ದೇವನಹಳ್ಳಿ: ‘ನಾಡಪ್ರಭು ಕೆಂಪೇಗೌಡರು ಆಧುನಿಕ ನಾಗರಿಕತೆಯ ಸೃಷ್ಟಿಕರ್ತರಾಗಿದ್ದಾರೆ. ಬೆಂಗಳೂರು ನಗರ ಸ್ಥಾಪಿಸಿ ಅಲ್ಲಿನ ಜನರಿಗೆ ಸುಸಂಸ್ಕೃತಿ, ಶಾಂತಿಯ ಬದುಕು, ವಿದ್ಯೆ, ಸಮೃದ್ಧಿಯುತ ಜೀವನ ನಡೆಸಲು ಅವಕಾಶ ಮಾಡಿಕೊಟ್ಟ ಜನ ಕಲ್ಯಾಣೋದ್ಧಾರಕ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಗುರುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರಿನ ನೆಲ ಶ್ರೀಮಂತ ಇತಿಹಾಸ ಹೊಂದಿದೆ. ದೇಶ-ವಿದೇಶಗಳಿಂದ ಬಂದಿಳಿಯುವ ಪ್ರತಿಯೊಬ್ಬರು ಈ ಮಣ್ಣಿನ ಕುರಿತು ತಿಳಿಯುವ ಅವಶ್ಯಕತೆ ಇದೆ. ಯಾವ ನೆಲಕ್ಕೆ ಇತಿಹಾಸವಿದೆಯೋ ಅಲ್ಲಿ ಭವಿಷ್ಯವಿದೆ ಎಂದರು.
ವಿಶ್ವ ಮಟ್ಟದಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ದೇವನಹಳ್ಳಿ ನಗರದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಕೆಂಪೇಗೌಡರ ಆದರ್ಶದಂತೆ ಸುಸರ್ಜಿತ ನಗರ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿದೆ ಎಂದು ತಿಳಿಸಿದರು.
ಇಲ್ಲಿನ ವಿಮಾನ ನಿಲ್ದಾಣದವರೆಗೂ ಈಗಾಗಲೇ ಮೆಟ್ರೋ ಸಂಪರ್ಕ ಕಾಮಗಾರಿ ಚಾಲ್ತಿಯಲ್ಲಿದೆ. ಮೋದಿ ಅವರ ದೂರದೃಷ್ಟಿ ಯೋಜನೆಯಾದ ಸಬ್ ಅರ್ಬನ್ ರೈಲ್ವೆ ಸಂಪರ್ಕವನ್ನೂ ಕಲ್ಪಿಸಲಿದ್ದೇವೆ. ಈಗಾಗಲೇ ಬಾಹ್ಯಾಕಾಶ ಕ್ಷೇತ್ರದ ಅನೇಕ ಕೈಗಾರಿಕೆಗಳು ದೇವನಹಳ್ಳಿಯಲ್ಲಿ ತಲೆ ಎತ್ತಿವೆ. ಮತ್ತಷ್ಟು ಅಭಿವೃದ್ಧಿಗೆ ವೇಗ ನೀಡುವ ಕೆಲಸ ಸರ್ಕಾರ ಮಾಡಲಿದೆ
ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಕೆಂಪೇಗೌಡರ ಪ್ರಗತಿಯ ಪ್ರತಿಮೆ ಉದ್ಘಾಟನೆಗೂ ಮುನ್ನ ಅಭಿಯಾನ ನಡೆಯಲಿದೆ. ಪ್ರತಿ ಹಳ್ಳಿಯಲ್ಲಿನ ಕೆರೆ, ಕಟ್ಟೆ, ಕಲ್ಯಾಣಿ ಮತ್ತು ನದಿಗಳಿಂದ ಪವಿತ್ರವಾದ ಮಣ್ಣು ಹಾಗೂ ಜಲವನ್ನು ಸಂಗ್ರಹಿಸಲಾಗುವುದು. 31 ಜಿಲ್ಲೆಯಲ್ಲಿಯೂ ಎಲ್‌ಇಡಿ ಅಲಂಕೃತ ವಾಹನದ ಮೂಲಕ ಕೆಂಪೇಗೌಡರ ಸಾಕ್ಷ್ಯಚಿತ್ರ ಪ್ರಸಾರವೂ ಆಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಸುಧಾಕರ್, ಸಚಿವರಾದ ಆರ್. ಅಶೋಕ, ಎಸ್.ಟಿ. ಸೋಮಶೇಖರ್, ಮುನಿರತ್ನ, ನಾರಾಯಣಗೌಡ, ಗೋಪಾಲಯ್ಯ, ಸಂಸದ ಪಿ.ಸಿ. ಮೋಹನ್, ರಾಜ್ಯಸಭಾ ಸದಸ್ಯ ಜಗ್ಗೇಶ್, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ವೈ.ಎ. ನಾರಾಯಣಸ್ವಾಮಿ, ಶಾಸಕರಾದ ಎಸ್.ಆರ್. ವಿಶ್ವನಾಥ, ಎಲ್.ಎನ್. ನಾರಾಯಣಸ್ವಾಮಿ, ಅ. ದೇವೇಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.