ADVERTISEMENT

ಅಪಘಾತ ತಾಣವಾದ ರಾಷ್ಟ್ರೀಯ ಹೆದ್ದಾರಿ: ವರ್ಷದಲ್ಲಿ 13 ಸಾವು, 28 ಮಂದಿಗೆ ಗಾಯ

ಎಂ.ಮುನಿನಾರಾಯಣ
Published 18 ನವೆಂಬರ್ 2024, 6:08 IST
Last Updated 18 ನವೆಂಬರ್ 2024, 6:08 IST
ವಿಜಯಪುರ ಹೋಬಳಿ ವೆಂಕಟಗಿರಿಕೋಟೆ ಕ್ರಾಸ್ ನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ
ವಿಜಯಪುರ ಹೋಬಳಿ ವೆಂಕಟಗಿರಿಕೋಟೆ ಕ್ರಾಸ್ ನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ   

ವಿಜಯಪುರ(ದೇವನಹಳ್ಳಿ): ಸರ್ವಿಸ್‌ ರಸ್ತೆ, ಸ್ನೀಗಲ್‌ ದೀಪ ಹಾಗೂ ಅಗತ್ಯ ಮೂಲ ಸೌಕರ್ಯ ಇಲ್ಲದೆ ಬೆಂಗಳೂರು– ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಅಪಘಾತ ತಾಣವಾಗಿ ‍ಪರಿಣಮಿಸಿದೆ.

ಈ ಹೆದ್ದಾರಿ ಹೋಬಳಿಯ ವೆಂಕಟಗಿರಿಕೋಟೆ, ಬುಳ್ಳಹಳ್ಳಿ, ಹೊಸಹುಡ್ಯ, ಇರಿಗೇನಹಳ್ಳಿ ಗ್ರಾಮಗಳ ಮೂಲಕ ಹಾದು ಹೋಗುತ್ತದೆ. ಆದರೆ ಈ ಗ್ರಾಮಗಳು ರಸ್ತೆ ದಾಟಲು ಹಾಗೂ ತಿರುವು ತೆಗೆದುಕೊಳ್ಳಲು ರಸ್ತೆ ನಿರ್ಮಿಸಿಲ್ಲ. ಜತೆಗೆ ಹೆದ್ದಾರಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದ ಕಾರಣ ರಸ್ತೆ ಅಪಘಾತ ಸ್ಥಳವಾಗಿ ಮಾರ್ಪಟ್ಟಿದೆ.

ಮನೆಯಿಂದ ಹೊರಗೆ ಹೋದವರು ಸುರಕ್ಷಿತವಾಗಿ ಮನೆಗೆ ವಾಪಸ್‌ ಬರುತ್ತಾರೋ ಇಲ್ಲವೋ ಎನ್ನುವ ಆತಂಕ ಈ ನಾಲ್ಕು ಗ್ರಾಮಸ್ಥರು ನಿತ್ಯ ಮನೆ ಮಾಡಿರುತ್ತದೆ. ಹೆದ್ದಾರಿ ದಾಟಬೇಕಾದರೆ ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗಬೇಕು. ಹೆದ್ದಾರಿಯಲ್ಲಿರುವ ನ್ಯೂನತೆ ಸರಿಪಡಿಸವಂತೆ ಹಲವು ಬಾರಿ ಮನವಿ ನೀಡಿದರೂ ಯಾರು ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಳೆದ ಮೂರ್ನಾಲ್ಕು ವರ್ಷದಿಂದ ನಡೆದ ಅಪಘಾತದಲ್ಲಿ 70 ಮಂದಿ ಮೃತಪಟ್ಟಿದ್ದಾರೆ. ಆದರೂ ಹೆದ್ದಾರಿ ಪ್ರಾಧಿಕಾರದವರ ಸೂಕ್ತ ಕ್ರಮ ಕೈಕೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

ವೆಂಕಟಗಿರಿಕೋಟೆ ಸೇರಿದಂತೆ ಬುಳ್ಳಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 13 ಅಪಘಾತಗಳು ಸಂಭವಿಸಿವೆ. ಇದರಲ್ಲಿ 13 ಮಂದಿ ಮೃತಪಟ್ಟಿದ್ದಾರೆ. 28 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಳ್ಳಹಳ್ಳಿ ಗೇಟ್‌ನಿಂದ ಮುದುಗುರ್ಕಿ ವರೆಗೂ ನಡೆಯುತ್ತಿರುವ ಅಪಘಾತಗಳಿಂದ ಮೃತಪಡುತ್ತಿರುವವರನ್ನು ಕಂಡು ಜನ ಜಬೆಚ್ಚಿ ಬೀಳುತ್ತಿದ್ದಾರೆ.

