ADVERTISEMENT

ದೊಡ್ಡಬಳ್ಳಾಪುರ: ಆಯುಷ್ ಬಾಳೆ ಹಣ್ಣಿನ ಆಯುರ್ವೇದ ಔಷಧಿ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 14:15 IST
Last Updated 26 ಡಿಸೆಂಬರ್ 2023, 14:15 IST
ದೊಡ್ಡಬಳ್ಳಾಪುರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಆಯುಷ್ ಇಲಾಖೆಯಿಂದ ಬಾಳೆಹಣ್ಣಿನ ಆಯುರ್ವೇದ ಔಷಧಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ವಿತರಿಸಿದರು. ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಖುದ್ಸಿಯ ತಸ್‍ನೀಮ್ ಇದ್ದರು
ದೊಡ್ಡಬಳ್ಳಾಪುರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಆಯುಷ್ ಇಲಾಖೆಯಿಂದ ಬಾಳೆಹಣ್ಣಿನ ಆಯುರ್ವೇದ ಔಷಧಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ವಿತರಿಸಿದರು. ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಖುದ್ಸಿಯ ತಸ್‍ನೀಮ್ ಇದ್ದರು   

ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಆಯುಷ್ ಇಲಾಖೆಯಿಂದ ಶ್ವಾಸಕೋಶದ ತೊಂದರೆಗಳಾದ ಅಸ್ತಮಾ, ಕೆಮ್ಮು, ಶೀತ ಮತ್ತು ಗಂಟಲು ಬೇನೆ ಇತ್ಯಾದಿ ರೋಗ ಇರುವವರಿಗೆ ಉಚಿತವಾಗಿ ಆಯುರ್ವೇದದ ವಿಶೇಷ ಬಾಳೆಹಣ್ಣು ಔಷಧಿ ಹಾಗೂ ಆಯುಷ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಿಟ್‍ ವಿತರಿಸಲಾಯಿತು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ಮಾತನಾಡಿ, ಪ್ರಕೃತಿಯಲ್ಲಿ ಸಿಗುವ ನೈಸರ್ಗಿಕ ಔಷಧಿಗಳಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ. ಆಯುರ್ವೇದವು ಪುರಾತನ ಚಿಕಿತ್ಸಾ ಪದ್ಧತಿಯಾಗಿದ್ದು, ಆಲೋಪತಿಗಳಲ್ಲಿ ಗುಣವಾಗದ ಕೆಲವು ಕಾಯಿಲೆಗಳು ಆಯುರ್ವೇದದಲ್ಲಿ ಗುಣವಾಗಿರುವ ನಿದರ್ಶನಗಳಿವೆ ಎಂದರು.

ಸರ್ಕಾರಿ ಆಯುರ್ವೇದ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಖುದ್ಸಿಯ ತಸ್‍ನೀಮ್ ಮಾತನಾಡಿ, ಅಸ್ತಮಾ, ಕೆಮ್ಮು, ಶೀತ, ಗಂಟಲು ಬೇನೆಗಳಿಗೆ ಬಾಳೆಹಣ್ಣಿನ ಆಯುರ್ವೇದ ಔಷಧಿ ಪರಿಣಾಮಕಾರಿಯಾಗಿದೆ. ಪ್ರತಿ ವರ್ಷಕ್ಕೆ ಒಮ್ಮೆ ನೀಡುವ ಬಾಳೆ ಹಣ್ಣಿನ ಔಷಧಕ್ಕೆ ಈ ಹುಣ್ಣಿಮೆಯಂದು ಮಾತ್ರ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.

ADVERTISEMENT

ಬಾಳೆ ಹಣ್ಣಿನ ಔಷಧವನ್ನು ರಾತ್ರಿ ತಾರಸಿಯ ಮೇಲೆ ಸೂಕ್ತ ಬಂದೋಬಸ್ತ್‌ನಲ್ಲಿರಬೇಕು. ಚಂದ್ರನ ಬೆಳದಿಂಗಳ ಕಿರಣಗಳು ಹಣ್ಣಿನ ಮೇಲೆ ಬೀಳುವಂತಿರಬೇಕು. ಔಷಧಿ ಸೇವಿಸುವವರಿಗೆ ಬಾಳೆಹಣ್ಣನ್ನು ಕುಟುಂಬದ ಸದಸ್ಯರು ಹಾಸಿಗೆ ಬಳಿಯೇ ತಂದು ನೀಡಬೇಕು. ಬೆಳಿಗ್ಗೆ ಹಾಸಿಗೆಯಲ್ಲಿಯೇ ಕಣ್ಣನ್ನು ತೆರೆಯದೇ ನೆಲಕ್ಕೆ ಕಾಲು ಊರದೇ, ಒಂದೇ ಬಾರಿಗೆ ತಿನ್ನಬೇಕು ಎಂದು ಹೇಳಿದರು.

ಔಷಧಕ್ಕೆ ಚಂದ್ರನ ಕಿರಣಗಳಿಂದ ಮಹತ್ವದ ಸತ್ವ ಬರುತ್ತದೆ. ಈ ವೇಳೆ ಮಾತನಾಡಬಾರದು. ಔಷಧಿ ಸೇವಿಸಿದ ನಂತರ ಶೀತದ ಪದಾರ್ಥಗಳನ್ನು ತಿನ್ನಬಾರದು. ವೈದ್ಯರು ನೀಡಿರುವ ಸಲಹೆಯನ್ನು ತಪ್ಪದೇ ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ.ಎಂ.ಆರ್.ಸರಿತಾರಾಣಿ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.