ADVERTISEMENT

ಇವಿ ಕ್ರಾಂತಿಯಲ್ಲಿ ಬೆಂಗಳೂರು ಮುಂಚೂಣಿ: ಎಂ.ಬಿ.ಪಾಟೀಲ

ಎಫ್‌77 ಮಾಚ್‌2 ಎಲೆಕ್ಟ್ರಿಕ್‌ ಬೈಕ್‌ಗಳ ರಫ್ತಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:36 IST
Last Updated 24 ಸೆಪ್ಟೆಂಬರ್ 2024, 14:36 IST
ಆನೇಕಲ್ ತಾಲ್ಲೂಕಿನ ಜಿಗಣಿ ಅಲ್ಟ್ರಾವಯಲೆಟ್ ಅಟೋಮೇಟಿವ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಉತ್ಪಾದಿಸಿರುವ ಎಫ್77 ಮಾಚ್2 ಎಲೆಕ್ಟ್ರಿಕ್ ಬೈಕ್ ರಫ್ತಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಚಾಲನೆ ನೀಡಿದರು
ಆನೇಕಲ್ ತಾಲ್ಲೂಕಿನ ಜಿಗಣಿ ಅಲ್ಟ್ರಾವಯಲೆಟ್ ಅಟೋಮೇಟಿವ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಉತ್ಪಾದಿಸಿರುವ ಎಫ್77 ಮಾಚ್2 ಎಲೆಕ್ಟ್ರಿಕ್ ಬೈಕ್ ರಫ್ತಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಚಾಲನೆ ನೀಡಿದರು   

ಆನೇಕಲ್: ಜಿಗಣಿ ಅಲ್ಟ್ರಾವಯಲೆಟ್‌ ಅಟೋಮೇಟಿವ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಉತ್ಪಾದಿಸಿರುವ ಎಫ್‌77 ಮಾಚ್‌2 ಎಲೆಕ್ಟ್ರಿಕ್‌ ಬೈಕ್‌ಗಳು ಯುರೋಪ್‌ ದೇಶಗಳಿಗೆ ರಫ್ತುಆಗುತ್ತಿವೆ. ಮೊದಲ ಬ್ಯಾಚ್‌ನ ರಫ್ತಿಗೆ ಕೇಂದ್ರ ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ರಾಜ್ಯ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮಂಗಳವಾರ ಚಾಲನೆ ನೀಡಿದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಭಾರತದಲ್ಲಿ ಆಟೋಮೊಬೈಲ್‌ ಕ್ಷೇತ್ರ  ಉತ್ತಮ ಸಾಧನೆಯತ್ತ ದಾಪುಗಾಲಿಡುತ್ತಿದೆ. ಅಲ್ಟ್ರಾವಯಲೆಟ್‌ ಆಟೋಮೇಟಿವ್‌ ಕಂಪನಿಯು ಆರು ವರ್ಷಗಳ ನಿರಂತರ ಸಂಶೋಧನೆಯಿಂದಾಗಿ ಇವಿ ವಾಹನಗಳನ್ನು ಕಂಪನಿ ಉತ್ಪಾದಿಸಿದೆ. ಈ ಕಂಪನಿಯು ಕನ್ನಡಿಗರ ನೇತೃತ್ವದಲ್ಲಿ ಮುನ್ನಡೆಯುತ್ತಿರುವುದು ಕನ್ನಡಿಗರ ಹೆಮ್ಮೆ ಎಂದು ಶ್ಲಾಘಿಸಿದರು.

ಎಲೆಕ್ಟ್ರಿಕ್‌ ವಾಹನಗಳನ್ನು ಯುರೋಪ್‌ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಭಾರತೀಯ ಸಂಶೋಧನೆ ಮತ್ತು ತಂತ್ರಜ್ಞಾನಕ್ಕೆ ಸಂದ ಬಹುದೊಡ್ಡ ಗೌರವ ಇದಾಗಿದೆ. ಇವಿ ವಾಹನದ ಡಿಸೈನ್‌, ಬಿಡಿಭಾಗ, ಬ್ಯಾಟರಿಯನ್ನು ಇಲ್ಲಿಯೇ ತಯಾರಿಸಿರುತ್ತಿರುವುದು ಮೆಚ್ಚುಗೆ ಸಂಗತಿ ಎಂದರು.

