ADVERTISEMENT

ಆನೇಕಲ್: ಹುಲ್ಲುಗಾವಲಲ್ಲ, ಇದು ಕ್ರೀಡಾಂಗಣ

ಉಪಯೋಗಕ್ಕೆ ಬಾರದ ಆನೇಕಲ್‌ ಚಿಕ್ಕಕೆರೆ ಕ್ರೀಡಾಂಗಣ । ಉದ್ಘಾಟನೆಯಾದ 15 ವರ್ಷದಿಂದ ನಡೆಯದ ಕ್ರೀಡಾ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 1:09 IST
Last Updated 7 ಅಕ್ಟೋಬರ್ 2024, 1:09 IST
ಆನೇಕಲ್ ಚಿಕ್ಕಕೆರೆ ಕ್ರೀಡಾಂಗಣ
ಆನೇಕಲ್ ಚಿಕ್ಕಕೆರೆ ಕ್ರೀಡಾಂಗಣ   

ಆನೇಕಲ್ : ಪಟ್ಟಣದ ಚಿಕ್ಕಕೆರೆ ಕ್ರೀಡಾಂಗಣ ಉದ್ಘಾಟನೆಯಾಗಿ 15 ವರ್ಷ ಕಳೆದರೂ ಉಪಯೋಗಕ್ಕೆ ಬಾರದೇ ಕೆರೆಯಾಗಿ ಉಳಿದಿದ್ದು, ಹುಲ್ಲುಗಾವಲಿನಂತಾಗಿದೆ.

ಚಿಕ್ಕಕೆರೆಯನ್ನು ತಾಲ್ಲೂಕಿನ ಏಕೈಕ ಹಾಗೂ ತಾಲ್ಲೂಕು ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಿ 2009ರ ಮಾರ್ಚ್‌ ತಿಂಗಳಲ್ಲಿ ಉದ್ಘಾಟಿಸಲಾಯಿತು. ಬಳಿಕ ಇಲ್ಲಿ ಯಾವ ಕ್ರೀಡಾ ಚಟುವಟಿಕೆಗಳು 15 ವರ್ಷದಿಂದ ನಡೆದಿಲ್ಲ.

ಕೋಟ್ಯಂತರ ರೂಪಾಯಿ ವಹಿಸಿ ನಿರ್ಮಿಸಿದ ಕ್ರೀಡಾಂಗಣ ಮಳೆಗಾಲದಲ್ಲಿ ಕೆರೆಯಾಗುತ್ತದೆ. ಉಳಿದ ಸಮಯ ಹುಲ್ಲುಗಾವಲಿನಂತಾಗಿ ರಾಸುಗಳ ಹೊಟ್ಟೆ ತುಂಬಿಸುತ್ತಿದೆ.

ADVERTISEMENT

ಕೆರೆಯನ್ನು ಪರಿಪೂರ್ಣವಾಗಿ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸುವ ಮುನ್ನ ಪೆವಿಲಿಯನ್‌ ನಿರ್ಮಿಸಲಾಗಿದೆ. ಇದು ಸಹ ಉಪಯೋಗಕ್ಕ ಬಾರದಾಗಿದೆ.

ಆನೇಕಲ್‌ ಚಿಕ್ಕಕೆರೆ ಪಟ್ಟಣದ ಪ್ರಮುಖ ಜಲಮೂಲವಾಗಿತ್ತು. ಮಳೆಯ ಕೊರತೆಯಿಂದ ಮತ್ತು ಜಲಮೂಲಗಳು ಮುಚ್ಚಿಹೋಗಿದ್ದರಿಂದ ಕೆರೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತ್ತು. ಇದರಿಂದಾಗಿ ಚಿಕ್ಕಕೆರೆಯ ಜಾಗದ 10ಎಕರೆ ಪ್ರದೇಶದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣವಾಯಿತು. ಆದರೆ ಕ್ರೀಡಾಂಗಣವನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸದ ಕಾರಣ ಕ್ರೀಡಾಂಗಣದಲ್ಲಿ ಯಾವ ಆಟವು ನಡೆಯಲಿಲ್ಲ.

