ಹೊಸಕೋಟೆ: ಮೂರು ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಎನ್‌ಇಪಿ ಶಿಕ್ಷಣ ಕ್ರಮ ರದ್ದು ಮಾಡಿರುವ ಕಾಂಗ್ರೆಸ್ ಸರ್ಕಾರ 4 ವರ್ಷಗಳ ಎನ್‌ಇಪಿ ಶಿಕ್ಷಣಕ್ಕೆ ದಾಖಲಾದ ವಿದ್ಯಾರ್ಥಿಗಳನ್ನು ಕಡೆಗಣಿಸಿದೆ. ಇದನ್ನು ಸರಿಪಡಿಸಬೇಕು ಎಂಬ ಕೂಗು ವಿದ್ಯಾರ್ಥಿಗಳಿಂದ ಕೇಳಿ ಬಂದಿದೆ.
ಎನ್‌ಇಪಿ ಅಡಿ ಪದವಿ ಶಿಕ್ಷಣಕ್ಕೆ ದಾಖಲಾಗಿದ್ದ 2021-22, 2022-23 ಮತ್ತು 2023-24ನೇ ಸಾಲಿನ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಅನ್ವಯಿಸುವುದಿಲ್ಲವಾದರೂ ಎನ್‌ಇಪಿ ನೀತಿಗೆ ಮತ್ತು ಪಠ್ಯಕ್ರಮಕ್ಕೆ ಒಗ್ಗಿಕೊಂಡು ಓದುತ್ತಿದ್ದ ವಿದ್ಯಾರ್ಥಿಗಳಿಗೆ ಏಕಾಏಕಿ ಹೊಸ ಶಿಕ್ಷಣ ನೀತಿ ಜಾರಿಯಿಂದ ಸಮಸ್ಯೆ ಉಂಟಾಗಿದೆ.
ಒಂದು ವರ್ಷದ ಅವಕಾಶ ಕಡಿತ: ಪದವಿ ಶಿಕ್ಷಣದಲ್ಲಿ ಅಂತಿಮ ಪದವಿ ಮುಗಿಯುವುದರೊಳಗೆ ಎಲ್ಲ ವಿಷಯಗಳನ್ನು ಪಾಸ್ ಮಾಡಿಕೊಳ್ಳಲು ಅವಕಾಶವಿತ್ತು. ಆದ್ದರಿಂದ ಎನ್‌ಇಪಿ ನಾಲ್ಕು ವರ್ಷದ ಪದವಿ ಎಂಬ ಕಾರಣಕ್ಕೆ ಉಳಿದ ಮೂರು ವರ್ಷಗಳಲ್ಲಿ ಪಾಸಾಗದೆ ಉಳಿದಿದ್ದ ವಿಷಯಗಳನ್ನು ಅಂತಿಮ ವರ್ಷದಲ್ಲಿ ಬರೆದು ಉತ್ತೀರ್ಣವಾಗಬಹುದು ಎಂಬ ಭರವಸೆಯಲ್ಲಿ ವಿದ್ಯಾರ್ಥಿಗಳು ಇದ್ದರು. ಆದರೆ, ಇದೀಗ ನಾಲ್ಕನೇ ವರ್ಷದ ಆನರ್ಸ್ ಪದವಿಗೆ ಅವಕಾಶವಿಲ್ಲದ ಕಾರಣ ಮೂರು ವರ್ಷಗಳಲ್ಲಿ ಉತ್ತೀರ್ಣವಾಗದೆ ಉಳಿಸಿಕೊಂಡಿರುವ ವಿಷಯಗಳನ್ನು ಪಾಸು ಮಾಡಿಕೊಳ್ಳಲಾಗದೆ, ಮುಂದಿನ ವರ್ಷಕ್ಕೆ ದಾಖಲಾತಿ ಪಡೆಯಲಾಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ವಿದ್ಯಾರ್ಥಿಗಳ ನಿರಾಸಕ್ತಿ: ಬೆಂಗಳೂರು ಉತ್ತರ ವಿವಿಯಲ್ಲಿ ಎನ್‌ಇಪಿ ನಾಲ್ಕನೆ ವರ್ಷದ ಆನರ್ಸ್ ಕೋರ್ಸ್ ಪ್ರಾರಂಭಿಸುವ ಕುರಿತು ವಿ.ವಿ ವ್ಯಾಪ್ತಿ ಪದವಿ ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಬಹುತೇಕ ಪ್ರಾಂಶುಪಾಲರು ಪದವಿ ನಾಲ್ಕನೇ ವರ್ಷದ ಆನರ್ಸ್ ಕೋರ್ಸ್ ಪ್ರಾರಂಭಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಇಲ್ಲ ಎಂಬುದಾಗಿ ವರದಿ ನೀಡಿದ್ದರು. ಆದ್ದರಿಂದ ಎನ್‌ಇಪಿ ಪ್ರಕಾರ 2024-25ನೇ ಸಾಲಿನಲ್ಲಿ ನಾಲ್ಕನೆ ವರ್ಷದ ಆನರ್ಸ್ ಕೋರ್ಸ್ ಪ್ರಾರಂಭ ಮಾಡಬೇಕಿತ್ತು. ಆದರೆ, ಪದವಿ ಪ್ರಾರಂಭಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.