ಹೊಸಹುಡ್ಯ, ಸಿಂಗವಾರ, ದೊಡ್ಡಸಾಗರಹಳ್ಳಿ ಗ್ರಾಮಗಳಿಂದ ಬರುವ ಜನರು ಗ್ರಾಮ ಪಂಚಾಯಿತಿ, ಪ್ರೌಢಶಾಲೆಗೆ ಹೋಗಬೇಕಾದರೆ ಹೆದ್ದಾರಿಯಲ್ಲಿ ಬರುವ ಅತಿ ವೇಗದ ವಾಹನಗನ್ನು ತಪ್ಪಿಸಿಕೊಂಡು ರಸ್ತೆ ದಾಟುವುದು ದೊಡ್ಡ ಸಾಹಸವಾಗಿದೆ.

ರಾಷ್ಟ್ರೀಯ ಹೆದ್ದಾರಿಯುದ್ಧಕ್ಕೂ ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ. ಹಳ್ಳಿಗಳಿಗೆ ತಿರುವು ಪಡೆದುಕೊಳ್ಳುವ ಕಡೆಗಳಲ್ಲಿ ಹೆದ್ದಾರಿ ಪ್ರಾಧಿಕಾರದವರು ಯಾವುದೇ ಸೂಚನಾ ಫಲಕ ಅಳವಡಿಸಿಲ್ಲ. ಇದರಿಂದಾಗಿಯೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ಅಪಘಾತಗಳನ್ನು ತಪ್ಪಿಸಲು ಹಾಗೂ ಹೆದ್ದಾರಿಯ ಸಮಸ್ಯೆ ಸರಿಪಡಿಸಲು ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆ ಆಗಿಲ್ಲ ಎನ್ನುತ್ತಾರೆ ಸುತ್ತಮುತ್ತಲಿನ ಗ್ರಾಮಸ್ಥರು.

ಅಪಘಾತಗಳ ತಡೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನ ಮಾಡಲಾಯಿತು. ಆದರೆ ಅವರು ಲಭ್ಯರಾಗಲಿಲ್ಲ.

