ADVERTISEMENT

ನಮ್ಮೂರ ತಿಂಡಿ | ಆನೇಕಲ್‌: ನಾಲಿಗೆ ತಣಿಸುವ ವಡೆ, ಬೋಂಡ, ಜಿಲೇಬಿ

ಆನೇಕಲ್‌ ಬಂಗಾರಪ್ಪ ಸ್ವೀಟ್ಸ್‌ ಅಂಗಡಿಯಲ್ಲಿ ಬಗೆ ಬಗೆ ಖಾದ್ಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 5:43 IST
Last Updated 23 ಜೂನ್ 2024, 5:43 IST
ಆನೇಕಲ್‌ ಬಂಗಾರಪ್ಪ ಸ್ವೀಟ್ಸ್‌ ಅಂಗಡಿ ನೋಟ
ಆನೇಕಲ್‌ ಬಂಗಾರಪ್ಪ ಸ್ವೀಟ್ಸ್‌ ಅಂಗಡಿ ನೋಟ   

ಆನೇಕಲ್ : ಪಟ್ಟಣದ ಬಂಗಾರಪ್ಪ ಸ್ವೀಟ್ಸ್‌ ಎಂದೊಡನೆ ಬಾಯಿಯಲ್ಲಿ ನೀರೂರುತ್ತದೆ. ಸಿಹಿ ಮತ್ತು ಖಾರದ ತಿಂಡಿಗಳಿಗೆ ಈ ಅಂಗಡಿ ಪ್ರಸಿದ್ಧ. ಸಂಜೆಯಾದರೆ ಇಲ್ಲಿಯ ವಡೆ, ಬೋಂಡ ಮತ್ತು ಜಿಲೇಬಿಗೆ ಜನರು ಸರದಿ ನಿಲ್ಲುತ್ತಾರೆ.

ಬಂಗಾರಪ್ಪ ಸ್ವೀಟ್ಸ್‌ನ ಮಂಜುನಾಥ, ಶಿವಕುಮಾರ್‌ ಮತ್ತು ನಿತ್ಯಾನಂದ ಸಹೋದರರು ಸಿಹಿ ಮತ್ತು ಖಾರದ ತಿಂಡಿ ಮಾಡುವುದರಲ್ಲಿ ನಿಸ್ಸೀಮರು. ಈ ಬಾಣಸಿಗರ ಕುಟುಂಬ ತಮ್ಮ ತಂದೆ ಕಾಲದಿಂದಲೂ ಇದೇ ವೃತ್ತಿ ನಡೆಸಿಕೊಂಡು ಬರುತ್ತಿದ್ದಾರೆ. 50 ವರ್ಷಗಳ ಹಿಂದೆ ಇವರ ತಂದೆ ಬಂಗಾರಪ್ಪ ಆನೇಕಲ್‌ನ ತಿಲಕ್‌ ವೃತ್ತದಲ್ಲಿ ಪುಟ್ಟ ಅಂಗಡಿಯಲ್ಲಿ ಸಿಹಿ ಮತ್ತು ಖಾರ ಮಾರಾಟ ಮಾಡುತ್ತಿದ್ದರು. ತಂದೆ ನಂತರವೂ ಇವರ ತಾಯಿ ಮತ್ತು ಕುಟುಂಬದವರು ಇದೇ ವೃತ್ತಿ ಮಾಡುತ್ತಿದ್ದಾರೆ.

ಬಂಗಾರಪ್ಪ ಸ್ವೀಟ್ಸ್‌ ಅಂಗಡಿಯಲ್ಲಿ ವಿವಿಧ ಬಗೆ ಸಿಹಿ ತಿಂಡಿ ತಯಾರಿಸಲಾಗುತ್ತದೆ. ಹನಿಡ್ರೈಫ್ರೂಟ್‌, ಜಹಾಂಗೀರ್‌, ಬಾದೂಷ, ಕಾಜು ಬರ್ಫಿ ತಯಾರಿಸುತ್ತಾರೆ. ಈ ಸಿಹಿ ತಿಂಡಿಗಳ ಜತೆಗೆ ಇಲ್ಲಿಯ ಖಾರಬೂಂದಿ, ಕೊಡು ಬಳೆ, ವಡೆ, ಬೋಂಡ ಮತ್ತು ಜಿಲೇಬಿಗೆ ಹೆಚ್ಚಿನ ಬೇಡಿಕೆ ಇದೆ.

ADVERTISEMENT

ಈ ಬಗ್ಗೆ ಮಂಜುನಾಥ್‌ ಅವರನ್ನು ಮಾತನಾಡಿಸಿದಾಗ; ಉತ್ತಮ ಗುಣಮಟ್ಟದ ಎಣ್ಣೆ ಮತ್ತು ಕಡಲೆ ಹಿಟ್ಟು ಬಳಸಲಾಗುತ್ತದೆ. ವಡೆಗೆ ಕಡಲೆಬೇಳೆ, ಕೊತ್ತಂಬರಿ ಸೊಪ್ಪು, ಸಬ್ಬಕ್ಕಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಹಾಕಿ ಹದವಾಗಿ ತಯಾರಿಸಲಾಗುತ್ತದೆ. ಪ್ರಾರಂಭದಿಂದಲೂ ಉತ್ತಮ ರುಚಿ ನೀಡಲಾಗುತ್ತಿರುವುದರಿಂದ ಸಂಜೆಯಾಗುತ್ತಿದ್ದಂತೆ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. 6.30ರಿಂದ 7.30ರವರೆಗೆ ವಡೆ ಬೋಂಡ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

ತಿಲಕ್‌ ವೃತ್ತದಲ್ಲಿ ನಡೆಯುತ್ತಿದ್ದ ಅಂಗಡಿಯನ್ನು ಮಟನ್‌ ಮಾರ್ಕೆಟ್‌ಗೆ ಬದಲಾಯಿಸಲಾಯಿತು. ನಂತರ ಭಜನೆ ಮನೆ ಸಮೀಪ ಸುಸಜ್ಜಿತ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅಂಗಡಿ ಬದಲಾದರೂ ಗ್ರಾಹಕರು ಬದಲಾಗಿಲ್ಲ. ಅಂಗಡಿಗೆ ತಿಂಡಿಗಳಿಗಾಗಿ ಹುಡುಕಿಕೊಂಡು ಬರುತ್ತಾರೆ ಎಂದು ಶಿವಕುಮಾರ್‌ ತಿಳಿಸಿದರು.

ಸಿಹಿ ಅಂಗಡಿಯಲ್ಲಿ ವ್ಯಾಪಾರದಲ್ಲಿ ನಿರತರಾಗಿರುವ ಕುಟುಂಬ
ವಡೆ ತಯಾರಿಕೆಯಲ್ಲಿ ತೊಡಗಿರುವ ಶಿವಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.