ದೇವನಹಳ್ಳಿ: ಬಹು ವರ್ಷಗಳ ಹಿಂದೆ ಸರ್ಕಾರ ಕೆರೆಯಂಗಳದಲ್ಲಿ ಜಾಲಿ ಮತ್ತು ಬಿದಿರು ಬೆಳೆಸುವ ಯೋಜನೆ ಜಾರಿ ಮಾಡಿತು. ಪರಿಣಾಮ, ಒಂದೆರಡು ವರ್ಷದ ನಂತರ ಕೆರೆ ಮೂಲ ಸ್ವರೂಪ ಬದಲಾಯಿತು. ಜತೆಗೆ ಹೂಳು ತುಂಬಿದ ಗಿಡಗಂಟಿಗಳ ಅಶ್ರಯ ತಾಣವಾಗಿಯೂ ಬೆಳೆಯಿತು.
ಉಗನವಾಡಿ, ದೇವಗಾನಹಳ್ಳಿ, ಬೊಮ್ಮವಾರ, ಪೆದ್ದನಹಳ್ಳಿ ,ಕೆಂಪಲಿಂಗನಪುರ ಸುತ್ತಮುತ್ತ ಇರುವ ಕೆರೆಗಳ ಪರಿಸ್ಥಿತಿ ಇದು. 128.34 ಎಕರೆ ವಿಶಾಲತೆ ಹೊಂದಿರುವ ಕೆಂಪಲಿಂಗನಪುರ ಕೆರೆ, ಕುಂದಾಣ ಹೋಬಳಿ ದೊಡ್ಡಕೆರೆ ಈ ಭಾಗದ ಪ್ರಮುಖ ಕೆರೆಗಳು. ಈ ಕೆರೆಗಳು ತುಂಬಿ ಕೋಡಿ ಹರಿದರೆ ಸಮುದ್ರ ನೋಡಿದಂತೆ ಭಾಸವಾಗುತ್ತಿತ್ತು. ಈಗ ಕಾಲಿಡದಷ್ಟು ಜಾಲಿಮುಳ್ಳು ಮತ್ತು ಬಿದಿರಿನಿಂದ ಕೂಡಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ಸಿ.ನರೇಂದ್ರ ಬಾಬು ಕೆರೆ ಅಧ್ವಾನದ ಬಗ್ಗೆ ವಿವರಿಸಿದರು.
‘ಕನ್ನಮಂಗಲ ಗ್ರಾಮದ ಕೆರೆಹೂಳು ಎತ್ತಲು ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ದೇಣಿಗೆ ಸಂಗ್ರಹಿಸಲು ಸಭೆ ಕರೆದಿದ್ದರು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕರೀಗೌಡರ ಬಳಿ ಕೆಂಪಲಿಂಗನಪುರ ಕೆರೆ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದೆ. ಕೆರೆ ಅಭಿವೃದ್ಧಿಗೆ ₹50 ಸಾವಿರ ದೇಣಿಗೆ ನೀಡುವಂತೆ ಸಲಹೆ ನೀಡಿದರು. ಅದರಂತೆ ನಡೆದುಕೊಂಡೆ’ ಎಂದು ನರೇಂದ್ರ ಬಾಬು ತಿಳಿಸಿದರು.
ಜಿಲ್ಲಾಧಿಕಾರಿ ಸಮ್ಮುಖದಲ್ಲಿ ದೇಣಿಗೆ ಸಂಗ್ರಹ ಮಾಡಿದಾಗ ಕೇವಲ ₹2.5ಲಕ್ಷ ಸಂಗ್ರಹವಾಯಿತು. ಅದರೂ, ಧೃತಿಗೆಡದೆ ಅಂದಾಜು ಅರ್ಧ ಕೆರೆಯನ್ನು ಅಪೋಶನ ಮಾಡಿಕೊಂಡಿದ್ದ ಜಾಲಿ ಮತ್ತು ಬಿದಿರು ತೆರವುಗೊಳಿಸಲಾಯಿತು. ಕೆರೆಮೂಲ ಸ್ವರೂಪ ಉಳಿಸಲು ಇಟ್ಟಿಗೆಗೂಡಿನ ಮಾಲೀಕರು, ಕೆರೆ ಸುತ್ತಲಿನ ತೆಂಗಿನ ತೋಟ ಮಾಲೀಕರು ಸ್ವಯಂಪ್ರೇರಿತರಾಗಿ ಹೂಳು ತಗೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಐಟಿಸಿ ಖಾಸಗಿ ಕಂಪನಿ ಸಾಮಾಜಿಕ ಹೊಣೆಗಾರಿಕೆ ಅನುದಾನದಲ್ಲಿ ₹38ಲಕ್ಷ ವೆಚ್ಚದಲ್ಲಿ ಹೂಳು ಎತ್ತುವ ಕಾಮಗಾರಿ ನಡೆಸಿದೆ. ಜಿಲ್ಲಾಧಿಕಾರಿ ಅವರು ಮತ್ತೊಂದು ಖಾಸಗಿ ಕಂಪನಿಗೆ ಜವಾಬ್ದಾರಿ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಈಗ 15ಎಕರೆಯಲ್ಲಿ ಹೂಳು ಎತ್ತಲಾಗಿದೆ. 80ಎಕರೆ ಹೂಳು ಎತ್ತಿ ಅಭಿವೃದ್ಧಿಪಡಿಸಿದರೆ ನೀರು ಸಂಗ್ರಹವಾಗಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.