ವಿಜಯಪುರ(ದೇವನಹಳ್ಳಿ): ಹೋಬಳಿಯಲ್ಲಿ ರಾಗಿ ಬೆಳೆ ಸೈನಿಕ ಹುಳು ಕಾಟ ಹೆಚ್ಚಾಗಿದ್ದು, ಹುಳು ತಡೆಗೆ ರಾಸಾಯನಿಕ ಔಷಧ ಸಿಂಪಡಣೆ ಮಾಡುತ್ತಿದ್ದಾರೆ.
ಎರಡು ವರ್ಷಗಳಿಂದ ತೀವ್ರ ಬರಗಾಲ ಎದುರಿಸಿದ್ದ ರೈತರು, ಈ ಬಾರಿ ಉತ್ಸಾಹದಿಂದ ಹೊಲಗಳಲ್ಲಿ ರಾಗಿ ಬೆಳೆ ಬಿತ್ತನೆ ಮಾಡಿದ್ದರೆ. ಆದರೀಗ ಬೆಳೆಗೆ ಸೈನಿಕ ಹುಳ ಕಾಟ ಹೆಚ್ಚಾಗಿರುವುದರಿಂದ ರೈತರನ್ನು ಸಂಕಷ್ಟಕ್ಕೆ ಈಡು ಮಾಡಿದೆ.
ರಾಗಿ ಬೆಳೆ ರಾಸಾಯನಿಕ ಔಷಧಿಗಳಿಂದ ಮುಕ್ತವಾಗಿತ್ತು. ಬೆಳೆ ರಕ್ಷಣೆಗೆ ರೈತ ಸಮೂಹ ರಾಸಾಯನಿಕ ಔಷಧಿ ಮೊರೆ ಹೋಗಿದ್ದಾರೆ.
ಸೈನಿಕ ಹುಳುವಿನ ಕಾಟದ ಜೊತೆ ಮಳೆ ಕೈಕೊಟ್ಟರೆ, ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ಉಷ್ಣಾಂಶ ಜಾಸ್ತಿಯಾಗುತ್ತದೆ. ಆಗ ಪೈರಿಗೆ ಬೆಂಕಿ ರೋಗವೂ ತಗಲುವ ಭೀತಿ ರೈತರಲ್ಲಿ ಹೆಚ್ಚಿದೆ.
ಹುಳುಗಳು ದಾಳಿ ಮಾಡಿದರೆ ರಾಗಿ ಬೆಳೆಯ ಗರಿಗಳು ತೆನೆಗಳು ಬರುವ ಮುನ್ನವೇ ಒಣಗುತ್ತವೆ. ಹುಳುಗಳನ್ನು ಈಗಲೇ ನಾಶ ಮಾಡದೇ ಬಿಟ್ಟರೆ, ರಾಗಿ ಪೈರಿನ ಗರಿ, ಕಾಂಡದ ಸಮೇತ ತಿನ್ನುತ್ತವೆ. ಇದರಿಂದ ರಾಗಿ ಗಿಡದ ಸುಳಿ ಮೇಲೆ ಬಾರದೆ ಕುಂಠಿತವಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆಯ ಪ್ರಮಾಣ ಹಾಗೂ ವಾತಾವರಣದಲ್ಲಿ ಉಂಟಾಗುವ ವ್ಯತ್ಯಾಸದಿಂದ ಹುಳುಗಳ ಹುಟ್ಟುತ್ತವೆ. ವಾಡಿಕೆಯಂತೆ ರಾಗಿ ಬಿತ್ತನೆ ಸಮಯದಲ್ಲಿ ಸರಿಯಾಗಿ ಮಳೆಯಾಗಿಲ್ಲ. ತಡವಾಗಿ ಮಳೆ ಬಿದಿದ್ದರಿಂದ ಬಿತ್ತನೆ ತಡವಾಯ್ತು. ಮೇಲೆದ್ದ ರಾಗಿ ಪೈರಿಗೆ ಇತ್ತಿಚೆಗೆ ಬಿದ್ದ ಮಳೆಯಿಂದ ವಾತಾವರಣದಲ್ಲಿ ತೇವಾಂಶ ವೃದ್ಧಿಗೊಂಡು ಮೊಟ್ಟೆಗಳು ಒಡೆದು ಹುಳುಗಳು ಹೊರ ಬಂದು ರಾಗಿ ಬೆಳೆಗೆ ದಾಳಿ ಇಡುತ್ತಿವೆ ಎಂದು ಪ್ರಗತಿಪರ ರೈತರು ತಿಳಿಸಿದ್ದಾರೆ.
ರೋಗಬಾಧೆಯಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಶ್ರಮಪಡುತ್ತಿದ್ದಾರೆ. ಆದರೂ ಬೆಳೆ ರಕ್ಷಣೆ ಸವಾಲಾಗಿದೆ. ಹೀಗಾಗಿ ಸರ್ಕಾರ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಪರಿಹಾರ
ರೈತರು ಆತಂಕಪಡದೆ ಹುಳುಗಳು ಕಂಡ ಬಂದ ತಕ್ಷಣ ನೂವಾನ್ ಔಷಧವನ್ನು ಒಂದು ಲೀಟರ್ ನೀರಿಗೆ ಎರಡೂವರೆ ಎಂ.ಎಲ್.ನಷ್ಟು ಹಾಕಿ ಹೊಲಕ್ಕೆ ಸಿಂಪಡಣೆ ಮಾಡಬಹುದು. ಇದಲ್ಲದೆ ಕ್ಲೋರೋಪೈರಿಪಾಸ್ ಔಷಧವನ್ನು ಒಂದು ಲೀಟರ್ ನೀರಿಗೆ 3-4 ಎಂ.ಎಲ್.ನಷ್ಟು ಹಾಕಿ ಸಿಂಪಡಣೆ ಮಾಡಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.