ವಿಜಯಪುರ(ದೇವನಹಳ್ಳಿ): ಹೋಬಳಿ ಗೊಡ್ಲುಮುದ್ದೇನಹಳ್ಳಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳ ತಂಡ ಗ್ರಾಮವನ್ನು ದತ್ತು ಪಡೆದು ಮನೆ, ಮನೆಗೆ ಭೇಟಿ ನೀಡಿ ಜನರ ಆರೋಗ್ಯ ಕುರಿತು ಮಾಹಿತಿ ಸಂಗ್ರಹಿಸಿತು.
ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ.ಪವಿತ್ರಾ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಮೂರು ವರ್ಷಗಳ ಅವಧಿ ಕಲಿಕೆಯಲ್ಲಿ ಗ್ರಾಮೀಣ ಭಾಗದ ಜನರ ಜೀವನ ಕುರಿತು ಅಧ್ಯಯನ ಮಾಡಬೇಕು.
150 ಮಂದಿ ವಿದ್ಯಾರ್ಥಿಗಳನ್ನು ಮೂರು ತಂಡಗಳನ್ನಾಗಿ ಮಾಡಿದ್ದೇವೆ. ಒಬ್ಬೊಬ್ಬ ವಿದ್ಯಾರ್ಥಿಗೆ ಐದು ಮನೆಗಳ ಜವಾಬ್ದಾರಿ ಕೊಡಲಾಗಿದೆ. ಪರಿಸರ ಸಂರಕ್ಷಣೆ, ಸರ್ಕಾರದಿಂದ ಸಿಗುವ ಸೌಲಭ್ಯ ಕುರಿತು ಅರಿವು ಮೂಡಿಸುವುದರ ಜತೆಗೆ ಮೂರು ವರ್ಷಗಳ ಕಾಲ ಸಂಬಂಧಪಟ್ಟ ಕುಟುಂಬದವರು ಆರೋಗ್ಯ ಸೇವೆ ಪಡೆದುಕೊಳ್ಳುವುದಕ್ಕಾಗಿ ಸಹಾಯ ಮಾಡಲಿದ್ದಾರೆ. ಅವರ ಮೊಬೈಲ್ ಸಂಖ್ಯೆ ತೆಗೆದುಕೊಂಡು ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ. ಇಂತಹ ಅವಕಾಶ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ತುರ್ತಾಗಿ ಅಗತ್ಯವಿರುವ ಔಷಧ ಆಸ್ಪತ್ರೆಯಿಂದ ಪೂರೈಕೆ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರಳೀಧರ್ ಮಾತನಾಡಿ, ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದಕ್ಕೆ ಹಿಂಜರಿಯುವ ವೈದ್ಯರ ನಡುವೆಯೂ ವೈದ್ಯಕೀಯ ವಿದ್ಯಾರ್ಥಿಗಳು ಹಳ್ಳಿಗಳಿಗೆ ಬಂದು, ಕುಟುಂಬ ದತ್ತು ತೆಗೆದುಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಆರೋಗ್ಯ ಕುರಿತು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗಲಿದೆ. ಆಸ್ಪತ್ರೆಯಿಂದ ಬಂದಿರುವವರಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಗ್ರಾಮದ ಉಸ್ತುವಾರಿ ಡಾ.ಭವಿತಾ, ಡಾ.ಮೇಘರಾಜ್, ರೇಣುಕಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.