ಮ ಕುಟುಂಬದ ಭೂಮಿಯಲ್ಲಿ ದ್ರಾಕ್ಷಿ ಬೆಳೆಯುವುದು, ಕೋಳಿ ಸಾಕಾಣಿಕೆ ಸೇರಿದಂತೆ ಕೃಷಿ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅವರ ಚಿತ್ರಕಲೆಯನ್ನು ಗುರುತಿಸಿರುವ ಅನೇಕ ಸಂಘ, ಸಂಸ್ಥೆಗಳು ಇವರನ್ನು ಗೌರವಿಸಿವೆ.
‘ಒಂದು ದಿನವೂ ನಾನು ಅಂಗವಿಕಲ ಎನ್ನುವ ಭಾವನೆ ನನಗೆ ಬಂದಿಲ್ಲ. ನನಗೆ ಗೊತ್ತಿರುವ ಕಲೆಯನ್ನೆ ಬಳಕೆ ಮಾಡಿಕೊಳ್ಳುತ್ತಿದ್ದೇನೆ. ನಾನು ಬೇರೆಯವರ ಬಳಿ ಕೈ ಚಾಚಿಕೊಂಡು ಕೆಲಸ ಮಾಡುವುದರ ಬದಲಿಗೆ 20ಕ್ಕೂ ಹೆಚ್ಚು ಮಂದಿಗೆ ಕೆಲಸ ಕೊಟ್ಟಿದ್ದೇನೆ. ಈ ಆತ್ಮ ತೃಪ್ತಿ ನನಗಿದೆ. ನನಗಿರುವ ಕೌಶಲಗಳನ್ನು ರೂಢಿಸಿಕೊಳ್ಳುತ್ತಿದ್ದೇನೆ. ಶಾಮಿಯಾನ, ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡಿಕೊಂಡು ಸ್ವಾವಲಂಬಿಯಾಗಿ ಬದುಕುತ್ತಿದ್ದೇನೆ’ ಎಂದು ಗುರುರಾಜ್ ಹೇಳಿದರು.
‘ನಾನು ಅಂಗವಿಕಲನಾಗಿ ಯಾರಿಗೂ ಭಾರವಾಗಬಾರದು. ನನಗೆ ಪತ್ನಿ ಮಂಜುಳಾ, ಇಬ್ಬರು ಗಂಡು ಮಕ್ಕಳಿದ್ದಾರೆ. ಶಂಕರ್ ಗುರು ಫ್ಲವರ್ ಡೆಕೋರೇಷನ್ ಹಾಗೂ ಶಂಕರ್ ಗುರು ಬಿಸಿನೆಸ್ ಇನ್ ಡೆಕ್ಸ್ ಆರಂಭಿಸಿದ್ದೇನೆ. ನನ್ನ ಅಣ್ಣ ಶಂಕರ್ ಅವರ ಮೇಲಿನ ಪ್ರೀತಿಗಾಗಿ ಅವರ ಹೆಸರನ್ನು ಇಟ್ಟಿದ್ದೇನೆ. ನಾನೂ ಎಲ್ಲರಂತೆ ಒಳ್ಳೆಯ ಉದ್ಯಮಿಯಾಗಬೇಕು ಎಂದು ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡು ಬದುಕು ರೂಪಿಸಿಕೊಳ್ಳುತ್ತಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.