ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಪ್ರಯಾಣಿಕರನ್ನು ಬಿಟ್ಟು ಹಾರಿದ ವಿಮಾನ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 13:21 IST
Last Updated 6 ಆಗಸ್ಟ್ 2023, 13:21 IST
ಇಂಡಿಗೋ ವಿಮಾನ
ಇಂಡಿಗೋ ವಿಮಾನ   

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ ಶುಕ್ರವಾರ (ಆಗಸ್ಟ್ 4) ದಂದು ಮಂಗಳೂರಿಗೆ ತೆರಳ ಬೇಕಿದ್ದ ಇಂಡಿಗೋ ವಿಮಾನವೂ ನಿಗದಿತ ಸಮಯಕ್ಕಿಂತ 12 ನಿಮಿಷ ಮೊದಲೇ ಹಾರಾಟ ಮಾಡಿದ್ದರ ಪರಿಣಾಮವಾಗಿ 6 ಜನ ಪ್ರಯಾಣಿಕರಿಗೆ ವಿಮಾನ ತಪ್ಪಿದ್ದು, ಮಾಡದ ತಪ್ಪಿಗೆ ಸತತ 6 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ಕಾಯ ಬೇಕಾದ ಶಿಕ್ಷೆಗೆ ಗುರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಇಂಡಿಗೋ 6E 6162 ವಿಮಾನವೂ ಶುಕ್ರವಾರ ಮಧ್ಯಾಹ್ನ 2.55ಕ್ಕೆ ಹಾರಾಟ ಆರಂಭಿಸಬೇಕಿದ್ದು, ನಿಗದಿತ ಅವಧಿಗೂ ಮುನ್ನ, ಅಂದರೆ ಮಧ್ಯಾಹ್ನ 2.43ಕ್ಕೆ ಹೊರಟ ಪರಿಣಾಮದಿಂದಾಗಿ 6 ಜನ ಪ್ರಯಾಣಿಕರಿಗೆ ವಿಮಾನ ಮಿಸ್ ಆಗಿದ್ದು, ವಿಮಾನ  ಹತ್ತಲು ತೆರಳುವ ವೇಳೆಯಲ್ಲಿ ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ತಿಳಿದು ಬಂದಿದೆ.

ಇದೇ ವಿಮಾನದಲ್ಲಿ ಪ್ರಯಾಣ ಮಾಡಬೇಕಿದ್ದ ಹೆಸರು ಹೇಳಲು ಇಚ್ಚಿಸದ ಸರ್ಕಾರಿ ಅಧಿಕಾರಿಯೊಬ್ಬರು ಮಾತನಾಡಿ, ‘ಮಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಬಂದಿದ್ದು, ವಿಮಾನ ಹಾರಾಟದ ಸಮಯ ಬದಲಾವಣೆಯಾಗಿರುವ ಕುರಿತು ಯಾವುದೇ ಮಾಹಿತಿ ನೀಡಲಾಗಿಲ್ಲ. 2.55ರ ಇಂಡಿಗೋ ವಿಮಾನ ತಪ್ಪಿದ ಕಾರಣದಿಂದಾಗಿ ನಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದಂತೆ ಆಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

'ಸತತ 6 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಕಾಯುವ ದುಸ್ಥಿತಿಗೆ ದೂಡಿದ್ದರು. ರಾತ್ರಿ 8.20ಕ್ಕೆ ಇನ್ನೊಂದು ವಿಮಾನಕ್ಕಾಗಿ ಕಾಯ್ದು ಕುಳಿತು ಅದರ ಮೂಲಕ ಮಂಗಳೂರಿಗೆ ತಲುಪಿದ್ದೇವೆ. ನಾವು ಮನೆ ಸೇರುವಷ್ಟರಲ್ಲಿ ರಾತ್ರಿ 10 ಗಂಟೆಯಾಗಿತ್ತು, ಒಂದು ವೇಳೆ ಬಸ್‌ನಲ್ಲಿ ತೆರಳಿದ್ದರೇ ಅದಕ್ಕಿಂತ ಬೇಗವೇ ಮಂಗಳೂರು ತಲುಪಬಹುದಿತ್ತೇನೋ' ಎಂದು ವಿಮಾನಯಾನ ಸಂಸ್ಥೆಯ ವರ್ತನೆಯನ್ನು ಟೀಕಿಸಿದ್ದಾರೆ.

ಪ್ರಯಾಣಿಕರ ಆರೋಪವನ್ನು ಅಲೆಗೇಳೆದಿರುವ ಇಂಡಿಗೋ ವಿಮಾನಯಾನ ಸಂಸ್ಥೆಯೂ 'ವಿಮಾನಕ್ಕೆ ಹತ್ತುವ ಬಾಗಿಲುಗಳು ಮಧ್ಯಾಹ್ನ 2.43ಕ್ಕೆ ಮುಚ್ಚಿದ್ದು, ನಿಲ್ದಾಣದಿಂದ 2.57ಕ್ಕೆ ವಿಮಾನ ಹಾರಾಟ ಆರಂಭಿಸಿದೆ. ತೊಂದರೆಗೊಳ್ಳಪಟ್ಟ ಪ್ರಯಾಣಿಕರಿಗೆ ಮತ್ತೊಂದು ವಿಮಾನದ ಮೂಲಕ ಮಂಗಳೂರು ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು' ಎಂದು ಆರೋಪದ ವಿರುದ್ಧ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.