ದೊಡ್ಡಬಳ್ಳಾಪುರ: ಜಕ್ಕಲಮೊಡಗು ಜಲಾಶಯದಿಂದ ಚಿಕ್ಕಬಳ್ಳಾಪುರಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ದೊಡ್ಡಬಳ್ಳಾಪುರ ನಗರಕ್ಕೆ 50:50 ಅನುಪಾತದಲ್ಲಿ ನೀರು ಹಂಚಿಕೆ ಮಾಡುವಂತೆ ಒತ್ತಾಯಿಸುತ್ತಿರುವುದು ನ್ಯಾಯಸಮ್ಮತವಾಗಿದೆ. ಈ ಬಗ್ಗೆ ಸಂಬಂಧಪಟ್ಟವರೊಡನೆ ಚರ್ಚೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಸಂಸತ್ ಸದಸ್ಯ ಬಿ.ಎನ್.ಬಚ್ಚೇಗೌಡ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ಪ್ರಸ್ತುತ ಜಕ್ಕಲಮೊಡಗು ಜಲಾಶಯದಿಂದ 67:33 ಅನುಪಾತದಲ್ಲಿ ನೀರು ಸರಬರಾಜಾಗುತ್ತಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸೇರಿದ ಸಂಗ್ರಹಣ ಪ್ರದೇಶ ಹೆಚ್ಚಾಗಿದೆ. ನಗರಕ್ಕೆ ಹೆಚ್ಚು ನೀರು ಬಿಡಬೇಕೆಂದು ಮನವಿ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಜಕ್ಕಲುಮೊಡಗು ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಬೇಸಿಗೆಯ ನೀರಿನ ಸಮಸ್ಯೆ ಬಗೆಹರಿಯಲಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಸೇರಿದಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವುದು ಸಂತಸ ತಂದಿದೆ. ಪ್ರಸಿದ್ದ ಗುಂಡುಮಗೆರೆ ಕೆರೆ ತುಂಬಿ ಹರಿಯುತ್ತಿದೆ. ಆದರೂ ಕ್ಷೇತ್ರದ ಸುಮಾರು 70 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಟಾಸ್ಕ್‌ಪೋರ್ಸ್‌ನಿಂದ ಹಣ ಬಿಡುಗಡೆ ಮಾಡಿ ಕೊಳವೆಬಾವಿಗಳನ್ನು ತೋಡಿಸಲಾಗುವುದು. ನೀರಿನ ಕೊರತೆಯಿರುವ ಗ್ರಾಮಗಳಿಗೆ ನೀರುಣಿಸುಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.
‘ತಾಲ್ಲೂಕಿನಲ್ಲಿ ಕಳೆದ ಸಾಲಿನ ಫಸಲ್ ಭಿಮಾ ವಿಮೆ ಹಣ ಇನ್ನೂ ರೈತರಿಗೆ ಬೆಳೆ ನಷ್ಟಕ್ಕೆ ಅನುಗುಣವಾಗಿ ಪೂರ್ಣವಾಗಿ ತಲುಪಿಲ್ಲ ಎನ್ನುವ ದೂರುಗಳ ಬಗ್ಗೆ ಗಮನ ಹರಿಸಲಾಗುವುದು. ಆಯುಷ್ಮಾನ್ ಆರೋಗ್ಯ ಭಾರತ ಯೋಜನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ' ಎಂದರು
‘ಬಯಲು ಸೀಮೆಯ ಜಿಲ್ಲೆಗಳಿಗೆ ನೀರುಣಿಸುವ ಎತ್ತಿನಹೊಳೆ ಯೋಜನೆಯನ್ನು ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಯೋಜನೆಗೆ ₹ 8.5 ಸಾವಿರ ಕೋಟಿ ವೆಚ್ಚವಾಗಿದೆ. ಇನ್ನೂ 10 ಸಾವಿರ ಕೋಟಿ ಅಗತ್ಯವಿದೆ. ಕುಡಿಯುವ ನೀರಿಗಾಗಿ ಮಾತ್ರ ಇರುವ ದೇಶದಲ್ಲಿಯೇ ವಿಶಿಷ್ಟ ಯೋಜನೆ ಇದಾಗಿದೆ. ಯೋಜನೆಯಿಂದ 24.5 ಟಿಎಂಸಿ ನೀರು ಲಭಿಸಲಿದೆ. ಚಿಕ್ಕನಾಯಕನಹಳ್ಳಿ ಬಳಿ ಭೂಸ್ವಾಧೀನ ವಿವಾದ ಹಾಗೂ ತಿಪಟೂರು ಎತ್ತಿನಹೊಳೆ ಮಾರ್ಗದ ಪ್ರದೇಶಗಳಿಂದ ತಮ್ಮ ಪ್ರದೇಶಗಳಿಗೂ ಹೆಚ್ಚುವರಿ ನೀರಿಗಾಗಿ ಒತ್ತಾಯ ಮಾಡುತ್ತಿರುವುದರಿಂದ ಯೋಜನೆ ವಿಳಂಬವಾಗುತ್ತಿದೆ. ಇದಕ್ಕಾಗಿ ಹೆಚ್ಚುವರಿ ₹ 600 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ.