ಸುರಕ್ಷತಾ ಕ್ರಮಗಳಿಲ್ಲದ ಬುಳ್ಳಹಳ್ಳಿ ಗೇಟ್‌ನಲ್ಲಿ ರಸ್ತೆ ದಾಟುತ್ತಿರುವ ನಾಗರಿಕರು
ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗುತ್ತಿರುವ ಅಪಘಾತ ನಿಯಂತ್ರಣ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಲವಾರು ಬಾರಿ ಹೋರಾಟ ಮಾಡಿದ್ದೇವೆ. ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಹೆದ್ದಾರಿ ಬಂದ್ ಮಾಡಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯ.
ಎಂ.ರಾಜಪ್ಪ ಹೋರಾಟಗಾರ ಬುಳ್ಳಹಳ್ಳಿ
ಹೆದ್ದಾರಿಯಲ್ಲಿ ಅಪಘಾತಗಳಾದಾಗ ಮಾತ್ರ ಸುರಕ್ಷತಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುವ ಅಧಿಕಾರಿಗಳು ಮತ್ತೆ ಇತ್ತ ಕಡೆ ಗಮನಹರಿಸುವುದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದರೆ ನ್ಯಾಯಾಲಯದ ಮೊರೆ ಹೋಗುವುದು ನಮಗೆ ಅನಿವಾರ್ಯ.
ಆರ್.ಅಮರನಾಥ್ ವೆಂಕಟಗಿರಿಕೋಟೆ ಗ್ರಾ.ಪಂ.ಸದಸ್ಯ
ಹೆದ್ದಾರಿಯಲ್ಲಿ ಸ್ಕೈವಾಕ್ ನಿರ್ಮಾಣದ ಜೊತೆಗೆ ಸಿಗ್ನಲ್ ದೀಪ ಅಳವಡಿಸಿದರೆ ರಸ್ತೆ ದಾಟುವುದಕ್ಕೆ ಅನುಕೂಲವಾಗುತ್ತದೆ. ವಾಹನ ಸವಾರರೂ ನಿರ್ಭಯವಾಗಿ ಹೋಗಬಹುದು.
ಆನಂದಮ್ಮ ಸ್ಥಳೀಯರು
ಬುಳ್ಳಹಳ್ಳಿ ಗೇಟ್ ನಲ್ಲಿ ಹಲವಾರು ಬಾರಿ ಅಪಘಾತ ಸಂಭವಿಸುತ್ತಿದ್ದು ಅಪಘಾತಗಳ ತಡೆಗಾಗಿ ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಪತ್ರಗಳು ಬರೆದಿದ್ದೇವೆ.
ಆರ್.ಜಿ.ಸೌಮ್ಯ ಪಿಡಿಓ ಹಾರೋಹಳ್ಳಿ ಗ್ರಾ.ಪಂ
ಸಂಚಾರ ಪೊಲೀಸ್ ಠಾಣೆ; ಸಿಗದ ಸ್ಪಂದನೆ
ವೆಂಕಟಗಿರಿಕೋಟೆ ಸರ್ಕಲ್‌ನಲ್ಲಿ ಸಂಚಾರ ಪೊಲೀಸ್ ಠಾಣೆ ತೆರೆಯಬೇಕು. ಈ ಮೂಲಕ ಅಪಘಾತ ಸಂಚಾರ ದಟ್ಟಣೆ ತಡೆಗಟ್ಟಲು ಹಾಗೂ ಸಂಚಾರ ವ್ಯವಸ್ಥೆ ಸರಿಪಡಿಸಲು ಕ್ರಮ ವಹಿಸಬಕೆಂಬುದು ಸ್ಥಳೀಯರ ಹಲವು ವರ್ಷದ ಬೇಡಿಕೆಯಾಗಿದೆ. ಈ ಸಂಬಂಧ ಸಂಬಂಧಪಟ್ಟ ಜನಪ್ರತಿನಿಧಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ. ಆದರೆ ಯಾರಿಂದಲೂ ಸ್ಪಂದನೆ ದೊರೆತಿಲ್ಲವೆಂದು ಸ್ಥಳೀಯರಾದ ರಾಮಕೃಷ್ಣ ಭಾಗ್ಯಮ್ಮ ಅಶ್ವಿನಿ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಗ್ನಲ್ ದೀಪ ಅಳವಡಿಸಿ: ವೆಂಕಟಗಿರಿಕೋಟೆ ಸರ್ಕಲ್‌ನಲ್ಲಿ ಸಿಗ್ನಲ್ ದೀಪ ಅಳವಡಿಸುವ ಮೂಲಕ ಜನರು ಸುಲಭವಾಗಿ ರಸ್ತೆ ದಾಡುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ವ್ಹೀಲೆ
ನೆರೆಯ ಜಿಲ್ಲೆ ಚಿಕ್ಕಬಳ್ಳಾಪುರದ ಬಳಿ ಈಶಾದ ಆದಿಯೋಗಿ ಮೂರ್ತಿ ನಿರ್ಮಾಣ ಬಳಿಕ ಶನಿವಾರ ಮತ್ತು ಭಾನುವಾರ ಹೆದ್ದಾರಿಯಲ್ಲಿ ವಿಪರೀತ ವಾಹನ ದಟ್ಟಣೆ ಇರುತ್ತದೆ. ಸ್ಥಳೀಯರು ರಸ್ತೆ ದಾಟಬೇಕಾದರೆ ತುಂಬಾ ಕಷ್ಟಪಡಬೇಕು. ವಾರಾಂತ್ಯದ ದಿನಗಳಲ್ಲಿ ಬೆಂಗಳೂರಿನಿಂದ ಬರುವ ಕೆಲವು ಯುವಕರು ರಾಷ್ಟ್ರೀಯ ಹೆದ್ದಾರಿಯಲ್ಲೆ ವ್ಹೀಲಿಂಗ್ ಮಾಡುತ್ತಾರೆ. ಇದರಿಂದಲೂ ಹಲವು ಬಾರಿ ಅಪಘಾತಗಳು ಸಂಭವಿಸಿವೆ. ಬೇಸತ್ತಿರುವ ಜನರು ವ್ಹೀಲೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೂ ಬೆಂಕಿ ಹಚ್ಚಿದ್ದೇವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ಪ್ರಾಧಿಕಾರದೊಂದಿಗೆ ಚರ್ಚೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಪತ್ರವನ್ನು ಬರೆದಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದರು. ಅಪಘಾತಗಳಾದ ಇಆರ್‌ಎಸ್‌ಎಸ್‌ ಮೂಲಕ ಬರುವ ಪೋನ್ ಕರೆ ಆಧರಿಸಿ ತಕ್ಷಣ ಘಟನಾ ಸ್ಥಳಕ್ಕೆ ಹೋಗಿ ರಕ್ಷಣೆ ಮಾಡಲಾಗುತ್ತಿದೆ. ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲು ಕ್ಯಾಮೆರಾ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.