ಆನೇಕಲ್ (ಬೆಂಗಳೂರು): ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿ ವ್ಯಾಪಾರದಿಂದ ನಾಲ್ಕು ಕಾಸು ಕಾಣಬಹುದು ಎಂದು ನಿರೀಕ್ಷಿಸಿದ್ದ 12 ಜೀವಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಕಮರಿ ಹೋಗಿವೆ.
ತಾಲ್ಲೂಕಿನ ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿಯ ಬಳಿ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಶನಿವಾರ ಸಂಭವಿಸಿದ ಬೆಂಕಿಯಲ್ಲಿ ಕೇವಲ ಪಟಾಕಿಗಳಷ್ಟೇ ಅಲ್ಲ, ಬದುಕು ಕಟ್ಟಿಕೊಳ್ಳಲು ಬಂದ 12 ಅಮಾಯಕ ಜೀವಗಳ ಕನಸುಗಳೂ ದಹನ ಆಗಿವೆ. ಗುರುತಿಸಲಾಗಷ್ಟು ಸುಟ್ಟು ಕರಕಲಾಗಿರುವ 12 ಶವಗಳಲ್ಲಿ ಕೆಲವು ಮಕ್ಕಳ ಶವಗಳೂ ಕಾಣುತ್ತಿವೆ.
ಕರ್ನಾಟಕ–ತಮಿಳುನಾಡು ಗಡಿಭಾಗದ ಅತ್ತಿಬೆಲೆಯಲ್ಲಿ ಪ್ರತಿ ದೀಪಾವಳಿ ಹಬ್ಬಕ್ಕೂ ಒಂದು ತಿಂಗಳ ಮುನ್ನವೇ ಪಟಾಕಿ ಮಾರಾಟ ಮಳಿಗೆಗಳು ತಲೆ ಎತ್ತುತ್ತವೆ. ತಿಂಗಳಿಗೂ ಮುಂಚೆಯೇ ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ ತಂದು ಇಲ್ಲಿಯ ಗೋದಮುಗಳಲ್ಲಿ ದಾಸ್ತಾನು ಮಾಡಲಾಗುತ್ತದೆ. ಅದೇ ರೀತಿ ಈ ಬಾರಿಯೂ ಶಿವಕಾಶಿಯಿಂದ ಲಾರಿ ಮತ್ತು ಪುಟ್ಟ ಸರಕು ಸಾಗಣೆ ವಾಹನದಲ್ಲಿ ತಂದಿದ್ದ ಪಟಾಕಿಯನ್ನು ಇಳಿಸುವಾಗ ದುರಂತ ಸಂಭವಿಸಿದೆ.
ಹಲವು ವರ್ಷಗಳಿಂದ ಅತ್ತಿಬೆಲೆಯಲ್ಲಿ ಪಟಾಕಿಯ ಮಾರಾಟದ ಭರಾಟೆ ಭರ್ಜರಿಯಾಗಿ ನಡೆಯುತ್ತಿತ್ತು. ಬೆಂಗಳೂರಿಗೂ ಇಲ್ಲಿಂದಲೇ ಪಟಾಕಿ ಸರಬರಾಜು ಆಗುತ್ತದೆ. ಆದರೆ ಹಿಂದೆಂದೂ ಇಂತಹ ಅವಘಡ ಸಂಭವಿಸಿರಲಿಲ್ಲ.
ಯಾವುದೇ ಸುರಕ್ಷಿತ ಕ್ರಮ ಇಲ್ಲ: ಅತ್ತಿಬೆಲೆ ಗಡಿಯಲ್ಲಿ ಹತ್ತಾರು ಬೃಹತ್ ಪಟಾಕಿ ಮಳಿಗೆಗಳು ದೀಪಾವಳಿಗೂ ಮುನ್ನ ಕೋಟ್ಯಂತರ ರೂಪಾಯಿ ವ್ಯಾಪಾರ ನಡೆಸುತ್ತವೆ. ಆದರೂ ಇಲ್ಲಿ ಯಾವುದೇ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದಾಗಿಯೇ ಈ ದುರಂತ ನಡೆದಿದೆ ಎನ್ನುತ್ತಾರೆ ಸ್ಥಳೀಯರು.
ಘಟನೆ ವಿವರ
l ಮಧ್ಯಾಹ್ನ 3 ಗಂಟೆ: ಬಾಲಾಜಿ ಕ್ರ್ಯಾಕರ್ಸ್ ಗೋದಾಮಿಗೆ ಪಟಾಕಿ ತುಂಬಿದ ಲಾರಿ ಮತ್ತು ಸರಕು ಸಾಗಣೆ ವಾಹನ ಆಗಮನ
l ಸಂಜೆ 3.30: ಪಟಾಕಿ ಇಳಿಸುವಾಗ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ
l ಸಂಜೆ 4: ಬೆಂಕಿ ಹೊತ್ತಿಕೊಂಡ ನಂತರ ಎಲ್ಲಾ ದಿಕ್ಕುಗಳಿಗೂ ಚಿಮ್ಮಲು ಆರಂಭಿಸಿದ ಪಟಾಕಿಗಳು. ಗೋದಾಮಿಗೂ ವ್ಯಾಪಿಸಿದ ಬೆಂಕಿಯ ಕೆನ್ನಾಲಗೆ. ದಟ್ಟವಾಗಿ ಆವರಿಸಿದ ಹೊಗೆ
l ಸಂಜೆ 4.15: ಅಗ್ನಿಶಾಮಕ ದಳದ ವಾಹನ ಆಗಮನ. ಸಿಬ್ಬಂದಿಯಿಂದ ಕಾರ್ಯಾಚರಣೆ
l ಸಂಜೆ 4.30: ಗಾಯಾಳುಗಳನ್ನು ರಕ್ಷಿಸಿ
ಆಸ್ಪತ್ರೆಗೆ ರವಾನೆ
l ಸಂಜೆ 5: ಸತತ ಪಟಾಕಿ ಸದ್ದು, ದಟ್ಟವಾದ ಹೊಗೆ, ಸ್ಥಳದಲ್ಲಿ ಜಮಾಯಿಸಿದ ಜನಜಂಗುಳಿ
l ಸಂಜೆ 7: ಸತತ ನಾಲ್ಕೈದು ತಾಸು ಹೊತ್ತಿ ಉರಿದ ಗೋದಾಮು, ವಾಹನಗಳು. ಬೆಂಕಿ ನಂದಿಸಲು ಸಿಬ್ಬಂದಿ ಪರದಾಟ
l ರಾತ್ರಿ 8: ಬೆಂಕಿ ನಂದಿಸುವ ಕಾರ್ಯಾಚರಣೆ ಮುಕ್ತಾಯ. ಮೃತದೇಹಗಳಿಗಾಗಿ ಹುಡುಕಾಟ.
l ರಾತ್ರಿ 8.30: ಗುರುತಿಸಲಾಗದಷ್ಟು ಸುಟ್ಟು ಕರಕಲಾದ 12 ಶವ ಗೋದಾಮಿನಿಂದ ಹೊರಕ್ಕೆ ತಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ.
l ರಾತ್ರಿ 8.40: ನಾಲ್ಕು ಆಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ
ಶವಗಳ ರವಾನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.