ಕೃಪಾಂಕ ನೀಡಲಿ: ಬೆಂಗಳೂರು ವಿಶ್ವವಿದ್ಯಾಲಯವು ಎನ್‌ಇಪಿ ಅಡಿಯಲ್ಲಿ ಪರಿಚಯಿಸಿದ್ದ ಕಡ್ಡಾಯ ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 10 ಕೃಪಾಂಕ ನೀಡಿ ತೇರ್ಗಡೆಗೊಳಿಸುವ ಕುರಿತು ನಿರ್ಣಯವಾಗಿದೆ. ಅದರಂತೆ ವಿದ್ಯಾರ್ಥಿಗಳಿಗೆ 10 ಕೃಪಾಂಕ ನೀಡಿ ತೇರ್ಗಡೆಗೊಳಿಸುವ ನಿರ್ಧಾರ ಕೈಗೊಳ್ಳಲಿ ಎಂದು ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಎಂ.ಅಜಿತ್ ಕುಮಾರ್, ಎಂ.ಎಸ್.ಮೋಹನ್, ಆರ್.ವಿವೇಕ್, ಕೆ.ಎನ್.ಪೃಥ್ವಿರಾಜ್, ಚರಣ್, ಕೆ.ವಿ.ಅಂಕಿತಾ, ಬಿ.ಎನ್.ಸುಕ್ಷಿತಾ ಒತ್ತಾಯಿಸಿದರು.
12ಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ ತಡೆ: ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 12ಕ್ಕೂ ಹೆಚ್ಚು ಬಿಎಸ್ಸಿ ವಿದ್ಯಾರ್ಥಿಗಳ 2ನೇ ಸೆಮಿಸ್ಟರ್ ಫಲಿತಾಂಶವನ್ನು ವಿ.ವಿ ತಡೆ ಹಿಡಿದಿದೆ. 3ನೇ ಸೆಮಿಸ್ಟರ್‌ಗೆ ದಾಖಲಾಗಲು ಸಮಸ್ಯೆಯಾಗಿ ಪರಿಣಮಿಸಿದೆ. ವಿ.ವಿಯನ್ನು ಸಂಪರ್ಕಿಸಲಾಗಿದೆ. ಆದರೆ, ಯಾವುದೇ ಸಕಾರಾತ್ಮಕ ಉತ್ತರ ಸಿಕ್ಕಿಲ್ಲ. ಈ ಕುರಿತು ಪ್ರಾಂಶುಪಾಲರ ಗಮನಕ್ಕೆ ತಂದಿದ್ದು, ಫಲಿತಾಂಶ ತರಿಸಿಕೊಡುವುದಾಗಿ ತಿಳಿಸಿದ್ದಾರೆ. ಫಲಿತಾಂಶ ಯಾಕೆ ತಡೆ ಹಿಡಿಯಲಾಗಿದೆ ಎಂಬುದು ತಿಳಿದಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಎನ್‌ಇಪಿ ಆನರ್ಸ್ ವಿಷಯ ನಮ್ಮ ಹಂತದಲ್ಲಿ ಇಲ್ಲ. ಅದು ಈಗ ಇಲಾಖೆ ಮತ್ತು ವಿ.ವಿ ಹಂತದಲ್ಲಿ ಬಗೆಹರಿಯಬೇಕಾದ ವಿಚಾರ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಮ್ಮಿಂದ ಆಗಬಹುದಾದ ಸಹಕಾರ ನೀಡಿದ್ದೇವೆ. ಪತ್ರವನ್ನೂ ಬರೆದಿದ್ದೇವೆ. ವಿ.ವಿಯು ಈ ಬಗ್ಗೆ ಶೀಘ್ರ ಫಲಿತಾಂಶ ನೀಡಬೇಕಿದೆ. -ಪ್ರೊ.ರಾಮಲಿಂಗಪ್ಪ ಟಿ.ಬೇಗೂರು ಪ್ರಾಂಶುಪಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ
ನಾಲ್ಕನೇ ವರ್ಷದ ಆನರ್ಸ್ ಪದವಿಗೆ ಸಂಬಂಧಿಸಿದಂತೆ ಈವರಗೆ ಯಾವುದೇ ನಿರ್ಧಾರವಾಗಿಲ್ಲ. ಈ ಕುರಿತು ಸಿಂಡಿಕೇಟ್ ಸಭೆಯಲ್ಲಿ ಚರ್ಚೆಯಾದರೆ ಈ ಕುರಿತು ಚಿಂತಿಸಲಾಗುವುದು. ಅಲ್ಲದೆ, ವಿದ್ಯಾರ್ಥಿಗಳಿಗೆ ಬಾಕಿ ಉಳಿಸಿಕೊಂಡಿರುವ ವಿಷಯಗಳನ್ನು ಪಾಸು ಮಾಡಿಕೊಳ್ಳಲು ವರ್ಷಕ್ಕೆ ಎರಡು ಅವಕಾಶ ನೀಡಲಾಗಿದೆ.
-ತಿಪ್ಪೇಸ್ವಾಮಿ, ಮೌಲ್ಯಮಾಪನ ಕುಲಸಚಿವ, ಬೆಂಗಳೂರು ಉತ್ತರ ವಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.