ವಿಜಯಪುರ: ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿರುವ ಮಾಂಸದ ಅಂಗಡಿಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪುರಸಭಾ ಮುಖ್ಯಾಧಿಕಾರಿ ಎ.ಹೆಚ್. ನಾಗರಾಜ್ ತಿಳಿಸಿದರು.
ಇಲ್ಲಿನ ಕೋಲಾರ ರಸ್ತೆಯಲ್ಲಿರುವ ಗುರಪ್ಪನಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ನಿರ್ಮಾಣ ಮಾಡಲಾಗಿರುವ ನೂತನ ಕೊಠಡಿಗಳನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.
ಸರ್ವ ಶಿಕ್ಷಣ ಅಭಿಯಾನದ ಅಡಿ 6 ಕೊಠಡಿಗಳನ್ನು ನಿರ್ಮಾಣ ಮಾಡಿದ್ದಾರೆ. 4 ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದ್ದರು ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲಿ ಇಲ್ಲದಂತಾಗಿದೆ. ಶಾಲೆಯ ಪಕ್ಕದಲ್ಲೆ ಮಾಂಸ ಮಾರಾಟ ಅಂಗಡಿಯ ದುರ್ವಾಸನೆ, ಕುರಿ, ಮೇಕೆಗಳಿಂದ ಹೊರತೆಗೆದ ತ್ಯಾಜ್ಯವನ್ನು ಇಲ್ಲೆ ಗುಂಡಿ ಮಾಡಿ ಹಾಕುತ್ತಿರುವುದರಿಂದ ಮತ್ತಷ್ಟು ವಾಸನೆಯುಂಟಾಗುತ್ತಿದೆ ಎಂದರು.
ಪಟ್ಟಣದಲ್ಲಿನ ಮಾಂಸ ಮಾರಾಟಗಾರರಿಗೆ ಅನುಕೂಲವಾಗುವಂತೆ ಧರ್ಮಪುರ ರಸ್ತೆಯಲ್ಲಿ ಭೂಮಿಯನ್ನು ಗುರ್ತಿಸಲಾಗಿದೆ. ಭೂ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿರುವುದರಿಂದ ತ್ಯಾಜ್ಯಗಳನ್ನು ಸಂಗ್ರಹಿಸಿಟ್ಟುಕೊಂಡು ಪುರಸಭೆಯಿಂದ ಬರುವ ಕಸದ ವಾಹನಗಳಿಗೆ ಕೊಡಬೇಕು ಎಂದು ಹೇಳಿದರು.
ಶಾಲೆಯ ಪಕ್ಕದಲ್ಲಿ ತಲೆ, ಕಾಲುಗಳನ್ನು ಸುಡುವುದರಿಂದ ಸುತ್ತಮುತ್ತಲಿನಲ್ಲಿ ವಾಸಮಾಡಲಿಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಾಗರಿಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ತಲೆ ಕಾಲುಗಳನ್ನು ಸುಡದಂತೆ ಕ್ರಮ ವಹಿಸಲಾಗುತ್ತದೆ.
ಮಾಂಸ ಮಾರಾಟ ಮಾಡುತ್ತಿರುವ ಮಳಿಗೆಯ ಜಾಗದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದ್ದು, ಯಾವುದೇ ಸಮಯದಲ್ಲಾದರೂ ಕಟ್ಟಡವನ್ನು ಕೆಡವಬಹುದಾಗಿದ್ದು ಮಕ್ಕಳಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು.
ಮುಖ್ಯಶಿಕ್ಷಕಿ ಸರಸ್ವತಮ್ಮ ಮಾತನಾಡಿ, ನಮ್ಮ ಶಾಲೆಯಲ್ಲಿನ ಮಕ್ಕಳಿಗೆ ಕ್ರೀಡಾ ಮೈದಾನದ ಲಭ್ಯತೆ ಇಲ್ಲದೆ ಇರುವ ಕಾರಣ ಮಕ್ಕಳು ಕ್ರೀಡೆಯಿಂದ ವಂಚಿತರಾಗುತ್ತಿದ್ದಾರೆ. ಕೊಠಡಿಗಳಿದ್ದರೂ ಪ್ರಯೋಜನಕ್ಕೆ ಬಾರದಂತಾಗಿವೆ. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಮನವಿಗಳನ್ನು ಕೊಟ್ಟಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಒಂದು ಕೊಠಡಿಯನ್ನು ಗ್ರಂಥಾಲಯಕ್ಕೆ, ಮತ್ತೊಂದು ಕೊಠಡಿಯನ್ನು ಮುಖ್ಯಶಿಕ್ಷಕರ ಕೊಠಡಿಗೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಹಳೇ ಕಟ್ಟಡದಲ್ಲಿ ಮಕ್ಕಳಿಗೆ ಸ್ಥಳಾವಕಾಶವಿಲ್ಲ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.