ಆನೇಕಲ್ : ಹೊಸ ವರ್ಷದ ಮುನ್ನಾ ದಿನವಾದ ಭಾನುವಾರ ಬನ್ನೇರುಘಟ್ಟ ಜೈವಿಕ ಉದ್ಯಾನ ಜನಜಂಗುಳಿಯಿಂದ ತುಂಬಿತ್ತು. ಉದ್ಯಾನದ ಮೃಗಾಲಯ, ಸಫಾರಿ, ಚಿಟ್ಟೆ ಪಾರ್ಕ್ ಸೇರಿದಂತೆ ವಿವಿಧ ತಾಣಗಳ ವೀಕ್ಷಣೆಗೆ ಮುಗಿಬಿದ್ದರು.
ಟಿಕೆಟ್ ಕೌಂಟರ್‌ನಲ್ಲಿ ಸಂಜೆ 5ರವರೆಗೂ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುತ್ತಿದ್ದ ದೃಶ್ಯ ಕಂಡು ಬಂದಿತು.
ಬನ್ನೇರುಘಟ್ಟ ಜೈವಿಕ ಉದ್ಯಾನದ ಸಸ್ಯಹಾರಿ ಸಫಾರಿಯಲ್ಲಿ ಸಾರಂಗಗಳು ಗುಂಪು ಗುಂಪಾಗಿ ಪ್ರವಾಸಿಗರಿಗೆ ದರ್ಶನ ನೀಡಿದವು. ಆನೆ ಸಫಾರಿಯಲ್ಲೂ ಕಣ್ಣು, ಕಿವಿ ಕೇಳಿಸದ 88 ವರ್ಷದ ಗಾಯತ್ರಿ ಸಂಜೆ ಬಿಸಿಲಿಗೆ ಮೈಯೊಡ್ಡಿ ಸೀಗೆಕಟ್ಟೆ ಕೆರೆಯಲ್ಲಿ ಏಕಾಂಗಿಯಾಗಿ ನಿಂತಿದ್ದ ದೃಶ್ಯ ಗಮನ ಸೆಳೆಯಿತು.
ಆನೆಗಳ ಕುಟುಂಬದ ಓಡಾಟ ಎಲ್ಲರ ಕಣ್ಮನ ಸೆಳೆಯಿತು. ಮದವೇರಿದ ಎರಡು ಗಂಡಾನೆಗಳನ್ನು ಪ್ರತ್ಯೇಕವಾಗಿ ಇಡಲಾಗಿತ್ತು.
ಮೊಸಳೆ, ಪಕ್ಷಿಗಳ ಸೌಹಾರ್ದ: ದೀಪುಗನ ಕೆರೆಯಲ್ಲಿ ಮೊಸಳೆ ಮತ್ತು ನೈಟ್ ಹೆರಾನ್ (ರಾತ್ರಿ ಬೆಳ್ಳಕ್ಕಿ) ಪಕ್ಷಿಗಳ ಒಡನಾಟ ಸಹಬಾಳ್ವೆಗೆ ಸಾಕ್ಷಿಯಾಗಿತ್ತು.
ಗೈಡಿಂಗ್ ಟೂರ್‌ಗೆ ಉತ್ತಮ ಸ್ಪಂದನೆ
ಬನ್ನೇರುಘಟ್ಟ ಉದ್ಯಾನದಲ್ಲಿ ನೂತನವಾಗಿ ಪ್ರಾರಂಭಿಸಿರುವ ಗೈಡಿಂಗ್ ಟೂರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿದಿನ ಎರಡು ಅವಧಿಗಳಲ್ಲಿ ಮಾರ್ಗದರ್ಶಕರೊಂದಿಗೆ ಉದ್ಯಾನ ಭೇಟಿ ಕಾರ್ಯಕ್ರಮ ಪ್ರಾರಂಭವಾಗಿದೆ. ಬೆಳಗ್ಗೆ 11 ಮತ್ತು ಸಂಜೆ 3ರ ಎರಡು ಅವಧಿಯಲ್ಲಿ ಗೈಡಿಂಗ್ ಟೂರ್ ಆಯೋಜಿಸಲಾಗುತ್ತಿದೆ. ನುರಿತ ಮಾರ್ಗದರ್ಶಕರೊಂದಿಗೆ ಚಿಟ್ಟೆ ಪಾರ್ಕ್ ಎಸಿ ಬಸ್‌ನಲ್ಲಿ ಸಫಾರಿ ಭೇಟಿ ಮತ್ತು ಮೃಗಾಲಯ ಭೇಟಿ ನಡೆಸಲಾಗುತ್ತಿದೆ. ಪ್ರಾಣಿಗಳ ಚಲನವಲನ ಚಿಟ್ಟೆಯ ಜೀವನ ಪ್ರಾಣಿಗಳ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸಿಕೊಡುವ ಕಾರ್ಯಕ್ರಮ ಇದಾಗಿದೆ. ಗೈಡಿಂಗ್ ಟೂರ್‌ಗೆ ಒಬ್ಬರಿಗೆ ಒಂದು ಸಾವಿರ ದರ ನಿಗದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.