ADVERTISEMENT

ದೇವನಹಳ್ಳಿ: ವಿದೇಶಕ್ಕೆ ಸಿಮ್‌ ಕಾರ್ಡ್‌ ಸಾಗಿಸಲು ಯತ್ನ, ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮೇ 2024, 5:25 IST
Last Updated 21 ಮೇ 2024, 5:25 IST
ಆರೋಪಿತನಿಂದ ವಶಕ್ಕೆ ಪಡೆಯಲಾದ ಸಿಮ್‌ ಕಾರ್ಡ್‌ಗಳು
ಆರೋಪಿತನಿಂದ ವಶಕ್ಕೆ ಪಡೆಯಲಾದ ಸಿಮ್‌ ಕಾರ್ಡ್‌ಗಳು   

ದೇವನಹಳ್ಳಿ: ಲಗೇಜ್‌ ಬ್ಯಾಗ್‌ನಲ್ಲಿ ಹಲವು ಸಿಮ್‌ ಕಾರ್ಡ್‌ ಬಚ್ಚಿಟ್ಟು ವಿದೇಶಗಳಿಗೆ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣ ನಿವಾಸಿ ನಾ.ರಾ. ಶ್ರೀನಿವಾಸ ರಾವ್‌ (55) ಬಂಧಿತ ಆರೋಪಿ. ಆತನಿಂದ ಜಿಯೊ, ಏರ್‌ಟೆಲ್‌ ಸೇರಿದಂತೆ ವಿವಿಧ ಕಂಪನಿಗಳ 24 ಸಿಮ್‌ ಕಾರ್ಡ್‌ ಜಪ್ತಿ ಮಾಡಲಾಗಿದೆ.

ಆರೋಪಿಯು ಇತ್ತೀಚೆಗೆ ಲಗೇಜ್‌ ಬ್ಯಾಗ್‌ ಕೆಳಗೆ ಸಿಮ್‌ ಕಾರ್ಡ್‌ ಬಚ್ಚಿಟ್ಟುಕೊಂಡು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕಾಂಬೋಡಿಯಾಗೆ ಪ್ರಯಾಣ ಬೆಳೆಸಲು ಬಂದಿದ್ದ. ಲಗೇಜ್ ತಪಾಸಣೆ ವೇಳೆ ಬ್ಯಾಗ್‌ನಲ್ಲಿ ಹಲವು ಸಿಮ್‌ ಕಾರ್ಡ್‌ ಪತ್ತೆಯಾದವು.

ADVERTISEMENT

ಕೂಡಲೇ ವಿಮಾನ ನಿಲ್ದಾಣ ತಪಾಸಣಾ ಸಿಬ್ಬಂದಿ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಅಕ್ರಮವಾಗಿ ಸಿಮ್‌ ಕಾರ್ಡ್‌ಗಳನ್ನು ವಿವಿಧ ದೇಶಗಳಿಗೆ ಸಾಗಿಸುವ ಕುರಿತು ಆರೋಪಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಅಕ್ರಮವಾಗಿ ವಿದೇಶಗಳಿಗೆ ಸೀಮ್‌ ಕಾರ್ಡ್‌ ರವಾನೆ ಕರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮತ್ತು ಅವರ ಲಗೇಜ್‌ಗಳ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು.

ಹಣದಾಸೆ ತೋರಿಸಿ ಸಿಮ್‌ ಕಾರ್ಡ್‌ ಸಂಗ್ರಹ

ಆರೋಪಿ ನಾ.ರಾ.ಶ್ರೀನಿವಾಸ್‌ ರಾವ್‌ ಪಿ.ಯುಗೆ ವಿಧ್ಯಾಭ್ಯಾಸ ಮೊಟಕುಗೊಳಿಸಿದ್ದಾನೆ. ವಿಚ್ಚೇಧಿತನಾದ ಈತನಿಗೆ ನಿರ್ದಿಷ್ಟ ಕೆಲಸವಿಲ್ಲ. ದೇಶದ ವಿವಿಧೆಡೆ ಅಮಾಯಕರಿಗೆ ಹಣದಾಸೆ ತೋರಿಸಿ, ಅವರ ಹೆಸರಿನಲ್ಲಿ ಸಿಮ್‌ ಕಾರ್ಡ್‌ ಖರೀದಿಸುತ್ತಿದ್ದ. ಬಳಿಕ ಅವುಗಳನ್ನು ವಿದೇಶಗಳಿಗೆ ಕಳ್ಳ ಸಾಗಣೆ ಮಾಡುತ್ತಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.

ಸೈಬರ್‌ ವಂಚನೆಗೆ ಸಿಮ್‌ ಬಳಕೆ

ಸಿಮ್‌ ಕಾರ್ಡ್‌ಗಳು ಸೈಬರ್‌ ವಂಚನೆ ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಳಕೆಯಾಗುವ ಸಾಧ್ಯತೆಯಿದೆ. ಇದರ ಹಿಂದೆ ಜಾಗತಿಕ ಮಟ್ಟದಲ್ಲಿ ದೊಡ್ಡ ಜಾಲವೇ ಇದೆ. ಹಲವರು ಇದರಲ್ಲಿ ಭಾಗಿಯಾಗಿರುವ ಶಂಕೆ ಇದೆ. ತನಿಖೆ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.