ADVERTISEMENT

ಕೈಗಾರಿಕಾ ಕ್ಷೇತ್ರದಲ್ಲಿ ಮೇಡ್‌ ಇನ್‌ ಇಂಡಿಯಾ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ಕಂಪನಿಗಳು ಸಂಶೋಧನೆ, ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಭಾರತದ ನವೋದ್ಯಮ ಎಲೆಕ್ಟ್ರಿಕ್‌ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಹೊಸತನದಿಂದಾಗಿ ಹೆಚ್ಚಿನ ಲಾಭ ನಿರೀಕ್ಷಿಸಬಹುದಾಗಿದೆ. ಭಾರತವನ್ನು ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನಾ ವಲಯವನ್ನಾಗಿ ಮಾಡಲು ಆದ್ಯತೆ ನೀಡಬೇಕು ಎಂದರು.

ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಮೋಟಾರು ಸೈಕಲ್‌ ವಿಭಾಗದಲ್ಲಿ ಅಲ್ಟ್ರಾವಯಲೆಟ್‌ ಕಂಪನಿ ಸಾಧನೆ ದೇಶಕ್ಕೆ ಮಾದರಿ. ರಾಜ್ಯದಲ್ಲಿ ಆಟೋ ಮೊಬೈಲ್‌ ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲ ನೆರವು ನೀಡಲಾಗುವುದು. ಕಂಪನಿಯು ಉತ್ತಮ ಗುಣಮಟ್ಟದ ಮತ್ತು ಉತ್ಕೃಷ್ಟವಾದ ಇವಿ ವಾಹನಗಳನ್ನು ತಯಾರು ಮಾಡುವ ಮೂಲಕ ಭಾರತ ಟೆಸ್ಲಾ ಆಗುವತ್ತಾ ಸಂಶೋಧನೆ ನಡೆಸಲಾಗುತ್ತಿದೆ. ದೇಶದ ಎಲೆಕ್ಟ್ರಿಕ್‌ ವಾಹನಗಳ ಕ್ರಾಂತಿಯಲ್ಲಿ ಬೆಂಗಳೂರು ಮುಂಚೂಣಿ ಸ್ಥಾನದಲ್ಲಿದೆ ಎಂದರು.

ಕಂಪನಿಯ ನೀರಜ್‌ ರಾಜಮೋಹನ್‌, ನಾರಾಯಣ ಸುಬ್ರಮಣಿಯನ್‌ ಇದ್ದರು.

ಮುಡಾ: ಪ್ರತಿಕ್ರಿಯೆಗೆ ನಿರಾಕರಣೆ 

ಮುಡಾ ಪ್ರಕರಣದ ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳಿದಾಗ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ರಾಜ್ಯ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಭಿವೃದ್ಧಿ ಕಾರ್ಯಕ್ರಮದಲ್ಲಿ ರಾಜಕೀಯ ಚರ್ಚೆ ಬೇಡ ಎಂದರು.

ಕುಮಾರಸ್ವಾಮಿಗೆ ಭರ್ಜರಿ ಸ್ವಾಗತ ‌

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಆನೇಕಲ್‌ ತಾಲ್ಲೂಕಿಗೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್‌ ಬಿಜೆಪಿ ಮುಖಂಡರಾದ ದೊಡ್ಡಹಾಗಡೆ ಶಂಕರ್‌ ಜಯಪ್ರಕಾಶ್‌ ಅಶೋಕ್‌ ಸೇರಿದಂತೆ ಮುಖಂಡರು ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು.

ಎಫ್77 ಮಾಚ್2 ಎಲೆಕ್ಟ್ರಿಕ್ ಬೈಕ್‌ನ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.