ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹೊಸ ವರ್ಷಕ್ಕೆ ಹೊಸ ಅತಿಥಿ ಆಗಮನ ಆಗಿದೆ. ಆನೆ ‘ರೂಪಾ’ ಮುದ್ದಾದ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದೆ.
ನೂತನ ಅತಿಥಿ ಆಗಮನದಿಂದ ಬನ್ನೇರುಘಟ್ಟ ಆನೆ ಕುಟುಂಬಸ್ಥರ ಸಂಖ್ಯೆ 25ಕ್ಕೇರಿದೆ. ರೂಪಾ ಜನನ ನೀಡುತ್ತಿರುವ ಮೂರನೇ ಮರಿ ಇದಾಗಿದೆ.
ಈ ಹಿಂದೆ 2016ರಲ್ಲಿ ಗೌರಿ, 2020ರಲ್ಲಿ ಬಸವ ಎಂಬ ಆನೆಗಳಿಗೆ ಜನ್ಮ ನೀಡಿತ್ತು. ಇದೀಗ ಡಿ.11ರಂದು ಉದ್ಯಾನದಲ್ಲಿ ಮತ್ತೊಂದು ಮರಿಗೆ ಜನ್ಮ ನೀಡಿದೆ. ಮರಿಯಾನೆ ಸುಮಾರು 120 ಕೆ.ಜಿ ಇದ್ದು ಆರೋಗ್ಯವಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.
ರೂಪಾ ಜನ್ಮ ನೀಡಿದ ಮರಿಯಾನೆ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಆನೆ ಸಫಾರಿಗೆ ಬರುವ ಪ್ರವಾಸಿಗರು ಮರಿಯ ಚೆಲ್ಲಾಟ ಕಣ್ತುಂಬಿಕೊಂಡು ಖುಷಿಪಡುತ್ತಿದ್ದಾರೆ.
ಆನೆ ಸಫಾರಿ ಸೀಗೇಕಟ್ಟೆ ಬಳಿ ಇರುವ ಆನೆ ಕುಟುಂಬದಲ್ಲಿ ಮರಿಯಾನೆಗೆ ತಾಯಿ ರೂಪಾ, ಅಕ್ಕ ಗೌರಿ, ಆನೆಗಳಾದ ರೀಟಾ, ವೇದಾ ಮರಿಗೆ ಓಡಾಡುವ ತರಬೇತಿ ನೀಡುತ್ತಿವೆ.
ಆನೆ ಕುಟುಂಬದ ಆರೈಕೆ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯ ಡಾ.ಕಿರಣ್ ಮತ್ತು ಆರ್‌ಎಫ್‌ಒ ದಿನೇಶ್ ಮಾರ್ಗದರ್ಶನದಲ್ಲಿ ಮಾವುತ ಕೆ.ರಾಜಣ್ಣ ತಾಯಿ ಮತ್ತು ಮರಿ ಆನೆಯನ್ನು ಜೋಪಾನ ಮಾಡುತ್ತಿದ್ದಾರೆ.
ಉದ್ದು, ಅವಲಕ್ಕಿ, ಕಡಲೆಕಾಳು, ಹೆಸರಕಾಳು, ತೆಂಗಿನಕಾಯಿ ಸೇರಿದಂತೆ ವಿಶೇಷ ಆಹಾರ ನೀಡಲಾಗುತ್ತಿದೆ ಎಂದು ಉದ್ಯಾನದ ಆನೆ ಮೇಲ್ವಿಚಾರಕ ಸುರೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.