ಆನೇಕಲ್: ತಾಲ್ಲೂಕಿನ ಚಂದಾಪುರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಆನೇಕಲ್ ಶಾಖೆಯ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆಯಿತು.
ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಮಾತನಾಡಿ, ‘ಸಮಾಜದ ಸರ್ವತೋಮುಖ ಅಭಿವೃದ್ಧಿಯೇ ಸಂಘದ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸಮುದಾಯ ಸಂಘಟಿಸಲಾಗುವುದು. ಸಮುದಾಯದಲ್ಲಿ ಐಕ್ಯತೆ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸಲು ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಮುನ್ನೆಲೆಗೆ ಬರಲು ಸಮಾಜದ ಸಂಘಟನೆ ಪರಿಹಾರವಾಗಿದೆ. ಹಾಗಾಗಿ ಇತರೆ ಸಮಾಜಗಳನ್ನು ದೂಷಿಸದೆ ಕುರುಬ ಸಮಾಜವನ್ನು ಸಂಘಟಿಸಬೇಕು’ ಎಂದರು.
ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಣ್ಣ ಮಾತನಾಡಿ, ಸಮಾಜದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಗುರಿ ಇದೆ. ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಐಎಎಸ್, ಕೆಎಎಸ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳಿಗೆ ಸಂಘದ ವತಿಯಿಂದ ಪ್ರೋತ್ಸಾಹ ನೀಡಲಾಗುವುದುಎಂದರು.
ಕುರುಬರ ಸಂಘದ ತಾಲ್ಲೂಕು ಗೌರವ ಅಧ್ಯಕ್ಷ ಡಿ.ನರಸಿಂಹಮೂರ್ತಿ ಮತ್ತು ಅಧ್ಯಕ್ಷರಾಗಿ ಕೂಡ್ಲು ಗೋಪಾಲ್, ಯುವ ಘಟಕದ ಅಧ್ಯಕ್ಷರಾಗಿ ಎ.ಆರ್.ಹರೀಶ್ ಮೌರ್ಯ, ಗೌರವ ಅಧ್ಯಕ್ಷರಾಗಿ ಗಟ್ಟಹಳ್ಳಿ ರವಿಕುಮಾರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕವಾದವರಿಗೆ ಪತ್ರ ವಿತರಿಸಲಾಯಿತು.
ಕುರುಬರ ಸಂಘದ ರಾಜ್ಯ ನಿರ್ದೇಶಕ ಕೆ.ಎಂ. ರಾಮಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಂಡ್ಲವಾಡಿ ಸಿ. ನಾಗರಾಜು, ಹಾಪ್‌ಕಾಮ್ಸ್ ನಿರ್ದೇಶಕ ಮುತ್ತೂರು ಜೆ. ನಾರಾಯಣಪ್ಪ, ಹೆಬ್ಬಗೋಡಿ ನಗರಸಭಾ ಸದಸ್ಯ ಕೃಷ್ಣಪ್ಪ, ಜಿಗಣಿ ಪುರಸಭಾ ಸದಸ್ಯ ಹರೀಶ್, ವಾಬಸಂದ್ರ ಮಂಜುನಾಥ್, ಸಂಪಂಗಿ ರಾಮಯ್ಯ, ನವೀನ್, ಜಗದೀಶ್ ಇದ್ದರು.
₹4 ಕೋಟಿ ವೆಚ್ಚದಲ್ಲಿ ಕನಕ ಭವನ
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ₹4 ಕೋಟಿ ವೆಚ್ಚದಲ್ಲಿ ಕನಕ ಭವನದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಣ್ಣ ತಿಳಿಸಿದರು. ಭವನದ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲು ಸಮುದಾಯದವರು ಆರ್ಥಿಕ ನೆರವು ನೀಡಬೇಕು.ಮುಂದಿನ ದಿನಗಳಲ್ಲಿ ವಿದ್ಯಾ ಸಂಸ್ಥೆ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದರು.
ಚಂದಾಪುರ ಪುರಸಭಾ ಸದಸ್ಯ ಎಸ್.ರಾಮಚಂದ್ರ ಮಾತನಾಡಿ, ಆನೇಕಲ್ ತಾಲ್ಲೂಕಿನ ಸಮುದಾಯದ ಸಂಘಟನೆಯ ದೃಷ್ಟಿಯಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಆನೇಕಲ್‌ನಲ್ಲಿ ಮುಂದಿನ ದಿನಗಳಲ್ಲಿ ಕನಕ ಜಯಂತಿ ಆಯೋಜನೆಗೆ ಚಿಂತನೆ ನಡೆಸಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.