ಈ ವ್ಯಾಪ್ತಿಯ ಶಾಸಕರು ಹಾಗೂ ಸಂಸದರೊಡನೆ ಸಭೆ ನಡೆಸಲಾಗುವುದು ಎಂದ ಅವರು, ಭದ್ರಾ ನದಿ ತಿರುವು ಮಾಡಿ ಹೇಮಾವತಿಗೆ ಸಂಪರ್ಕಿಸುವುದು, ವ್ಯರ್ಥವಾಗಿ ಸಮುದ್ರ ಸೇರುವ ಕೃಷ್ಣಾ ನದಿ ತಿರುವು ಯೋಜನೆಗಳು ಚರ್ಚೆಯಲ್ಲಿದ್ದು, ಎತ್ತಿನಹೊಳೆಗೆ ಅಡ್ಡಲಾಗಿರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು’ ಎಂದರು.
ಆಮದು ಸುಂಕ ಕಡಿತ ಸಲ್ಲದು: ‘ಮುಕ್ತ ವ್ಯಾಪಾರ ಒಪ್ಪಂದದ ಅಡಿ ವಿದೇಶಿ ಹಾಲಿನ ಉತ್ಪನ್ನಗಳ ಆಮದು ಸುಂಕ ಕಡಿಮೆ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲು ಹೊರಟಿರುವುದು ಹೈನೋದ್ಯಮಕ್ಕೆ ಧಕ್ಕೆಯಾಗಲಿದೆ. ಈ ಪ್ರಸ್ತಾವವನ್ನು ಕೈಬಿಡಬೇಕು ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ನೀಡಿದ ಮನವಿ ಕುರಿತು ಪ್ರತಿಕ್ರಿಯಿಸಿದ ಸಂಸತ್ ಸದಸ್ಯರು, ಈ ನಿರ್ಧಾರದಿಂದ ರೈತರಿಗೆ ತೊಂದರೆಯಾಗುತ್ತಿರುವ ಕುರಿತು ದೂರುಗಳು ಬರುತ್ತಿವೆ. ಒಕ್ಕೂಟದ ಹಾಗೂ ಡೇರಿಗಳ ನಿರ್ಣಯವನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು. ಸಂಸದರ ₹ 5 ಕೋಟಿಗಳ ಅನುದಾನವನ್ನು ಕ್ಷೇತ್ರಕ್ಕೆ ಅಗತ್ಯವಿರುವ ಕಡೆ ಉಪಯೋಗಿಸಿಕೊಳ್ಳಲಾಗುವುದು. ತಾಲ್ಲೂಕು ಕೇಂದ್ರಗಳಲ್ಲಿ ಸಂಸದರ ಕಚೇರಿ ಆರಂಭಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು’ ಎಂದರು.
‘ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನಿರಾಕರಿಸಿರುವ ಶರತ್ ಬಚ್ಚೇಗೌಡ ಅವರ ನಿರ್ಧಾರ ವೈಯಕ್ತಿಕವಾಗಿದೆ. ಅದಕ್ಕೂ ನನಗೂ ಸಂಬಂಧವಿಲ್ಲ. ರಾಜ್ಯಕ್ಕೆ ಹೆಚ್ಚಿನ ನೆರೆ ಪರಿಹಾರ ನೀಡುವ ಕುರಿತು, ರಾಜ್ಯದ ಸಂಸದರು ಈಗಾಗಲೇ ಪ್ರಧಾನಿ ಅವರಿಗೆ ಮನವಿ ಮಾಡಿದ್ದಾರೆ. ಕನಿಷ್ಠ ₹ 10 ಸಾವಿರ ಕೋಟಿ ನೀಡುವ ನಿರೀಕ್ಷೆಯಿತ್ತು. ನೆರೆ ಪರಿಹಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನಿಯಲ್ಲಿ ಮನವಿ ಮಾಡಲಾಗುವುದು’ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಜೆ.ನರಸಿಂಹಸ್ವಾಮಿ, ಟಿ.ವಿ.ಲಕ್ಷ್ಮೀನಾರಾಯಣ್, ಅಶ್ವತ್ಥನಾರಾಯಣ್‌ಕುಮಾರ್, ಗೋಪಾಲನಾಯಕ್, ಆರ್.ಚಿದಾನಂದ್, ಶಿವಾನಂದರೆಡ್ಡಿ, ವೇಣು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲಾ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಹನುಮಂತೇಗೌಡ, ನಿರ್ದೇಶಕ ಸಿ.ಡಿ.ಅಶ್ವತ್ಥನಾರಾಯಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.