ದೇವನಹಳ್ಳಿ: ‘ಭಾರತ ಸೇವಾದಳ ಘಟಕ ವತಿಯಿಂದ2019–20ನೇ ಸಾಲಿನಲ್ಲಿ, 50 ಸಾವಿರ ವಿವಿಧ ತಳಿಯ ಸಸಿ ನೆಡುವ ಗುರಿ ಹೊಂದಲಾಗಿದೆ’ ಎಂದು ಭಾರತ ಸೇವಾದಳ ತಾಲ್ಲೂಕು ಘಟಕ ಅಧ್ಯಕ್ಷ ಶ್ರೀನಿವಾಸ್‌ಗೌಡ ಹೇಳಿದರು.
ಇಲ್ಲಿನ ಗುರುಭವನದಲ್ಲಿ 2019–20ನೇ ಸಾಲಿನ ಶೈಕ್ಷಣಿಕ ಕ್ರಿಯಾ ಯೋಜನೆ ಮತ್ತು ಪುರಸಭಾನೂತನ ಸದಸ್ಯರಿಗೆ ಸನ್ಮಾನ ಕುರಿತು ನಡೆದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಪ್ರಸ್ತುತ ವರ್ಷವನ್ನು ಸರ್ಕಾರ ‘ಜಲಾಮೃತ ವರ್ಷ’ ಎಂದು ಘೋಷಣೆ ಮಾಡಿದೆ. ಜಲಮೂಲ ರಕ್ಷಣೆಗೆ ಸರ್ಕಾರದ ಇಲಾಖೆಯೊಂದಿಗೆ ಭಾರತ ಸೇವಾದಳ ಸಹಕರಿಸಲಿದೆ. ತಾಲ್ಲೂಕಿನಲ್ಲಿರುವ ಸರ್ಕಾರಿ ಶಾಲೆಗಳಲ್ಲಿನ ಭಾರತ ಸೇವಾದಳ ಘಟಕ ನವೀಕರಣಗೊಳಿಸಬೇಕು. ಜೂನ್ ಅಂತ್ಯಕ್ಕೆ ಶಿಕ್ಷಕರ ಮಿಲಾದ್ ಕಾರ್ಯಕ್ರಮ ನಡೆಸಬೇಕು’ ಎಂದು ಹೇಳಿದರು.
‘ಆಗಸ್ಟ್ 15 ರೊಳಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ರಾಷ್ಟ್ರಧ್ವಜದ ಮಹತ್ವ ಮತ್ತು ರಾಷ್ಟ್ರಗೀತೆ ಗೌರವದ ಬಗ್ಗೆ ಮಾಹಿತಿ ಶಿಬಿರ ನಡೆಸಲಾಗುವುದು. ಸೇವಾದಳದ ಪದಾಧಿಕಾರಿಗಳಿಗೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಗಾರ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
ಭಾರತ ಸೇವಾದಳ ತಾಲ್ಲೂಕು ಘಟಕ ಗೌರವಾಧ್ಯಕ್ಷ ಲಕ್ಷ್ಮಿನಾರಾಯಣ ಮಾತನಾಡಿ, ‘ಕಳೆದ ಐದು ವರ್ಷಗಳಿಂದ ಸೇವಾದಳದ ವತಿಯಿಂದ ಒಂದೂವರೆ ಲಕ್ಷ ಸಸಿಗಳನ್ನು ನೆಡಲಾಗಿದೆ. ನೆಟ್ಟ ಸಸಿಗಳಲ್ಲಿ ಒಣಗಿರುವುದನ್ನು ಗುರುತಿಸಿ, ಅದೇ ಜಾಗದಲ್ಲಿ ಮತ್ತೆ ಸಸಿ ನೆಡಬೇಕು. ಪ್ರಯತ್ನ ನಿರಂತರವಾದರೆ ಮಾತ್ರ ಭವಿಷ್ಯದ ಪೀಳಿಗೆಗೆ ಪ್ರತಿಫಲ ಸಿಗಲಿದೆ’ ಎಂದು ಹೇಳಿದರು.
ಸೇವಾದಳದ ಜಿಲ್ಲಾ ಘಟಕ ನಿರ್ದೇಶಕ ಎಸ್.ಆರ್.ರವಿಕುಮಾರ್ ಮಾತನಾಡಿ, ‘ಪರಿಸರ ಸಂರಕ್ಷಣೆ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಿ, ಶಾಲಾ ಹಂತದಲ್ಲೇ ಮಕ್ಕಳಿಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
ಪುರಸಭೆಗೆ ಆಯ್ಕೆಯಾಗಿರುವ ಸೇವಾದಳದ ನಿರ್ದೇಶಕ ಜಿ.ಸುರೇಶ್ ಅವರನ್ನು ಪದಾಧಿಕಾರಿಗಳು ಅಭಿನಂದಿಸಿದರು.ಸೇವಾದಳ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ತಾಲ್ಲೂಕು ಘಟಕ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಸೇವಾದಳ ನಿರ್ದೇಶಕರಾದ ವೆಂಕಟಾಚಲ, ಜಿ.ರಮೇಶ್, ದಿನಕರ್, ವೆಂಕಟರಾಜು, ಗೀತಾ ಹಾದಿಮನಿ, ಬೊಮ್ಮಕ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.