ADVERTISEMENT

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ: ಎಂಟು ತಿಂಗಳಾದಾರೂ ಬಾರದ ಮೌಲ್ಯಮಾಪನ ಗೌರವಧನ

ಉತ್ತರ ವಿವಿ ವಿರುದ್ಧ ಮೌಲ್ಯಮಾಪಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 16:22 IST
Last Updated 6 ಅಕ್ಟೋಬರ್ 2024, 16:22 IST
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ   

ಹೊಸಕೋಟೆ: 2023-24ನೇ ಸಾಲಿನ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಪದವಿ 1, 3 ಮತ್ತು 5ನೇ ಸೆಮಿಸ್ಟರ್‌ ಕನ್ನಡ ವಿಷಯ ಮೌಲ್ಯ ಮಾಪನ ಗೌರವ ಧನವನ್ನು ಎಂಟು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವಿರುದ್ಧ ಕನ್ನಡ ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1, 3 ಮತ್ತು 5ನೇ ಸೆಮಿಸ್ಟರ್‌ ನಂತರ 2, 4 ಮತ್ತು 6ನೇ ಸೆಮಿಸ್ಟರ್ ಮುಗಿದು ಅವುಗಳ ಮೌಲ್ಯಮಾಪನವೂ ಸಹ ಮುಗಿದಿದೆ. 2024-25 ನೇ ಶೈಕ್ಷಣಿಕ ವರ್ಷವು ಆರಂಭವಾಗಿದೆ. ಆದರೆ ಈವರೆಗೂ 2023-24ನೇ ಸೆಮಿಸ್ಟರ್‌ ಕನ್ನಡ ವಿಷಯದ ಮೌಲ್ಯಮಾಪನದ ಬಿಲ್‌ ಪಾವತಿಯಾಗದೆ ಬಾಕಿ ಉಳಿದಿದೆ.

ಇನ್ನು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಬಹುತೇಕರಲ್ಲಿ ಅತಿಥಿ ಉಪನ್ಯಾಸಕರೇ ಆಗಿದ್ದಾರೆ. ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಕಳೆದ ಎರಡು ತಿಂಗಳಿಂದ ವೇತನವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಮೌಲ್ಯಮಾಪನದ ಹಣ ಆಸರೆಯಾಗುತ್ತದೆ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಸುಮಾರು ಎಂಟು ತಿಂಗಳಿಂದ ಮೌಲ್ಯಮಾಪನ ಗೌರವಧನ ಬಿಡುಗಡೆ ಮಾಡಿಲ್ಲ ಎಂದು ಅತಿಥಿ ಉಪನ್ಯಾಸಕರು ತಿಳಿಸಿದ್ದಾರೆ.

ADVERTISEMENT

‘ನಾವು ಅತ್ಯಂತ ಕಡಿಮೆ ವೇತನಕ್ಕೆ ಅತಿಥಿ ಕೆಲಸ ಮಾಡುತ್ತಿದ್ದೇವೆ. ವರ್ಷಕ್ಕೆ 10 ತಿಂಗಳು ನಮ್ಮನ್ನು ದುಡಿಸಿಕೊಂಡು 2 ತಿಂಗಳು ಮನೆಗೆ ಕಳುಹಿಸುತ್ತಾರೆ. ಅಂತಹ ಸಂದರ್ಭದಲ್ಲಿ ನಮಗೆ ಮೌಲ್ಯಮಾಪನದಿಂದ ಅನುಕೂಲ ಆಗುತ್ತದೆ. ಆದರೆ ಕಳೆದ ಸೆಮಿಸ್ಟರ್‌ ಮೌಲ್ಯಮಾಪನದ ಹಣ ಬಾರದ ಕಾರಣ ಎರಡು ತಿಂಗಳಿನಿಂದ ಸಂಬಳವಿಲ್ಲದ ನಾವು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.