ತಾಲ್ಲೂಕಿನ ಏಕೈಕ ಕ್ರೀಡಾಂಗಣವಾಗಿರುವ ಆನೇಕಲ್‌ನ ಕ್ರೀಡಾಂಗಣವನ್ನುಸುಸಜ್ಜಿತ ಮತ್ತು ವೈಜ್ಞಾನಿಕವಾಗಿ ರೂಪಿಸುವ ಅವಶ್ಯಕತೆಯಿದೆ. ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎಂಬುದು ಯುವಕರು ಮತ್ತು ಕ್ರೀಡಾಸಕ್ತರ ಒತ್ತಾಸೆಯಾಗಿದೆ.

ಮರಳಿದ ಗತ ವೈಭವ

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಚಿಕ್ಕಕೆರೆ ತನ್ನ ಗತವೈಭವವನ್ನು ಮರಳಿ ಪಡೆದಿದೆ. ಇದು ಕ್ರೀಡಾಂಗಣ ಎನ್ನುವ ಸುಳಿವಿಲ್ಲದಂತೆ ಕೆರೆಯಾಗಿ ಮಾರ್ಪಟ್ಟಿದೆ. ಕ್ರೀಡಾಚಟುವಟಿಕೆಗಳು ಶಾಶ್ವತವಾಗಿ ನಿಂತು ಹೋಗುವ ಲಕ್ಷಣಗಳು ಕಾಣುತ್ತಿವೆ. ಇದಕ್ಕಾಗಿ ವೆಚ್ಚ ಮಾಡಿದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಪ್ರತಿ ಬಾರಿ ಮಳೆ ಬಂದರೂ ಕ್ರೀಡಾಂಗಣ ಕೆರೆಯಾಗುತ್ತಿದೆ. ಹಾಗಾಗಿ ವೈಜ್ಞಾನಿಕವಾಗಿ ಕ್ರೀಡಾಂಗಣವನ್ನು ರೂಪಿಸುವಲ್ಲಿ ಮತ್ತು ಯುವಕರಿಗೆ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಕ್ರೀಡಾ ಮತ್ತು ಯುವಜನ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಮೂಲ ಸೌಕರ್ಯ ಕಲ್ಪಿಸಿ

ತಾಲ್ಲೂಕಿನಲ್ಲಿ ಏಕೈಕ ಕ್ರೀಡಾಂಗಣ ಇದಾಗಿದ್ದು ಇಲ್ಲಿ ಅಥ್ಲೆಟಿಕ್ಸ್ ಟ್ರ್ಯಾಕ್ ಸುತ್ತಲೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ವೇದಿಕೆ ಒಳಾಂಗಣ ಕ್ರೀಡಾಂಗಣ ವಾಲಿಬಾಲ್ ಮತ್ತು ಟೆನಿಸ್ ಕೋರ್ಟ್ ಸೇರಿದಂತೆ ವಿವಿಧ ಮೂಲ ಸೌಕರ್ಯ ಕಲ್ಪಿಸುವ ಅಗತ್ಯತೆ ಇದೆ. ರೇಣುಕಮ್ಮ ಕ್ರೀಡಾಪಟು

ಆನೇಕಲ್‌ ಕ್ರೀಡಾಂಗಣವು ಚಿಕ್ಕಕೆರೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಪಕ್ಕದಲ್ಲಿಯೇ ರಾಜಕಾಲುವೆಯಿದೆ. ಹೀಗಾಗಿ ಸಮಸ್ಯೆಯಾಗುತ್ತಿದೆ. ಕ್ರೀಡಾಂಗಣವು ಕ್ರೀಡಾ ಚಟುವಟಿಕೆಗಳಿಗೆ ಪೂರಕ ವಾತಾವರಣವನ್ನು ಶೀಘ್ರವೇ ನಿರ್ಮಿಸಲಾಗುವುದು.
ಬಿ.ಶಿವಣ್ಣ, ಆನೇಕಲ್‌ ಶಾಸಕ
ಕೆಸರುಗದ್ದೆಯಂತಿರುವ ಕ್ರೀಡಾಂಗಣ
ಕ್ರೀಡಾಂಗಣದಲ್ಲಿ ಮಳೆ ನೀರು
ಹುಲ್ಲುಗಾವಲಿನಂತಿರುವ ಆನೇಕಲ್ ಕ್ರೀಡಾಂಗಣ
ಕ್ರೀಡಾಂಗಣದ ಮುಖ್ಯದ್ವಾರದ ಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.