ವಿಜಯಪುರ(ದೇವನಹಳ್ಳಿ): ಬಿಜ್ಜವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೇರಹಳ್ಳಿಯಲ್ಲಿ ನೂತನ ಅಂಗನವಾಡಿ ಕೇಂದ್ರದ ಮೇಲೆ ಅರಳಿಮರ ಬೆಳೆದಿದೆ. ಇದರಿಂದ ಕಟ್ಟಡ ಶಿಥಿಲಗೊಳ್ಳುವ ಸಾಧ್ಯತೆ ಇದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮರ ತೆರವುಗೊಳಿಸಬೇಕಿದೆ.
ಅಂಗನವಾಡಿ ಕೇಂದ್ರದ ಕಟ್ಟಡದ ಮೇಲೆ ಬೆಳೆಯುತ್ತಿರುವ ಮರದ ಬೇರು ಕಟ್ಟಡದ ಗೋಡೆ ಮೇಲೆ ಹಬ್ಬಿಕೊಂಡಿದೆ. ಮಳೆ ಬಂದರೆ ಕಟ್ಟಡದ ಮೇಲ್ಛಾವಣಿ ಸೋರುತ್ತದೆ. ತುಂಬ ಹಳೆ ಕಟ್ಟಡವಾಗಿರುವ ಕಾರಣ ಶಿಥಿಲಾವಸ್ಥೆಯಲ್ಲಿದೆ.
ಯಾವ ಸಮಯದಲ್ಲಿ ಬೇಕಾದರೂ ಮಕ್ಕಳ ಮೇಲೆ ಕುಸಿದು ಬೀಳುತ್ತದೋ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಕ್ಕೂ ಭಯ ಎಂದು ಹೇಳುತ್ತಾರೆ. ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಭೂಮಿ ಮಂಜೂರು ಮಾಡಿಸಬೇಕು. ಮಕ್ಕಳಿಗೆ ಸುರಕ್ಷಿತ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ.
ಅಂಗನವಾಡಿ ಕೇಂದ್ರಕ್ಕೆ 16 ಮಂದಿ ಮಕ್ಕಳು ದಾಖಲಾಗಿದ್ದಾರೆ. 10-12 ಮಂದಿ ಪ್ರತಿನಿತ್ಯ ಬರುತ್ತಾರೆ. ಇಲ್ಲಿ ದಾಸ್ತಾನು ಕೊಠಡಿಯಿಲ್ಲ. ಪ್ರತ್ಯೇಕವಾದ ಅಡುಗೆ ಕೋಣೆಯೂ ಇಲ್ಲ. ಶಿಥಿಲವಾಗಿರುವ ಕಟ್ಟಡದಲ್ಲೇ ಆಹಾರ ಪದಾರ್ಥ ದಾಸ್ತಾನು ಮಾಡಿಕೊಂಡು ಮಕ್ಕಳಿಗೆ ಅಡುಗೆ ತಯಾರು ಮಾಡಲಾಗುತ್ತಿದೆ. ಅರಳೀಮರದ ಬೇರು ಗೋಡೆಗಳ ಒಳಗೆ ಹೊಕ್ಕಿರುವ ಕಾರಣ ಗೋಡೆಗಳು ಬಿರುಕು ಬಿಟ್ಟಿವೆ. ಗೋಡೆ ಸ್ವಲ್ಪಭಾಗ ಬಿದ್ದು ಹೋಗಿದೆ. ಮಳೆ ನೀರು ಗೋಡೆ ಒಳಗೆ ಇಳಿದಿರುವ ಕಾರಣ ಗೋಡೆಗಳಲ್ಲಿ ತೇವಾಂಶವಿದೆ. ನೀರಿನ ವ್ಯವಸ್ಥೆ ಇಲ್ಲ. ವಿದ್ಯುತ್ ಸಂಪರ್ಕವೂ ಇಲ್ಲದ ಕಟ್ಟಡದಲ್ಲೇ ಮಕ್ಕಳು ಕಲಿಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಇಲ್ಲಿನ ವ್ಯವಸ್ಥೆ ಸರಿಪಡಿಸಬೇಕಿದೆ.
ಅರಳಿಮರ ತೆಗೆಯಲು ಹೆದರುತ್ತಿರುವ ಜನ: ಅಂಗನವಾಡಿ ಕೇಂದ್ರದ ಕಟ್ಟಡದ ಮೇಲೆ ಬೆಳೆದಿರುವ ಅರಳಿ ಮರ ತೆರವುಗೊಳಿಸುವಂತೆ ಇಲ್ಲಿನ ಕಾರ್ಯಕರ್ತೆ ಹಲವರ ಬಳಿಯಲ್ಲಿ ಮನವಿ ಮಾಡಿದ್ದಾರೆ. ಆದರೂ, ಸ್ಥಳೀಯರು ಅರಳೀಮರ ತೆರವುಗೊಳಿಸುವುದಿಲ್ಲ. ಅದನ್ನು ತೆರವುಗೊಳಿಸಿದರೆ ಶಾಪ ಬರುತ್ತದೆ ಎಂದು ಭಯಪಡುತ್ತಿದ್ದು, ತೆರವುಗೊಳಿಸಲು ಯಾರೂ ಮುಂದೆ ಬರುತ್ತಿಲ್ಲ.
ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ
ಅಂಗನವಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಭೂಮಿ ಮಂಜೂರು ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಗ್ರಾಮ ಪಂಚಾಯಿತಿಗೂ ಪತ್ರ ನೀಡಲಾಗಿದೆ. ತಕ್ಷಣಕ್ಕೆ ಇಲ್ಲಿನ ಅಂಗನವಾಡಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಿಸಲಾಗುವುದು.
ಮಹೇಶ್, ಸಿ.ಡಿ.ಪಿ.ಒ ದೇವನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.